ನವದೆಹಲಿ: ಕೇರಳದ ತಿರೂರು ವೀಳ್ಯದೆಲೆ, ತಮಿಳುನಾಡಿನ ದೇವಾಲಯವೊಂದರಲ್ಲಿ ಸಿಗುವ ಪಳನಿ ಪಂಚಮೀರ್ಥಂ ಪ್ರಸಾದ ಸೇರಿದಂತೆ ನಾಲ್ಕು ವಸ್ತುಗಳಿಗೆ ಭೌಗೋಳಿಕ ಮಾನ್ಯತೆ(ಜಿಐ) ಸಿಕ್ಕಿರುವುದಾಗಿ ಕೇಂದ್ರ ವಾಣಿಜ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.
ಇದರಿಂದಾಗಿ, ಈ ಉತ್ಪನ್ನಗಳಿಗೆ ಗರಿಷ್ಠ ಬೆಲೆ ದೊರೆಯಲಿದ್ದು, ಬೆಳೆಗಾರರಿಗೆ ನೆರವಾಗಲಿದೆ ಎಂದು ಹೇಳಲಾಗಿದೆ. ನಿರ್ದಿಷ್ಟ ಭೌಗೋಳಿಕ ಮೂಲ ಹೊಂದಿರುವ ಮತ್ತು ಆ ಮೂಲದಿಂದಾಗಿಯೇ ಪ್ರಸಿದ್ಧಿಯಾಗಿರುವಂಥ ವಸ್ತುಗಳಿಗೆ ಜಿಐ ಟ್ಯಾಗ್ ನೀಡಲಾಗುತ್ತದೆ.
ಭೌಗೋಳಿಕ ಮಾನ್ಯತೆ ಪಡೆದ ಇತರೆ ಎರಡು ವಸ್ತುಗಳೆಂದರೆ, ಮಿಜೋರಾಂನ ಮಿಜೋ ಪುವಾಂಚೆ ಮತ್ತು ತವ್ಲೋಪುವಾನ್ ಎಂಬ ವಿಶಿಷ್ಟ ಕೈಯಿಂದಲೇ ನೇಯ್ದ ವಸ್ತ್ರಗಳು.
ಕೇರಳದ ತಿರೂರು, ತನೂರು, ತಿರುರಂಗಾಡಿ, ಕುಟ್ಟಿಪ್ಪುರಂ, ಮಲಪ್ಪುರಂ ಮತ್ತು ವೆಂಗಾರಾಗಳಲ್ಲಿ ಈ ವಿಶೇಷ ವೀಳ್ಯದೆಲೆ ಬೆಳೆಯಲಾಗುತ್ತದೆ. ಔಷಧೀಯ ಗುಣಗಳಿಗೂ ಇದು ಖ್ಯಾತಿ ಪಡೆದಿದೆ.
ಇನ್ನು ತ.ನಾಡಿನ ಪಳನಿ ಹಿಲ್ಸ್ನಲ್ಲಿರುವ ಅರುಲ್ಮಿಗು ಧಂಡಾಯುತಪಾಣಿಸ್ವಾಮಿ ದೇವಾಲಯದ ಪ್ರಮುಖ ದೇವರಾದ ಧಂಡಾಯುತಪಾಣಿಸ್ವಾಮಿಯ ಅಭಿಷೇಕಕ್ಕೆ ಬಳಸುವ ವಿಶೇಷ ಪ್ರಸಾದವನ್ನು ಪಳನಿ ಪಂಚಮೀರ್ಥಂ ಎಂದು ಕರೆಯುತ್ತಾರೆ. ಬಾಳೆಹಣ್ಣು, ಬೆಲ್ಲ, ಹಸುವಿನ ತುಪ್ಪ, ಜೇನುತುಪ್ಪ ಮತ್ತು ಏಲಕ್ಕಿಯನ್ನು ಬಳಸಿ ಈ ಪ್ರಸಾದ ತಯಾರಿಸಲಾಗುತ್ತದೆ.
ಈಗಾಗಲೇ ಡಾರ್ಜಿಲಿಂಗ್ ಚಹಾ, ತಿರುಪತಿ ಲಡ್ಡು, ಕಾಶ್ಮೀರಿ ಪಶ್ಮಿನಾ, ಕಾಂಗ್ರಾ ಪೈಂಟಿಂಗ್ ಮತ್ತಿತರ ವಸ್ತುಗಳಿಗೂ ಜಿಐ ಟ್ಯಾಗ್ ಸಿಕ್ಕಿದೆ.