ತಿರುವನಂತಪುರ: ಇದೇ ಸೆಪ್ಟಂಬರ್ ಕೊನೆಯಲ್ಲಿ ಕ್ರಿಕೆಟ್ ನಿಷೇಧದಿಂದ ಮುಕ್ತರಾಗುವ ಪೇಸ್ ಬೌಲರ್ ಎಸ್. ಶ್ರೀಶಾಂತ್ ಕೇರಳ ರಣಜಿ ತಂಡದ ಆಯ್ಕೆಗೆ ಲಭ್ಯರಾಗಲಿದ್ದಾರೆ ಎಂದು ಕೋಚ್ ಟಿನು ಯೋಹಾನನ್ ಹೇಳಿದ್ದಾರೆ.
ಅಲ್ಲದೇ ಶ್ರೀಶಾಂತ್ ಫಿಟ್‌ನೆಸ್ ಪರೀಕ್ಷೆಯಲ್ಲೂ ತೇರ್ಗಡೆಯಾಗುವ ವಿಶ್ವಾಸವಿದೆ ಎಂದಿದ್ದಾರೆ.
ಐಪಿಎಲ್ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾದ ಕಾರಣಕ್ಕೆ 2013ರ ಆಗಸ್ಟ್‌ನಲ್ಲಿ ಶ್ರೀಶಾಂತ್ ಅವರಿಗೆ ಬಿಸಿಸಿಐ ಆಜೀವ ನಿಷೇಧ ವಿಧಿಸಿತ್ತು. ಆದರೆ ಕಳೆದ ವರ್ಷ ಬಿಸಿಸಿಐ ಒಂಬುಡ್ಸ್‌ಮನ್ ಡಿ.ಕೆ. ಜೈನ್ ಈ ಶಿಕ್ಷೆಯನ್ನು 7 ವರ್ಷಕ್ಕೆ ಇಳಿಸಿದ್ದರು.
“ಶ್ರೀಶಾಂತ್ ಅವರನ್ನು ಈ ವರ್ಷದ ರಣಜಿಗೆ ಪರಿಗಣಿಸಲಾಗುವುದು. ಅವರು ಮತ್ತೆ ಕೇರಳ ಪರ ಆಡುವುದನ್ನು ಎದುರು ನೋಡುತ್ತಿದ್ದೇವೆ. ಇದು ಕೇರಳದ ಪ್ರತಿಯೊಬ್ಬರ ನಿರೀಕ್ಷೆಯೂ ಆಗಿದೆ. ಇದರಿಂದ ತಂಡ ಇನ್ನಷ್ಟು ಬಲಗೊಳ್ಳಲಿದೆ’ ಎಂಬುದಾಗಿ ಭಾರತ ತಂಡದ ಮಾಜಿ ಆಟಗಾರನೂ ಆದ ಟಿನು ಯೋಹಾನನ್ ಹೇಳಿದ್ದಾರೆ.
ಕೇರಳದ ಮತ್ತೊಬ್ಬ ಪ್ರಮುಖ ಪೇಸ್ ಬೌಲರ್ ಸಂದೀಪ್ ವಾರಿಯರ್ ಈಗಾಗಲೇ ತಮಿಳುನಾಡು ಪರ ಆಡಲು ನಿರ್ಧರಿಸಿರುವುದರಿಂದ ಶ್ರೀಶಾಂತ್ ಪುನರಾಗಮನ ಎನ್ನುವುದು ತಂಡದ ಬೌಲಿಂಗಿಗೆ ಹೊಸ ಶಕ್ತಿ ತುಂಬುವುದರಲ್ಲಿ ಅನುಮಾನವಿಲ್ಲ. ಆದರೆ ಶ್ರೀಶಾಂತ್ ಅವರ ಬೌಲಿಂಗ್ ಫಾರ್ಮ್ ಹೇಗಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.