Advertisement

ಕೆಎಫ್‌ಡಿ: 1.5 ಕಿಮೀ ವ್ಯಾಪ್ತಿಯಲ್ಲಿ ಲಸಿಕೆ

11:12 AM Jan 18, 2019 | |

ಸಾಗರ: ತಾಲೂಕಿನಲ್ಲಿ ಕಳೆದ 2 ತಿಂಗಳಿಂದ ಆತಂಕ ಸೃಷ್ಟಿಸಿರುವ‌ ಕೆಎಫ್‌ಡಿಗೆ ಕಾರಣವಾಗುವ ವೈರಾಣುಗಳು ತಾಲೂಕಿನ ಇನ್ನಿತರ 3 ಸ್ಥಳಗಳಲ್ಲಿನ ಮೃತ ಮಂಗಗಳ ದೇಹದಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ 3 ಗ್ರಾಪಂ ವ್ಯಾಪ್ತಿಗೂ ಭಯ ವಿಸ್ತರಿಸಿದೆ. ಪ್ರಸ್ತುತ ಲಭ್ಯವಿರುವ ಲಸಿಕೆಗಳ ಪ್ರಮಾಣವನ್ನು ಅನುಸರಿಸಿ ಕ್ಯಾಸನೂರು ಅರಣ್ಯ ಕಾಯಿಲೆ ನಿಯಂತ್ರಣ ವಿಭಾಗ ವೈರಸ್‌ ಕಾಣಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರದ ಒಂದೂವರೆ ಕಿಮೀ ವ್ಯಾಪ್ತಿಯ ಜನರಿಗೆ ಮೊದಲ ಹಂತದಲ್ಲಿ ಲಸಿಕೆ ಹಾಕಲು ತೀರ್ಮಾನಿಸಲಾಗಿದೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ.

Advertisement

ತಾಲೂಕಿನ ಪಡವಗೋಡು ಗ್ರಾಪಂ ವ್ಯಾಪ್ತಿಯ ಲಿಂಗದಹಳ್ಳಿ ಪಿಎಚ್ಸಿ ಭಾಗದ ಎಂಎಲ್‌ ಹಳ್ಳಿ, ಖಂಡಿಕಾ ಗ್ರಾಪಂನ ಸಿರಿವಂತೆ ಪಿಎಚ್ಸಿ ಮತ್ತು ಕೆಳದಿ ಗ್ರಾಪಂನ ಬಂದಗದ್ದೆ ಪಿಎಚ್ಸಿ ವ್ಯಾಪ್ತಿಯಲ್ಲಿ ಕೆಎಫ್‌ಡಿ ವೈರಾಣು ಮೃತ ಮಂಗಗಳ ಕಳೇಬರದಲ್ಲಿ ದೃಢಪಟ್ಟಿದೆ. ಲಸಿಕೆ ಪ್ರಕ್ರಿಯೆ ಕುರಿತು ಈ ಭಾಗದ ಜನರು ವಿಚಾರಿಸತೊಡಗಿದ್ದಾರೆ.

ಬಂದಗದ್ದೆ ಪಿಎಚ್ಸಿ ವ್ಯಾಪ್ತಿಯ ಹಾರೆಗೊಪ್ಪದಲ್ಲಿ ಜ. 10ರಂದು ಕಾಣಿಸಿಕೊಂಡ ಅಸ್ವಸ್ಥ ಮಂಗ 11ರಂದು ಮೃತಪಟ್ಟಿತ್ತು. ಮಂಗದ ಸ್ಯಾಂಪಲ್‌ಗ‌ಳನ್ನು ಪುಣೆಗೆ ಕಳಿಸಲಾಗಿದ್ದು. ಕೆಎಫ್‌ಡಿ ವೈರಾಣು ಪತ್ತೆಯಾಗಿ ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ ಗ್ರಾಪಂ ಜನಜಾಗೃತಿ ಕಾರ್ಯವನ್ನು ಜ. 18ರಂದು ಬೆಳಗ್ಗೆ 10ಕ್ಕೆ ಸಮುದಾಯ ಭವನದಲ್ಲಿ ಪ್ರಾರಂಭಿಸಲಿದೆ. ಕೆಳದಿ ಗ್ರಾಪಂ ವ್ಯಾಪ್ತಿ ಸುಮಾರು 3728 ಜನರು ವಾಸವಾಗಿದ್ದಾರೆ.

ಲಿಂಗದಹಳ್ಳಿ ಪಿಎಚ್ಸಿ ವ್ಯಾಪ್ತಿಯ ಎಂಎಲ್‌ಹಳ್ಳಿಯ ರಸ್ತೆ ಬದಿಗೆ ದೊರೆತ ಮಂಗವೊಂದರ ಕಳೇಬರದಲ್ಲಿ ಕೆಎಫ್‌ಡಿ ದೃಢಪಟ್ಟ ಹಿನ್ನೆಲೆಯಲ್ಲಿ ಪಡವಗೋಡು ಗ್ರಾಪಂ ಸಹ 18ರಂದು ಮಧ್ಯಾಹ್ನ 12ಕ್ಕೆ ಲಿಂಗದಹಳ್ಳಿ ಶಾಲಾವರಣದಲ್ಲಿ ಜನಜಾಗೃತಿ ಕಾರ್ಯಕ್ರಮ ಪ್ರಾರಂಭಿಸಲಿದೆ. ಸುಮಾರು 842 ಕುಟುಂಬಗಳಿರುವ ಪಡವಗೋಡು ಗ್ರಾಪಂ ವ್ಯಾಪ್ತಿ ಸುಮಾರು 3150 ಜನಸಂಖ್ಯೆ ಇದೆ. ಕರಪತ್ರ ಹಂಚಿಕೆ, ವಾಟ್ಸ್‌ಆ್ಯಪ್‌ ಮೂಲಕ ಅರಿವು ಮೂಡಿಸುವ ಕೆಲಸವನ್ನು ಪಡವಗೋಡು ಗ್ರಾಪಂ ಪ್ರಾರಂಭಿಸಿದೆ.

ಕುಗ್ವೆಯಲ್ಲಿನ ರಸ್ತೆ ಬದಿಗೆ ದೊರೆತ ಮೃತ ಮಂಗದಲ್ಲಿ ಸಹ ಕೆಎಫ್‌ಡಿ ವೈರಾಣು ದೃಢಪಟ್ಟಿದ್ದು, ಖಂಡಿಕಾ ಗ್ರಾಪಂ ವ್ಯಾಪ್ತಿಯ ಸಿರಿವಂತೆ ಪಿಎಚ್ಸಿ ಮೂಲಕ ಲಸಿಕೆ ನೀಡಿಕೆ ಕಾರ್ಯ ಪ್ರಾರಂಭವಾಗಲಿದೆ. ಗುರುವಾರ ಕೂಡ ಮಂಗಗಳ ಸಾವಿನ ಮಾಹಿತಿ ಲಭ್ಯವಾಗಿದೆ. ಹಿರೇನೆಲ್ಲೂರು ಹಾಗೂ ಬ್ಯಾಕೋಡು ಸಮೀಪದ ಮೂರುಕೈ ಎಂಬಲ್ಲಿ ತಲಾ ಒಂದು ಮಂಗ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ.

Advertisement

ಇನ್ನೂ ಇಂಡೆಂಟ್ ನೀಡಿಕೆ ಹಂತ: ಕೆಎಫ್‌ಡಿ ವೈರಾಣು ದೃಢಪಡದೆ ಲಸಿಕೆ ನೀಡಲು ಸಾಧ್ಯವಿಲ್ಲ ಎಂಬ ಕಾನೂನು ನಿಯಮದ ಹಿನ್ನೆಲೆಯಲ್ಲಿ ಈಗ ಅಗತ್ಯ ಲಸಿಕೆಗಳ ಇಂಡೆಂಟ್ ನೀಡಿಕೆ, ಗರ್ಭಿಣಿಯರ, ವೃದ್ಧರ ಹಾಗೂ 6 ವರ್ಷದ ಒಳಗಿನ ಮಕ್ಕಳ ಸಂಖ್ಯೆಗಳನ್ನು ಗುರುತಿಸಲಾಗುತ್ತಿದೆ. ಬೆಂಗಳೂರಿನ ಹೆಬ್ಟಾಳದ ಏಕೈಕ ಕೇಂದ್ರದಲ್ಲಿ ಲಸಿಕೆ ತಯಾರಾಗುತ್ತಿದ್ದು, ಏಕಕಾಲದಲ್ಲಿ ಬೃಹತ್‌ ಮೊತ್ತದ ಲಸಿಕೆ ಪೂರೈಕೆಯಾಗಬೇಕಾಗಿದೆ. ಜೊತೆಗೆ ಸಾವಿರಾರು ಲೀಟರ್‌ಗಳ ಡಿಎಂಪಿ ಆಯಿಲ್‌, ಮೆಥಾಲಿನ್‌ ಪುಡಿ ಮುಂತಾದವುಗಳ ಪೂರೈಕೆ ಸಹ ಆಗಬೇಕಾಗಿದೆ. ಸಂಬಂಧಪಟ್ಟ ಕೆಎಫ್‌ಡಿ ಅಧಿಕಾರಿಗಳು ಸಕಲ ಸಿದ್ಧತೆ ಆಗಿದೆ. ವಾರದಲ್ಲಿ ಲಸಿಕೆ ಕಾರ್ಯ ಮುಗಿಸಲಾಗುವುದು ಎನ್ನುತ್ತಿದ್ದಾರೆ.

ರಸ್ತೆ ಬದಿಗೆ ಅಸ್ವಸ್ಥ ಮಂಗಗಳ ಸಾವು ವೈರಾಣು ಪತ್ತೆಗೆ ಸಹಕಾರಿಯಾಗಿದೆ. ಕೆಎಫ್‌ಡಿ ವೈರಾಣು ಪತ್ತೆಯಾದ 3 ಮಂಗಗಳಲ್ಲಿ 2 ಮಂಗಗಳ ಕಳೇಬರಗಳು ರಸ್ತೆ ಬದಿಗೆ ದೊರಕಿದ್ದವು. ರೋಗ ಪೀಡಿತ ಮಂಗಗಳು ದಟ್ಟ ಕಾಡಿನಲ್ಲಿ ಮೃತಪಟ್ಟಿದ್ದರೆ ವೈರಾಣು ಪತ್ತೆ ವಿಳಂಬವಾಗುತ್ತಿತ್ತು. ರಸ್ತೆ ಬದಿಗೆ ಮೃತ ಮಂಗಗಳ ಕಳೇಬರ ದೊರಕಿದ್ದರಿಂದ ಬೇಗನೆ ರೋಗ ಪತ್ತೆಯಾಗಿದೆ.
•ಡಾ| ಎನ್‌.ಎಚ್. ಶ್ರೀಪಾದ ರಾವ್‌, ಸಹಾಯಕ ನಿರ್ದೇಶಕರು, ಪಶು ಇಲಾಖೆ, ಸಾಗರ.

ಕೆಎಫ್‌ಡಿ ವೈರಾಣು ಮಂಗಗಳ ದೇಹದಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಕುಗ್ವೆ, ಹಾರೇಗೊಪ್ಪ ಮತ್ತು ಎಂಎಲ್‌ಹಳ್ಳಿ ವ್ಯಾಪ್ತಿ ಸರ್ವೆ ಮಾಡಿ, ಕೆಎಫ್‌ಡಿ ವಿಭಾಗಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಪಿಎಚ್ಸಿ ವ್ಯಾಪ್ತಿಯ ವೈದ್ಯರು ಮೈಕ್ರೋಪ್ಲ್ಯಾನ್‌ ಮಾಡಿ, ಬೂತ್‌ ಸಂಖ್ಯೆ, ಸಿಬ್ಬಂದಿಗಳ ಅಗತ್ಯ, ವಾಹನಗಳು, ಮಾರ್ಗ ಇತ್ಯಾದಿ ವ್ಯವಸ್ಥೆ ಮಾಡಲಾಗುವುದು.
•ಡಾ| ಮುನಿವೆಂಕಟರಾಜು, ತಾಲೂಕು ಆರೋಗ್ಯಾಧಿಕಾರಿ, ಸಾಗರ

ಮಂಗಗಳ ಕಳೇಬರದಲ್ಲಿ ಕೆಎಫ್‌ಡಿ ವೈರಾಣು ಪತ್ತೆಯಾದ ಸಾಗರ ತಾಲೂಕಿನ 3 ಕಡೆಗಳಲ್ಲಿ ಮನುಷ್ಯರಲ್ಲಿ ಜ್ವರದ ಪ್ರಕರಣದ ಸರ್ವೇ ಮಾಡಲಾಗುತ್ತದೆ. ಜನರು ಹೆದರುವ ಅಗತ್ಯವಿಲ್ಲ. ರಾಜ್ಯದ ನಾನಾ ಭಾಗಗಳಲ್ಲಿ ಲಸಿಕೆ ಬೇಡಿಕೆ ಇದ್ದು, ಆಯಾ ಜಿಲ್ಲಾಧಿಕಾರಿ ವ್ಯಾಪ್ತಿಯಲ್ಲಿ ಸುಮಾರು 15,000 ಲಸಿಕೆಯನ್ನು 10 ಲಕ್ಷ ರೂ. ಮೌಲ್ಯದಲ್ಲಿ ಖರೀದಿಸಲು ವ್ಯವಸ್ಥೆ ಮಾಡಲಾಗಿದೆ. ಆಯಾ ಜಿಲ್ಲೆಯ ಡಿಎಚ್ಒಗಳು ಖರೀದಿಸುತ್ತಾರೆ. ಡಿಎಂಪಿ ಎಣ್ಣೆ ಸಹ ಸಾಕಷ್ಟು ಸಂಗ್ರಹ ಇದೆ. ಫೆಬ್ರವರಿ ಮೊದಲ ವಾರದಲ್ಲಿ ಮತ್ತೂಂದು ಬ್ಯಾಚ್ ಲಸಿಕೆ ಖರೀದಿಸಲಾಗುತ್ತದೆ. ಕೆಎಫ್‌ಡಿ ವೈರಾಣು ಪತ್ತೆಯಾದ ಭಾಗಗಳಲ್ಲಿ ರಿಸ್ಕ್ ಗಮನಿಸಿ ಲಸಿಕೆ ನೀಡಲಾಗುವುದು.
•ಡಾ| ರವಿಕುಮಾರ, ಉಪ ನಿರ್ದೇಶಕರು, ಕೆಎಫ್‌ಡಿ ನಿಯಂತ್ರಣ ವಿಭಾಗ

ಮಾರ್ಗಸೂಚಿ ಪ್ರಕಾರ ವೈರಾಣು ಪತ್ತೆಯಾದ 5 ಕಿಮೀ ವ್ಯಾಪ್ತಿ ಲಸಿಕೆ ನೀಡಬೇಕು. ಈ ಕುರಿತು ಕ್ರಿಯಾಯೋಜನೆ ರೂಪಿಸಿ, ಅಗತ್ಯ ಬೇಡಿಕೆಯನ್ನು ಕೆಎಫ್‌ಡಿ ವಿಭಾಗಕ್ಕೆ ನೀಡಲಾಗಿದೆ.
ಸುರೇಶ ಜವಳಿ, ಹಿರಿಯ ಆರೋಗ್ಯ ಪರೀಕ್ಷಕರು, ಸಾಗರ

Advertisement

Udayavani is now on Telegram. Click here to join our channel and stay updated with the latest news.

Next