ಪಟ್ಟಣಂತಿಟ್ಟ: ಕೇರಳದ ಪಟ್ಟಣಂತಿಟ್ಟ ಎಂಬ ಜಿಲ್ಲೆಯಲ್ಲಿರುವ ಅರಿಯೂರು ಗ್ರಾಮದ ಹೆಸರನ್ನು “ಅರಿಯೂರು ಕಥಕ್ಕಳಿ ಗ್ರಾಮಂ’ ಎಂದು ಬದಲಿಸಲಾಗಿದೆ. ಇದರ ಹಿಂದೆ 12 ವರ್ಷಗಳ ರೋಚಕ ಹೋರಾಟವಿದೆ. ಈ ಊರು ಕಥಕ್ಕಳಿಗೆ ಬಹಳ ಪ್ರಖ್ಯಾತವಾಗಿದೆ. ಇಲ್ಲಿ ಪುರಾಣಗಳ ಕಥೆಗಳನ್ನು ಮಾತ್ರವಲ್ಲ, ಬೈಬಲ್‌ನ ಕಥೆಗಳನ್ನೂ ಕಥಕ್ಕಳಿಗೆ ಅಳವಡಿಸಲಾಗಿದೆ! ಹಾಗಾಗಿ ಪಂಪಾ ನದೀ ತೀರದಲ್ಲಿರುವ ಅರಿಯೂರು ಗ್ರಾಮ ಸಂಪೂರ್ಣ ಕಥಕ್ಕಳಿಮಯವಾಗಿದೆ.
ಕಥಕ್ಕಳಿ ಎಂಬ ನೃತ್ಯಕಲೆ 300 ವರ್ಷಗಳ ಹಿಂದೆ ಕೇರಳದಲ್ಲಿ ಹುಟ್ಟಿದ್ದು. ಇದರಲ್ಲಿ ನರ್ತನ, ನಟನೆ, ಅರ್ಪಣೆ, ಸಂಗೀತ, ವಸ್ತ್ರಾಲಂಕಾರ, ಅಲಂಕಾರಗಳಿವೆ. ಪುರಾಣ ಕಥೆಗಳನ್ನು ನರ್ತನ, ಮುಖಭಾವ, ಹಾವಭಾವಗಳ ಮೂಲಕ ತೋರಿಸಲಾಗುತ್ತದೆ. ಈಗಂತೂ ಅಬ್ರಹಾಮನ ತ್ಯಾಗ, ಪೋಲಿ ಮಗ, ಮೇರಿ ಮ್ಯಾಗ್ಡಲೀನ್ ಎಂಬ ಕ್ರೈಸ್ತರಿಗೆ ಸಂಬಂಧಿಸಿದ ಕಥೆಗಳನ್ನೂ ಅಳವಡಿಸಿಕೊಳ್ಳಲಾಗಿದೆ. ಇದನ್ನು ಕ್ರೈಸ್ತ ಸಮುದಾಯವೂ ಅಷ್ಟೇ ಪ್ರೀತಿಯಿಂದ ಸ್ವೀಕರಿಸಿದೆ.
ಕಥಕ್ಕಳಿ ನರ್ತಕರ ಕುಟುಂಬದಲ್ಲಿ ಹುಟ್ಟಿದ ವಿಮಲ್‌ರಾಜ್‌ಗೆ ನರ್ತನ ಬರುವುದಿಲ್ಲ. ಆದರೆ ಅದರ ಪ್ರೇಮಿಯಾಗಿರುವ ಅವರು 1995ರಲ್ಲಿ ಕಥಕ್ಕಳಿ ಜಿಲ್ಲಾ ಕ್ಲಬ್ ಆರಂಭಿಸಿದರು. ಅವರ ವಿನಂತಿಯಂತೆ 2010ರಲ್ಲಿ ಗ್ರಾಮ ಪಂಚಾಯ್ತಿ, ಗ್ರಾಮದ ಹೆಸರನ್ನು ಬದಲಾಯಿಸುವ ನಿರ್ಣಯ ಕೈಗೊಂಡಿತು. ಅದು ಜಾರಿಯಾಗಬೇಕಾದರೆ 12 ವರ್ಷಗಳು ಬೇಕಾಯಿತು ಎಂದು ವಿಮಲ್‌ರಾಜ್ ತಿಳಿಸಿದ್ದಾರೆ.