ಹೊಸದಿಲ್ಲಿ/ಬೆಂಗಳೂರು: ಕರ್ನಾಟಕ ಸಹಿತ ವಿವಿಧ ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದೆ. ಕೇರಳದಲ್ಲಿ ಬುಧವಾರ ಮಳೆ ಮತ್ತೆ ಬಿರುಸಾಗಿದ್ದು, ಎಂಟು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಕೇರಳದ ಪಟ್ಟಣಂತಿಟ್ಟ, ಕೊಟ್ಟಾಯಂ, ಇಡುಕ್ಕಿ, ಪಾಲಕ್ಕಾಡ್, ಮಲಪ್ಪುರಂ, ಕಲ್ಲಿಕೋಟೆ, ವಯನಾಡ್ ಮತ್ತು ಕಣ್ಣೂರಿನಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಕರ್ನಾಟಕದ ಮೈಸೂರು, ಚಿಕ್ಕಮಗಳೂರು ಸಹಿತ ವಿವಿಧೆಡೆ ಭಾರೀ ಮಳೆ ಸುರಿದಿದೆ. ಮೈಸೂರು ಮತ್ತು ಮಂಡ್ಯದಲ್ಲಿ ಬುಧವಾರ ರಾತ್ರಿಯಿಂದಲೇ ಮಳೆ ಸುರಿದಿದ್ದು, ಮೈಸೂರಿನ
ಚಾಮುಂಡಿಬೆಟ್ಟಕ್ಕೆ ಹೋಗುವ ಮಾರ್ಗದಲ್ಲಿ ಭೂಕುಸಿತವುಂಟಾಗಿದೆ. ಕರಾವಳಿಯ ವಿವಿಧೆಡೆ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲೂ ಸಾಕಷ್ಟು ಮಳೆಯಾಗಿದೆ.
ಉತ್ತರ ಭಾರತದ ಉತ್ತರಾಖಂಡ, ಉತ್ತರ ಪ್ರದೇಶ, ಸಿಕ್ಕಿಂ, ಅಸ್ಸಾಂನಲ್ಲೂ ಭಾರೀ ಮಳೆಯಾಗುತ್ತಿದ್ದು, ರಕ್ಷಣ ಕಾರ್ಯಾಚರಣೆ ಮುಂದುವರಿದಿದೆ. ಅತ್ತ ನೇಪಾಲದಲ್ಲಿ ಮಳೆಯಿಂದ ಅಸುನೀಗಿದವರ ಸಂಖ್ಯೆ 88ಕ್ಕೆ ಏರಿದೆ.
ಶೇ.41ರಷ್ಟು ಹೆಚ್ಚು ಮಳೆ :
ಅ. 1ರಿಂದ 21ರ ನಡುವಣ ಅವಧಿ ಯಲ್ಲಿ ದೇಶದಲ್ಲಿ ವಾಡಿಕೆಗಿಂತ ಶೇ. 41ರಷ್ಟು ಹೆಚ್ಚು ಮಳೆ ಸುರಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.