Advertisement

ಶಬರಿಮಲೆಯಲ್ಲಿ ಭಾರೀ ಪ್ರತಿಭಟನೆ, ಮಹಿಳಾ ಭಕ್ತರ ಮೇಲೆ ಕಲ್ಲು ತೂರಾಟ

12:28 PM Oct 17, 2018 | Team Udayavani |

ತಿರುವನಂತಪುರಂ: ಕೇರಳದ ಪ್ರಸಿದ್ಧ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ(10ರಿಂದ 50ವರ್ಷದವರು ಸೇರಿದಂತೆ) ಮಹಿಳೆಯರು ದೇವರ ದರ್ಶನ ಪಡೆಯಬಹುದು ಎಂಬ ಸುಪ್ರೀಂಕೋರ್ಟ್ ಆದೇಶದ ಬಳಿಕ ಇದೇ ಮೊದಲ ಬಾರಿಗೆ ದೇಗುಲದ ಬಾಗಿಲು ಬುಧವಾರ ಸಂಜೆ ತೆರೆಯಲಿದ್ದು, ಈ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ದೇಗುಲ ಪ್ರವೇಶಿಸಲು ಮಹಿಳೆಯರು ಸಜ್ಜಾಗಿದ್ದಾರೆ. ಮತ್ತೊಂದೆಡೆ ಹಿಂದೂಪರ ಸಂಘಟನೆಗಳು, ಬುಡಕಟ್ಟು ಜನರು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದು ತೀವ್ರ ಸ್ವರೂಪ ಪಡೆಯುತ್ತಿದೆ.

Advertisement

ಮಹಿಳಾ ಭಕ್ತರ ಪ್ರವೇಶಕ್ಕೆ ಪ್ರತಿಭಟನಾಕಾರರು ತಡೆಯೊಡ್ಡಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಎಚ್ಚರಿಕೆ ನೀಡಿದ್ದಾರೆ.

ಶಬರಿಮಲೆ ದೇವಾಲಯದಿಂದ 20 ಕಿಮೀ ದೂರದಲ್ಲಿ ಇರುವ ನೀಲಕ್ಕಲ್ ಬಳಿ ಎಲ್ಲಾ ವಾಹನಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ. ನೀಲಕ್ಕಲ್ ಬಳಿ ಪ್ರತಿಭಟನಾಕಾರರು ಮತ್ತು ಮಹಿಳಾ ಭಕ್ತರ ನಡುವೆ ವಾಗ್ವಾದ ನಡೆಯುತ್ತಿದ್ದು, ಜಟಾಪಟಿಗೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ.

ಶಬರಿಮಲೆಯಲ್ಲಿ ಬಿಗಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಹೆಚ್ಚಿನ ಭದ್ರತೆಗಾಗಿ ಡ್ರೋಣ್ ಹಾಗೂ ಹೆಲಿಕಾಪ್ಟರ್ ಅನ್ನು ಬಳಸಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಯಾವುದೇ ಕಾರಣಕ್ಕೂ ಮಹಿಳೆಯರಿಗೆ ಅಯ್ಯಪ್ಪಸ್ವಾಮಿ ದೇವಾಲಯದ ಒಳ ಪ್ರವೇಶಿಸಲು ಬಿಡುವುದಿಲ್ಲ ಎಂದು ವಿವಿಧ ಸಂಘಟನೆಗಳು, ಬುಡಕಟ್ಟು ಮಹಿಳೆಯರು ಭಾರೀ ಪ್ರತಿಭಟನೆ ನಡೆಸುತ್ತಿದ್ದರೆ, ಮತ್ತೊಂದೆಡೆ ದೇಗುಲ ಒಳ ಪ್ರವೇಶಿಸಿಯೇ ಸಿದ್ದ ಎಂದು ಮಹಿಳಾ ಭಕ್ತರು ಪೊಲೀಸ್ ಭದ್ರತೆಯಲ್ಲಿ ತೆರಳಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ವರದಿ ಹೇಳಿದೆ.

Advertisement

ಮಾರ್ಗಮಧ್ಯೆ ಪೊಲೀಸರು ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಯತ್ನಿಸುತ್ತಿದ್ದಾರೆ. ಆದರೂ ಸ್ಥಳೀಯ ಮಹಿಳೆಯರು, ಪುರುಷರು ಪ್ರತಿಭಟನೆ ಮುಂದುವರಿಸಿದ್ದಾರೆ.

ಉದ್ರಿಕ್ತ ಪ್ರತಿಭಟನಾಕಾರರಿಂದ ಕಲ್ಲೆಸೆತ:

ಶಬರಿಮಲೆಗೆ ತೆರಳಬೇಕಿದ್ದರೆ ಮೊದಲು ಗಡಿಭಾಗವಾದ ನೀಲಕ್ಕಲ್ ದಾಟಿ ನಂತರ ಪಂಪ ನದಿಯಲ್ಲಿ ಸ್ನಾನ ಮಾಡಿ ಬೆಟ್ಟ ಹತ್ತಿ ಶಬರಿಮಲೆ ದೇವಾಲಯಕ್ಕೆ ತೆರಳಬೇಕು. ಈ ನಿಟ್ಟಿನಲ್ಲಿ ಪ್ರತಿಭಟನಾಕಾರರು ಮಹಿಳೆಯರನ್ನು ತಡೆಯುವ ನಿಟ್ಟಿನಲ್ಲಿ ಮಂಗಳವಾರ ಸಂಜೆಯಿಂದ ನೀಲಕ್ಕಲ್ ನಲ್ಲಿ ಠಿಕಾಣಿ ಹೂಡಿದ್ದು, ಈ ಸಂದರ್ಭದಲ್ಲಿ ಮಹಿಳಾ ಭಕ್ತರ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ವರದಿಯಾಗಿದೆ. ಏತನ್ಮಧ್ಯೆ ಪತ್ರಕರ್ತೆಯೊಬ್ಬರ ಮೇಲೆ ಕಲ್ಲುತೂರಾಟ ನಡೆಸಿದ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next