Advertisement

ಕೆಯ್ಯೂರು: ಹಾವು ಕಡಿದ ತಾಯಿಯನ್ನು ರಕ್ಷಿಸಿದ ಪುತ್ರಿ!

12:15 AM Mar 21, 2023 | Team Udayavani |

ಪುತ್ತೂರು: ನಾಗರ ಹಾವಿನ ಕಡಿತಕ್ಕೆ ಒಳಗಾದ ತಾಯಿಗೆ ಪುತ್ರಿಯೇ ಪ್ರಥಮ ಚಿಕಿತ್ಸೆ ನೀಡಿ ರಕ್ಷಿಸಿದ ಅಪರೂಪದ ಘಟನೆ ಪುತ್ತೂರು ತಾಲೂಕಿನ ಕೆಯ್ಯೂರಿನಲ್ಲಿ ನಡೆದಿದೆ.

Advertisement

ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನ ದ್ವಿತೀಯ ಬಿಸಿಎ ವಿದ್ಯಾರ್ಥಿನಿ, ಸ್ಕೌಟ್ಸ್‌ ಮತ್ತು ಗೈಡ್ಸ್ ನ ರೇಂಜರ್‌ ಕೂಡ ಆಗಿರುವ ಶ್ರಮ್ಯಾ ರೈ ಈ ಸಾಹಸಿ. ಐದು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿಯ ಸಮಯ ಪ್ರಜ್ಞೆ, ಧೈರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಬಾಯಿಯಿಂದಲೇ ವಿಷ ಹೀರಿದಳು!
ಕೆಯ್ಯೂರಿನ ತನ್ನ ಮನೆಯ ಸನಿಹದಲ್ಲೇ ಇರುವ ತಾಯಿ ಮನೆಗೆ ಶ್ರಮ್ಯಾಳ ತಾಯಿ, ಕೆಯ್ಯೂರು ಗ್ರಾ.ಪಂ. ಸದಸ್ಯೆಯಾಗಿರುವ ಮಮತಾ ರೈ ಹೋಗಿದ್ದರು. ಅಲ್ಲಿ ಪಂಪ್‌ ಸ್ವಿಚ್‌ ಹಾಕಲೆಂದು ಮಮತಾ ರೈ ಅವರು ತೋಟಕ್ಕೆ ತೆರಳಿದ್ದರು. ಸ್ವಿಚ್‌ ಹಾಕಿ ಮರಳಿ ಬರುತ್ತಿರುವಾಗ ಕೆರೆಯ ಪಕ್ಕದಲ್ಲಿ ನಾಗರಹಾವನ್ನು ತುಳಿದಿದ್ದು, ಹಾವು ಅವರಿಗೆ ಕಚ್ಚಿತ್ತು. ಅವರು ತತ್‌ಕ್ಷಣ ಮನೆಗೆ ಮರಳಿ ಕೆಲಸದಾಳಿನ ಸಹಾಯದಿಂದ ಹಾವು ಕಚ್ಚಿದ ಸ್ಥಳದಿಂದ ಮೇಲ್ಭಾಗಕ್ಕೆ ವಿಷ ಏರದಂತೆ ಬೈ ಹುಲ್ಲು ಕಟ್ಟಿದ್ದರು. ಆದರೆ ಇದು ಹೆಚ್ಚು ಪ್ರಯೋಜನಕಾರಿ ಆಗಲಾರದು ಎಂದರಿತ ಶ್ರಮ್ಯಾ ರೈ ಹಾವು ಕಚ್ಚಿದ ಸ್ಥಳದಲ್ಲಿ ಬಾಯಿಯೂರಿ, ಹೀರಿ ವಿಷ ತೆಗೆದಿದ್ದಾರೆ. ಅದಾದ ಬಳಿಕ ಮಮತಾ ರೈ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಶ್ರಮ್ಯಾಳ ಸಮಯಪ್ರಜ್ಞೆಯಿಂದಾಗಿ ಮಮತಾ ರೈ ಅವರು ಯಾವುದೇ ತೊಂದರೆ ಇಲ್ಲದೆ ಪಾರಾಗಿದ್ದಾರೆ.

“ಹಾವು ಕಚ್ಚಿದ ವಿಚಾರ ವನ್ನು ತಾಯಿ ಹೇಳಿದರು. ಬೈಹುಲ್ಲು ಕಟ್ಟಿದರೂ ನನಗೆ ವಿಶ್ವಾಸ ಮೂಡದ ಕಾರಣ ಬಾಯಿಯಿಂದಲೇ ಹೀರಿ ವಿಷ ತೆಗೆದು ಹಾಕಿದೆ. ಆಸ್ಪತ್ರೆಯಲ್ಲಿ ವೈದ್ಯರು ವಿಷ ತೆಗೆದದ್ದು ಒಳ್ಳೆಯದಾಯಿತು ಎಂದಿದ್ದಾರೆ. ಇದು ನನ್ನ ಮೊದಲ ಅನುಭವ. ಕೇಳಿ, ಸಿನೆಮಾಗಳಲ್ಲಿ ನೋಡಿ ತಿಳಿದಿದ್ದ ಮಾಹಿತಿಯ ಆಧಾರದಲ್ಲಿ ಇಂಥ ಪ್ರಥಮ ಚಿಕಿತ್ಸೆ ನಡೆಸುವ ಧೈರ್ಯ ಮಾಡಿದೆ’ ಎಂದು ಶ್ರಮ್ಯಾ ರೈ “ಉದಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next