ಕೆರೂರ: ಪಟ್ಟಣದಲ್ಲಿರುವ ಸೋಲಾಪುರ- ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ (218) ರಸ್ತೆ ನಿರ್ಮಾಣಕ್ಕೆ ಅಡಚಣೆ ಆಗಿದ್ದ ಕೆಲವು ವಾಣಿಜ್ಯ ಅಂಗಡಿಗಳನ್ನು ಶನಿವಾರ ಬಾದಾಮಿ ತಹಶೀಲ್ದಾರ ಎಸ್.ಬಿ. ಇಂಗಳೆ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯಿತು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎರಡು ಪಥದ ಹೊಸ ರಸ್ತೆ ನಿರ್ಮಾಣ ಕಾಮಗಾರಿಯನ್ನು ಬಹುತೇಕ ಮುಗಿಸಿದ್ದು, ಆದರೆ ,ಇಲ್ಲಿನ ಬಸ್‌ನಿಲ್ದಾಣದ ಬಳಿಯಲ್ಲಿ ಎರಡು ಅಂಗಡಿಗಳು ಕಾಮಗಾರಿಗೆ ತೊಡಕಾಗಿದ್ದವು.
ತಹಶೀಲ್ದಾರ್ ಎಸ್.ಬಿ. ಇಂಗಳೆ ಹಾಗೂ ಸಿಪಿಐ ರಮೇಶ ಹಾನಾಪುರ ನೇತೃತ್ವದಲ್ಲಿ ಪಟ್ಟಣ ಪಂಚಾಯತ ಸಿಬ್ಬಂದಿ ಜೆಸಿಬಿ ಯಂತ್ರಗಳ ನೆರವಿನಿಂದ ಅಂಗಡಿಗಳನ್ನು ತೆರವು ಗೊಳಿಸಿದರು. ಕಾರ್ಯಾಚರಣೆಯಲ್ಲಿ ಬಾದಾಮಿ, ಗುಳೇದಗುಡ್ಡ, ಕೆರೂರ ಪೊಲೀಸ್ ಠಾಣೆಗಳ 40 ಕ್ಕೂ ಹೆಚ್ಚು ಸಿಬ್ಬಂದಿ ಪಾಲ್ಗೊಂಡಿದ್ದರು. ತೆರವು ಕಾಮಗಾರಿ ವೇಳೆ ಕೆರೂರ ಪಿಎಸ್‌ಐ ಸಂಜಯ ತಿಪರೆಡ್ಡಿ, ಬಾದಾಮಿ ಪಿಎಸ್‌ಐ ಪ್ರಕಾಶ ಬಣಕಾರ, ಮಹಿಳಾ ಪಿಎಸ್‌ಐ ನೂರಜಾನ ಸಾಬರ, ಉಪ ತಹಶೀಲ್ದಾರ್ ಎಂ.ಬಿ. ಮಲಕನವರ, ಪಂಚಾಯತ ಮುಖ್ಯಾಧಿಕಾರಿ ಎಂ.ವಿ. ನಡುವಿನಕೇರಿ, ಎಎಸ್‌ಐ ಐ.ಎಂ. ಹಿರೇಗೌಡ್ರ, ಎನ್.ಎಸ್. ಸೀಮಾಣಿ, ಎಚ್.ಎಂ. ಹೊಸಮನಿ, ಡಿ.ಎಚ್. ವಡ್ಡರ,ಎಂ.ಬಿ. ಪೂಜಾರ, ಎಸ್. ಎಂ. ರಾಠೊಡ, ಎಸ್.ಆರ್. ಹೊಕ್ರಾಣಿ, ರಮೇಶ ದೊಡಮನಿ, ರಮೇಶ ಅಕ್ಕಿಮರಡಿ ಹಾಗೂ ಗ್ರಾಮ ಲೆಕ್ಕಿಗ ಚಿದಾನಂದ ನದಾಫ, ಪ್ರದೀಪ ತುಳಸಿಗೇರಿ ಇದ್ದರು.