ಸಾಗರ: ತಾಲೂಕಿನ ಕಾರ್ಗಲ್ ಸಮೀಪದ ಯಲ್ಲಮ್ಮ ಗುಡ್ಡದಲ್ಲಿ ಮಹಿಳೆಯೊಬ್ಬರಿಗೆ ಕ್ಯಾಸನೂರು ಅರಣ್ಯ ಕಾಯಿಲೆಯ ವೈರಸ್ ಸೋಂಕು ಇರುವುದು ದೃಢಪಟ್ಟಿದ್ದು, ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.
ಯಲ್ಲಮ್ಮ ಗುಡ್ಡದ ನಿವಾಸಿ ಸೀಮಾ ಬಾನು ಅವರಿಗೆ ತಲೆನೋವು, ಜ್ವರ, ಶೀತ, ನೆಗಡಿ, ಕೆಮ್ಮು, ಕಣ್ಣು ನೋವು ಕಾಣಿಸಿಕೊಂಡಿತ್ತು. ಸರ್ಕಾರಿ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿ ಪರೀಕ್ಷೆ ಮಾಡಿದಾಗ ಕೆಎಫ್‌ಡಿ ಸೋಂಕು ದೃಢಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕಾರ್ಗಲ್ ಆಸ್ಪತ್ರೆಗೆ ಸೀಮಾ ಬಾನು ಚಿಕಿತ್ಸೆಗೆ ಬಂದಾಗ ಶುಶ್ರೂಷಕಿಯರು ಜಿಲ್ಲಾ ವೈರಾಣು ಪರೀಕ್ಷಾ ಕೇಂದ್ರಕ್ಕೆ ಅವರ ರಕ್ತದ ಮಾದರಿ ಕಳುಹಿಸಿದ್ದರು. ಅವರಿಗೆ ಕೆಎಫ್‌ಡಿ ಸೋಂಕು ಈಗ ಧೃಢಪಟ್ಟಿದೆ.
ಸೀಮಾ ಬಾನು ಕೆಎಫ್‌ಡಿ ರೋಗ ನಿರೋಧಕ ಲಸಿಕೆ ಪಡೆದಿರಲಿಲ್ಲ. ಸೋಂಕು ದೃಢಪಟ್ಟಿರುವ ಯಲ್ಲಮ್ಮ ಗುಡ್ಡದ ಸುತ್ತಲಿನ ಪ್ರದೇಶಗಳಲ್ಲಿ ಈಗಾಗಲೇ 60ಕ್ಕೂ ಹೆಚ್ಚು ಜನರಿಗೆ ರೋಗ ನಿರೋಧಕ ಲಸಿಕೆ ನೀಡಲಾಗಿದೆ. ಕೊರೊನಾ ಲಸಿಕೆ ಎರಡೂ ಡೋಸ್ ಪಡೆದವರನ್ನು ಗುರುತಿಸಿ ಕೆಎಫ್‌ಡಿ ರೋಗ ನಿರೋಧಕ ಲಸಿಕೆ ನೀಡಲಾಗುತ್ತಿದೆ. ಆ ಭಾಗದ ಪ್ರತಿ ಮನೆಗೂ ಡಿಎಂಪಿ ತೈಲ ಪೂರೈಸಲಾಗಿದೆ. ಕಾಡಿನ ಅಂಚಿನ ಪ್ರದೇಶದಲ್ಲಿ ವಾಸ ಮಾಡುತ್ತಿರುವವರು ಕಡ್ಡಾಯವಾಗಿ ದ್ರಾವಣವನ್ನು ಲೇಪನ ಮಾಡಿಕೊಳ್ಳಬೇಕು. ರಕ್ತದೊತ್ತಡ ಮತ್ತು ಮಧುಮೇಹ ಉಳ್ಳವರಲ್ಲಿ ರೋಗ ಲಕ್ಷಣ ಕಂಡುಬಂದಲ್ಲಿ ಕೂಡಲೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಅಥವಾ ಆರೋಗ್ಯ ಇಲಾಖೆಯ ಶುಶ್ರೂಷಕಿಯರನ್ನು ಸಂಪರ್ಕಿಸಬೇಕು ಎಂದು ಕೆಎಫ್‌ಡಿ ತಜ್ಞ ಡಾ. ರವೀಂದ್ರ ಹೇಳಿದರು.
ಇದನ್ನೂ ಓದಿ : ವೇಣೂರು ಪೆರ್ಮುಡ ಸೂರ್ಯ – ಚಂದ್ರ” ಜೋಡುಕರೆ ಕಂಬಳ ಕೂಟದ ಫಲಿತಾಂಶ
ಯಲ್ಲಮ್ಮ ಗುಡ್ಡದಲ್ಲಿ ಸೋಂಕು ದೃಢಗೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಜಿಲ್ಲಾ ಆರೋಗ್ಯ ಇಲಾಖೆಯ ಸಂಪರ್ಕದೊಂದಿಗೆ ಆ ಪ್ರದೇಶದ ಸುತ್ತಮುತ್ತಲಿನ ಕಾಡಿನಂಚಿನಲ್ಲಿನ ಉಣುಗುಗಳನ್ನು ಸಂಗ್ರಹಿಸಿ ಜಿಲ್ಲಾ ವೈರಾಣು ಸಂಶೋಧನಾಲಯಕ್ಕೆ ಕಳುಹಿಸಿಕೊಡಲಾಗಿದೆ. ಕಾರ್ಗಲ್, ಜೋಗ, ಲಿಂಗನಮಕ್ಕಿ, ಹೆನ್ನಿ ಭಾಗದ ನಿವಾಸಿಗಳಿಗೆ ಮಂಗನಕಾಯಿಲೆ ನಿರೋಧಕ ಲಸಿಕೆ ನೀಡಲು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಕೊರೊನಾ ಮತ್ತು ಕೆಎಫ್‌ಡಿ ಲಸಿಕೆಗಳ ಈ ಪ್ರದೇಶದ ನಿವಾಸಿಗಳಿಗೆ ಯಾವುದೇ ರೀತಿಯ ಗೊಂದಲ ಉಂಟಾಗದಂತೆ ಆರೋಗ್ಯ ಇಲಾಖೆ ಕಾರ್ಯಕರ್ತರಿಗೆ ನಿರ್ದೇಶನ ನೀಡಲಾಗಿದೆ ಎಂದು ಕಾರ್ಗಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವೀರೇಶ್ ಸೇಠ್ ತಿಳಿಸಿದ್ದಾರೆ.