Advertisement

ಪರಿಶ್ರಮಿ ಅಜ್ಜಿ ಕಟ್ಟಿದ ಕಲ್ಲಿನ ಕೋಟೆ; ಕೆರ್ವಾಶೆಯ ಸುಲೋಚನಮ್ಮನ ವಿಸ್ಮಯಕಾರಿ ಸಾಹಸ

09:55 AM Jan 24, 2022 | Team Udayavani |

ಕಾರ್ಕಳ: ಇಲ್ಲಿನ ಕೆರ್ವಾಶೆ ಕ್ವಾರ್ಟರ್ಸ್‌ ನಿವಾಸಿ, 80ರ ಆಸುಪಾಸಿನ ಅಜ್ಜಿ ಸುಲೋಚನಮ್ಮ ಕಾಡು ಕಲ್ಲುಗಳನ್ನು ಬಳಸಿ ಮನೆಯ ಸುತ್ತ ಎತ್ತರದ ಪ್ರಾಕಾರ ನಿರ್ಮಿಸಿಕೊಂಡಿದ್ದಾರೆ. ಸುಮಾರು ಒಂದು ಎಕರೆ ಜಾಗಕ್ಕೆ ಇವರು ಏಕಾಂಗಿಯಾಗಿ ಕಟ್ಟಿದ ಕಲ್ಲಿನ ಕೋಟೆ ಅಚ್ಚರಿ ಮೂಡಿಸುತ್ತದೆ.

Advertisement

ಕೆಲವು ವರ್ಷಗಳ ಹಿಂದೆ ಉತ್ತರ ಕನ್ನಡದ ಶಿರಸಿಯಲ್ಲಿ ಮಹಿಳೆಯೊಬ್ಬರು ಬರಗಾಲದಲ್ಲಿ ಏಕಾಂಗಿಯಾಗಿ ಬಾವಿ ತೋಡಿ ಜೀವ ಜಲ ಹರಿಸಿ ದೇಶಾದ್ಯಂತ ಸುದ್ದಿಯಾಗಿದ್ದರು. ಇಂತಹುದೇ ಸಾಹಸ ಈ ಅಜ್ಜಿಯದು. ಬಾಗಿದ ಬೆನ್ನು, ಸುಕ್ಕುಗಟ್ಟಿದ ಚರ್ಮದ ಅಜ್ಜಿ ಸುಲೋಚಮ್ಮನ ಕಲ್ಲಿನ ಮಹಾಗೋಡೆಯ ಸಾಧನೆ ಹೀಗಿದೆ.

ಸುಲೋಚನಮ್ಮ ಅವರಿಗೆ ಈಗ 80ರ ಆಸುಪಾಸಿನ ಇಳಿ ವಯಸ್ಸು. ಪತಿ 15 ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ. ಇವರಿಗೆ ನಾಲ್ವರು ಮಕ್ಕಳು. ಓರ್ವ ಮಗ ಮೂರು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಇನ್ನೋರ್ವರು ಉದ್ಯೋಗ ದಲ್ಲಿದ್ದಾರೆ. ಇಬ್ಬರು ಪುತ್ರಿಯರಿಗೆ ವಿವಾಹವಾಗಿದೆ.

ದೈಹಿಕ ಶಕ್ತಿ ಕ್ಷೀಣಿಸುತ್ತಿದ್ದರೂ ಸುಲೋಚನಮ್ಮ ಶ್ರಮ ಜೀವಿ. ತಮ್ಮ 40ರ ವಯಸ್ಸಿನಲ್ಲಿ ಸುತ್ತಮುತ್ತಲಿಂದ ಕಾಡು ಕಲ್ಲುಗಳನ್ನು ಸಂಗ್ರಹಿಸಿ ತಂದು ಗೋಡೆ ಕಟ್ಟುವ ಕಾಯಕ ಆರಂಭಿಸಿದ್ದರು. ಈ ಪರಿಶ್ರಮವನ್ನು ನಿರಂತರವಾಗಿ ಮುಂದುವರಿಸಿಕೊಂಡು ಬಂದುದರ ಫ‌ಲವಾಗಿ ಈಗ ಮಹಾಗೋಡೆಯೇ ನಿರ್ಮಾಣವಾಗಿದೆ. ಸುಮಾರು 5-6 ಅಡಿ ಎತ್ತರದ, ಸಾವಿರಾರು ಸಾವಿರಾರು ಕಲ್ಲುಗಳ ಮಹಾಗೋಡೆ ಗಟ್ಟಿಮುಟ್ಟಾಗಿದೆ. ಅದರ ಮೇಲೆ ಹತ್ತಿದರೂ ಜರಿದು ಬೀಳುವುದಿಲ್ಲ.

ಕೋಟೆಯನ್ನೇ ಹೋಲುವ ಗೋಡೆ
ಸುಲೋಚನಮ್ಮ ಕಟ್ಟಿದ ಪ್ರಾಕಾರ ಮೇಲ್ನೋಟಕ್ಕೆ ಕೋಟೆಯ ತರಹ ಕಾಣುತ್ತದೆ. ನಿಶ್ಚಿತ ಆಕಾರವಿಲ್ಲದ ಕಲ್ಲುಗಳನ್ನು ಪೇರಿಸಿದ ಕೈಚಳಕ ಬೆರಗು ಮೂಡಿಸುತ್ತದೆ. ಈ ಕೌಶಲ ಅವರಿಗೆ ಅಭ್ಯಾಸ ಬಲದಿಂದಲೇ ಬಂದುದು. ಕಲ್ಲುಗಳು ಒಂದಕ್ಕೊಂದು ಅಂಟಿ ನಿಲ್ಲಲು ಮಣ್ಣನ್ನಷ್ಟೇ ಬಳಸಲಾಗಿದೆ. ಆದರೆ ಗೋಡೆ ಮಳೆ, ಗಾಳಿಗೂ ಕುಸಿದಿಲ್ಲ. ಪಾಚಿ ಬೆಳೆದಿರುವುದು ಬಿಟ್ಟರೆ ಗೋಡೆಗೆ ಯಾವ ಹಾನಿಯೂ ಆಗಿಲ್ಲ.

Advertisement

ಮೂಗಿನ ಮೇಲೆ ಕೈ
ಇರಿಸುವಷ್ಟು ಕುತೂಹಲ
ಮನೆ ಮುಂದಿನ ಮರದ ಗೇಟು ತೆರೆದು ಒಳಪ್ರವೇಶಿಸಿದರೆ ಒಳಗೆ ಮತ್ತಷ್ಟು ಕಲ್ಲುಗಳ ರಚನೆ ಅಚ್ಚರಿ ತರಿಸುತ್ತದೆ. ಒಳಗೆ, ಅಂಗಳದ ಅಲ್ಲಲ್ಲಿ ಚೌಕಾಕಾರದಲ್ಲಿ ಕಲ್ಲುಗಳನ್ನು ಪೇರಿಸಿ ವಿವಿಧ ವಸ್ತುಗಳನ್ನು ಇರಿಸಲು ವೇದಿಕೆಯಂತೆ ನಿರ್ಮಿಸಿದ್ದಾರೆ.

ಬಾಲ್ಯದಿಂದಲೇ ಕಲ್ಲುಗಳ ಪ್ರೀತಿ
ಸುಲೋಚನಮ್ಮ ಅವರಿಗೆ ಬಾಲ್ಯದಿಂದಲೂ ಕಲ್ಲುಗಳ ಬಗ್ಗೆ ಅಪಾರ ಪ್ರೀತಿ. ಸುತ್ತಮುತ್ತ ಎಲ್ಲೇ ಹೋದರೂ ಸಿಕ್ಕ ಕಲ್ಲುಗಳನ್ನು ತಂದು ರಾಶಿ ಹಾಕಿ ಜೋಡಿಸುತ್ತಿದ್ದರು. ಹಿಂದೆ ಕೂಡುಕುಟುಂಬವಿದ್ದಾಗಲೂ ಇದೇ ರೀತಿ ಕಲ್ಲಿನ ಗೋಡೆ ನಿರ್ಮಿಸಿದ್ದರಂತೆ. ಅದೇ ಹವ್ಯಾಸವನ್ನು ಮುಂದುವರಿಸಿ ತಮ್ಮ ಮನೆ, ಜಾಗಕ್ಕೆ ಕಲ್ಲಿನ ಗೋಡೆಯ ಕವಚ ನಿರ್ಮಿಸಿಕೊಂಡಿದ್ದಾರೆ.

ಮನೆಯಿಂದ ಹೊರಗೆ ಹೋದಾಗ ಸಿಕ್ಕ ಕಲ್ಲುಗಳನ್ನು ಹೆಕ್ಕಿ ತಂದು ಜೋಡಿಸಿ ಕಟ್ಟುತ್ತಿದ್ದೆ. ಮೊದಲಿಗೆಲ್ಲ ಅದು ನಿಲ್ಲುತ್ತಿರಲಿಲ್ಲ. ಮತ್ತೆ ಮತ್ತೆ ಪ್ರಯತ್ನಿಸಿದ ಮೇಲೆ ನಿಂತಿತು. ಹೀಗೆ ನಿರ್ಮಿಸಿದ ಗೋಡೆ ಈಗ ಜಾಗಕ್ಕೆ ಬೇಲಿಯೇ ಆಗಿದೆ.
– ಸುಲೋಚನಮ್ಮ

ಕಲ್ಲುಗಳನ್ನು ಅಮ್ಮನೇ ತಂದು ಗೋಡೆ ನಿರ್ಮಿಸಿದ್ದಾರೆ. ಅವರು ಶ್ರಮಜೀವಿ. ಈಗಲೂ ಅಷ್ಟೇ; ವಯಸ್ಸಾಗಿದೆ ಬೇಡ ಎಂದರೂ ಕೇಳದೆ ಕೆಲಸ ಮಾಡುವ ತುಡಿತ ವ್ಯಕ್ತಪಡಿಸುತ್ತಾರೆ.
ಸುಧೀರ್‌ (ಪುತ್ರ)

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next