ಕೆರೂರ: ಮೂರು ದಿನಗಳ ಹಿಂದೆ ಕೋಮು ಸೌಹಾರ್ದತೆ ಕದಡಿ ಉದ್ವಿಗ್ನಗೊಂಡಿದ್ದ ಪಟ್ಟಣದಲ್ಲಿ ಶಾಂತಿ, ಸುವ್ಯವಸ್ಥೆ ಕಾಯ್ದುಕೊಳ್ಳಲು ನಾಗರಿಕರಲ್ಲಿ ಧೈರ್ಯ ತುಂಬಲು ಪೊಲೀಸ್ ಇಲಾಖೆ ಶುಕ್ರವಾರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ 200ಕ್ಕೂ ಹೆಚ್ಚು ಪೊಲೀಸರು ಪರೇಡ್ ನಡೆಸಿದರು. ಸ್ಥಳೀಯ ಪೊಲೀಸ್ ಠಾಣೆ ಆವರಣದಿಂದ ಬೆಳಗ್ಗೆ ಆರಂಭಗೊಂಡ ಪೊಲೀಸ್ ಪರೇಡ್ ರಾಷ್ಟ್ರೀಯ ಹೆದ್ದಾರಿಯಿಂದ ಕಿಲ್ಲಾಗಲ್ಲಿ, ಹೊಸಪೇಟೆ, ಕಾಯಿಪಲ್ಲೆ ಮಾರ್ಕೆಟ್, ಹಳಪೇಟೆಯಿಂದ ಬಸ್ ನಿಲ್ದಾಣದ ಮೂಲಕ ಸಾಗಿತು.
ಪರೇಡ್‌ನ ನೇತೃತ್ವವನ್ನು ಜಿಲ್ಲಾ ಎಸ್ಪಿ ಜಯಪ್ರಕಾಶ ವಹಿಸಿದ್ದರು. ಡಿವೈಎಸ್‌ಪಿಗಳಾದ ಪ್ರಶಾಂತ ಮುನ್ನೋಳಿ ಹಾಗೂ ಪಾಂಡುರಂಗಯ್ಯ ಮತ್ತು 5 ಸಿಪಿಐಗಳು, 9 ಪಿಎಸ್‌ಐ, 7 ಎಎಸ್‌ಐ ಸೇರಿ ಒಟ್ಟು 229 ಪೊಲೀಸ್ ಸಿಬ್ಬಂದಿ, 2 ಕೆಎಸ್ ಆರ್‌ಪಿ ತುಕ್ಕಡಿಗಳು, ಡಿಆರ್‌ನ ಬ್ಲ್ಯಾಕ್ ಕ್ಯಾಡ್ ಪಡೆಯ ಹತ್ತಕ್ಕೂ ಹೆಚ್ಚು ಸಿಬ್ಬಂದಿ ಪಾಲ್ಗೊಂಡಿದ್ದರು.
ಮತ್ತಿಬ್ಬರ ಬಂಧನ: ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮತ್ತಿಬ್ಬರನ್ನು ಬಂಧಿಸಲಾಗಿದ್ದು, ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ 20ಕ್ಕೆ ಏರಿದೆ. ಆರೋಪಿತರ ಪತ್ತೆಗಾಗಿ ಪೊಲೀಸರ ಕಾರ್ಯಾಚರಣೆ ಹಾಗೂ ತನಿಖೆ ತೀವ್ರಗೊಂಡಿದೆ.
ಕುಳಗೇರಿಯಲ್ಲಿ ನಾಲ್ವರ ಮೇಲೆ ಹಲ್ಲೆ
ಗ್ರಾಮದ ಹೊರವಲಯದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಕೆರೂರ ಗ್ರಾಮದ ಮಳಗಲಿ ಡಾಬಾದಲ್ಲಿದ್ದ ನಾಲ್ಕೈದು ಜನರ ಮೇಲೆ ಕಿಡಗೇಡಿಗಳು ಹಾಡಹಗಲೆ ಹಲ್ಲೆ ನಡೆಸಿದ್ದಾರೆ.
ಗಲಾಟೆಯಲ್ಲಿ ರಾಜೇಸಾಬ, ಹನೀಫ್, ಮಲೀಕ್ ಸೇರಿದಂತೆ ಐದು ಜನರಿಗೆ ಗಾಯಗಳಾಗಿದ್ದು ಮೂವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕೆರೂರ ಗಲಾಟೆ ಪ್ರಕರಣ ಬೆನ್ನಲ್ಲೆ ಈ ಹಲ್ಲೆ ನಡೆದಿದ್ದು ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ. ಸದ್ಯ ಡಾಬಾ ಬಳಿ ಹೆಚ್ಚುವರಿ ಪೊಲೀಸ್ ನಿಯೋಜಿಸಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಬಿದ್ದಿದ್ದ ಬಡಿಗೆ ಹಾಗೂ ಡಾಬಾ ಪಕ್ಕದಲ್ಲಿದ್ದ ಕೋಳಿ ಫಾರ್ಮ್ನಲ್ಲಿನ ಸಿಸಿ ಕ್ಯಾಮೆರಾ ಫುಟೇಜ್ ಪಡೆದುಕೊಂಡಿದ್ದಾರೆ. ಪೊಲೀಸರು ಡಾಬಾದ ಸುತ್ತ ಹೊಲ-ಗದ್ದೆಗಳಲ್ಲಿ ಸಂಚರಿಸಿ ಮಾಹಿತಿ ಕಲೆಹಾಕಿದರು.
ಘಟನಾ ಸ್ಥಳಕ್ಕೆ ಎಸ್‌ಪಿ ಜಯಪ್ರಕಾಶ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಾಗಲಕೋಟೆ ಡಿಎಸ್‌ಪಿ ಹೊಸಹಳ್ಳಿ, ಬಾದಾಮಿ ಪ್ರಭಾರಿ ಸಿಪಿಐ ವಿಜಯ ಮುರಗುಂಟಿ, ಪಿಎಸ್‌ಐ ನೇತ್ರಾವತಿ ಪಾಟೀಲ ಸ್ಥಳದಲ್ಲಿದ್ದರು.