Advertisement

ಕೆಎಫ್‌ಡಿ ಆತಂಕಕ್ಕೆ ಮತ್ತೆ ಮುನ್ನುಡಿ; ಉಣುಗುಗಳಲ್ಲಿ ವೈರಾಣು ಪತ್ತೆ

12:08 PM Jan 19, 2022 | Suhan S |

ಸಾಗರ: ತಾಲೂಕಿನ ಅರಳಗೋಡು, ಉಳ್ಳೂರು ಸೇರಿದಂತೆ ಜಿಲ್ಲೆಯ ಹೊಸನಗರ, ತೀರ್ಥಹಳ್ಳಿ ಇನ್ನಿತರ ಭಾಗಗಳಲ್ಲಿ ಸಾವುನೋವುಗಳಿಗೆ ಕಾರಣವಾಗಿರುವ ಕ್ಯಾಸನೂರು ಮಂಗನ ಖಾಯಿಲೆ ಸಂಬಂಧ ರೋಗಕಾರಕ ವೈರಾಣು ಉಣುಗುಗಳಲ್ಲಿ ಪತ್ತೆಯಾಗಿದೆ.

Advertisement

ಅರಳಗೋಡು ಗ್ರಾಪಂ ವ್ಯಾಪ್ತಿಯ ಮಂಡವಳ್ಳಿ, ಮುಪ್ಪಾನೆ, ಬಣ್ಣಮನೆ ಅಲ್ಲದೆ ಉಳ್ಳೂರು ಇನ್ನಿತರ ಸ್ಥಳಗಳಲ್ಲಿನ ಉಣುಗುಗಳನ್ನು ಮುಂಜಾಗ್ರತೆಯ ಕ್ರಮವಾಗಿ ಸಂಗ್ರಹಿಸಿ ಜ. 13ರಂದು ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಈ ಸಂಬಂಧವಾಗಿ ಮಂಗಳವಾರ ವರದಿ ಬಂದಿದ್ದು, ಕಾಯಿಲೆಯ ಪ್ರಸರಣಕ್ಕೆ ಕಾರಣವಾಗುವ ಉಣುಗುಗಳಲ್ಲಿ  ಕೆಎಫ್‌ಡಿ ಪಾಸಿಟೀವ್ ದೃಢಪಟ್ಟಿದೆ. 2021ನೇ ಸಾಲಿನ ಕೊನೆಯ ತಿಂಗಳುಗಳಲ್ಲಿ ತ್ಯಾಗರ್ತಿ ವ್ಯಾಪ್ತಿಯಲ್ಲಿ ಮಾತ್ರ ಓರ್ವ ಯುವಕನಲ್ಲಿ ಕೆಎಫ್‌ಡಿ ದೃಢಪಟ್ಟ ನಂತರ ಮತ್ತೆಲ್ಲೂ ಮಾನವರಲ್ಲಿ ಕೆಎಫ್‌ಡಿ ಕಾಣಿಸಿರಲಿಲ್ಲ. ಈಗ ಉಣುಗುಗಳಲ್ಲಿ ಪತ್ತೆಯಾಗಿದ್ದು, ಹಿಂದೆ ದಾಖಲಾದ ವೈರಾಣುಗಳಿಗಿಂತಲೂ ಶೇ. 3 ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಅಪಾಯಕಾರಿ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಅರಳಗೋಡಿನಲ್ಲಿ ಜನಜಾಗೃತಿ ಸಭೆ: ಉಣುಗುಗಳಲ್ಲಿ ಕೆಎಫ್‌ಡಿ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮಂಗಳವಾರ ತಾಲೂಕಿನ ಅರಳಗೋಡಿನ ಗ್ರಾಪಂ ಕಾರ‍್ಯಾಲಯದಲ್ಲಿ ಆರೋಗ್ಯ ಇಲಾಖೆ, ಕೆಎಫ್‌ಡಿ ವಿಭಾಗ ಮತ್ತಿತರ ಇಲಾಖೆಗಳ ಸಹಯೋಗದಲ್ಲಿ ಜನಜಾಗೃತಿ ಸಭೆ ಹಮ್ಮಿಕೊಳ್ಳಲಾಯಿತು.

ಜಿಲ್ಲಾ ಕ್ರಿಮಿ ಮತ್ತು ಪರಮಾಣು ಪ್ರಯೋಗಾಲಯದ ಮುಖ್ಯಸ್ಥ ಡಾ. ದರ್ಶನ್ ಮಾತನಾಡಿ, ಮಂಗನ ಕಾಯಿಲೆಯ ನಿಯಂತ್ರಣ ಸಂಬಂಧ ಇಲಾಖೆ ಸರ್ವ ಸಿದ್ಧತೆ ನಡೆಸಿದೆ. ಗ್ರಾಮೀಣ ನಿವಾಸಿಗಳು ಆತಂಕ ಪಡುವ ಅಗತ್ಯವಿಲ್ಲ. ಲಸಿಕೆ ಪಡೆದುಕೊಳ್ಳುವುದು, ಕಡ್ಡಾಯವಾಗಿ ಡಿಎಂಪಿ ತೈಲ ಬಳಸುವುದು ಮುಂತಾದ ಮುಂಜಾಗೃತಾ ಕ್ರಮಗಳನ್ನು ಪಾಲಿಸಬೇಕು. ಡಿಆರ್‌ಡಿಒದಲ್ಲಿ ಬಳಸುವ ವಿಶೇಷವಾದ ಡಿಎಂಪಿ ತೈಲವನ್ನು ಈ ಭಾಗದಲ್ಲಿ ವಿತರಿಸುವ ಸಂಬಂಧ ಬೇಡಿಕೆ ಸಲ್ಲಿಸಲಾಗಿದೆ ಎಂದರು.

ಉಣುಗುಗಳಲ್ಲಿ ಈಗ ದೃಢಪಟ್ಟಿರುವ ಕೆಎಫ್‌ಡಿ ವೈರಾಣು ಶೇ. 3ರಷ್ಟು ಹೆಚ್ಚು ಅಪಾಯಕಾರಿಯಾಗಿದೆ. ಅಲ್ಲದೆ ಹಿಂದೆ ಕಂಡುಬಂದಿರುವ ವೈರಾಣುಗಳಿಗಿಂತಲೂ ದುಷ್ಪರಿಣಾಮದಲ್ಲಿ ಹೆಚ್ಚಿನ ಶಕ್ತಿಶಾಲಿಯಾಗಿರುವುದರಿಂದ ಸಾರ್ವಜನಿಕರು ನಿರ್ಲಕ್ಷ್ಯ ಮಾಡಬಾರದು ಎಂದರು.

Advertisement

ಅರಳಗೋಡು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ವೀರಭದ್ರಪ್ಪ, ಗ್ರಾಪಂ ಅಧ್ಯಕ್ಷ ಮೇಘರಾಜ್ ಮಾತನಾಡಿದರು. ಉಪಾಧ್ಯಕ್ಷೆ ಲಕ್ಷ್ಮೀ ಕೃಷ್ಣಮೂರ್ತಿ,  ಸದಸ್ಯರಾದ ರಾಜೇಶ ಅಲಗೋಡು, ಸೋಮವತಿ ಮಹಾವೀರ, ಲಕ್ಷ್ಮೀ ದಿನೇಶ, ಕೆಎಫ್‌ಡಿ ವೈದ್ಯಾಧಿಕಾರಿ ಡಾ. ರವೀಂದ್ರ, ಸಿಆರ್‌ಪಿ ಬಾಲಕೃಷ್ಣ, ಪಿಎಚ್‌ಸಿಯ ಪುಷ್ಪಾ, ಭರತ್, ಅಂಗನವಾಡಿ, ಆಶಾ ಕಾರ‍್ಯಕರ್ತೆಯರು, ಗ್ರಾಪಂ ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next