ಚೆಂಗನ್ನೂರ್: ಮನೆಯ ಸ್ನಾನದ ಕೊಠಡಿಯಲ್ಲಿ ಬಕೆಟ್‌ವೊಂದರಲ್ಲಿ ಹಾಕಲಾಗಿದ್ದ ನವಜಾತ ಶಿಶುವೊಂದು ಕೇರಳ ಪೊಲೀಸರು ಮತ್ತು ಖಾಸಗಿ ನರ್ಸಿಂಗ್ ಹೋಂ ವೈದ್ಯರ ಸಮಯಪ್ರಜ್ಞೆಯಿಂದಾಗಿ ಬದುಕುಳಿಯಲು ಸಾಧ್ಯವಾಗಿದೆ.
ಪಟ್ಟಣಂತಿಟ್ಟ ಜಿಲ್ಲೆಯ ಕೊಟ್ಟ ಎಂಬ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ತನಗೆ ತೀವ್ರ ರಕ್ತಸ್ರಾವವಾಗುತ್ತಿದ್ದು, ಚಿಕಿತ್ಸೆ ನೀಡಿ ಎಂದು ಕೋರಿ 34 ವರ್ಷದ ಮಹಿಳೆ ಚೆಂಗನ್ನೂರು ನರ್ಸಿಂಗ್ ಹೋಂಗೆ ಆಗಮಿಸಿದ್ದರು. ಆಕೆಯನ್ನು ಪರೀಕ್ಷಿಸಿದಾಗ, ಆಕೆಗೆ ಸ್ವಲ್ಪ ಹೊತ್ತಿಗೆ ಮುಂಚೆಯಷ್ಟೇ ಹೆರಿಗೆಯಾಗಿದ್ದು ವೈದ್ಯರಿಗೆ ಗೊತ್ತಾಯಿತು.
ಕೂಡಲೇ, ಮಗು ಎಲ್ಲಿದೆ ಎಂದು ಆಕೆಯನ್ನು ಪ್ರಶ್ನಿಸಲಾಯಿತು. ಮಹಿಳೆಯೊಂದಿಗೆ ಆಸ್ಪತ್ರೆಗೆ ಬಂದಿದ್ದ ಆಕೆಯ 9 ವರ್ಷದ ಮಗ, “ಮಗುವನ್ನು ಅಮ್ಮ ಮನೆಯ ಬಾತ್‌ರೂಂನಲ್ಲಿ ಬಕೆಟ್‌ಗೆ ಹಾಕಿಟ್ಟಿದ್ದಾರೆ’ ಎಂದು ಮಾಹಿತಿ ನೀಡಿದ.
ಇದನ್ನು ಕೇಳಿ ಗಾಬರಿಗೊಂಡ ಆಸ್ಪತ್ರೆಯ ಸಿಬ್ಬಂದಿ, ಸ್ವಲ್ಪವೂ ತಡಮಾಡದೇ ಆಕೆಯ ಮನೆಗೆ ಧಾವಿಸಿ, ಮಗುವನ್ನು ಎತ್ತಿಕೊಂಡು ನರ್ಸಿಂಗ್ ಹೋಂಗೆ ಶಿಫ್ಟ್ ಮಾಡಿದರು.
ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಶಿಶುವನ್ನು ಕೊಟ್ಟಾಯಂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತು. ಈ ಮೂಲಕ ಮಗುವಿನ ಜೀವವನ್ನು ಉಳಿಸಲಾಯಿತು. ಪೊಲೀಸರು ಬಾತ್‌ರೂಂನಿಂದ ಶಿಶುವನ್ನು ಎತ್ತಿಕೊಂಡು ರಸ್ತೆಗೆ ಧಾವಿಸುತ್ತಿರುವ, ಅಲ್ಲಿಂದ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.