Advertisement

ಕೇರಳ ಮಳೆಗೆ 8 ಸಾವು; 12ಕ್ಕೂ ಅಧಿಕ ಮಂದಿ ಕಣ್ಮರೆ

01:20 AM Oct 17, 2021 | Team Udayavani |

ಕೊಟ್ಟಾಯಂ/ತಿರುವನಂತಪುರ: ಅರಬಿ ಸಮುದ್ರದ ಆಗ್ನೇಯ ಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಕೇರಳವನ್ನು ಅಕ್ಷರಶಃ ಮುಳುಗಿಸಿದೆ. ರಾಜ್ಯದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಪ್ರವಾಹ ಹಾಗೂ ಸರಣಿ ಭೂಕುಸಿತಗಳು ನಾಗರಿಕರನ್ನು ತತ್ತರಿಸುವಂತೆ ಮಾಡಿದೆ. ಕೊಟ್ಟಾಯಂನ ಕೂಟ್ಟಿಕಲ್‌ನಲ್ಲಿ ಭೂಕುಸಿತದಿಂದ 8 ಮಂದಿ ಸಾವಿಗೀಡಾಗಿದ್ದು, 12ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.

Advertisement

ಶನಿವಾರ ಕೇರಳದ 5 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಹಾಗೂ 7 ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಪತ್ತನಂತಿಟ್ಟ, ಕೊಟ್ಟಾಯಂ, ಎರ್ನಾಕುಳಂ, ಇಡುಕ್ಕಿ, ತೃಶೂರ್‌ಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದ್ದರೆ, ತಿರುವನಂತಪುರ, ಕೊಲ್ಲಂ, ಅಳಪ್ಪುಳ, ಪಾಲಕ್ಕಾಡ್‌, ಮಲಪ್ಪುರಂ, ಕಲ್ಲಿಕೋಟೆ ಮತ್ತು ವಯನಾಡ್‌ನಲ್ಲಿ ಆರೆಂಜ್‌ ಅಲರ್ಟ್‌ ಹಾಗೂ ಇನ್ನೂ ಎರಡು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಮುಂದಿನ ಮಂಗಳವಾರದವರೆಗೂ ಮಳೆಯ ಅಬ್ಬರ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಕೊಟ್ಟಾಯಂನ ಗ್ರಾಮೀಣ ಭಾಗದಲ್ಲಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ಕಾರನ್ನು ಜನರು ಎಳೆಯಲು ಯತ್ನಿಸುತ್ತಿರುವ ವೀಡಿಯೋವೊಂದು ವೈರಲ್‌ ಆಗಿದೆ. ಕನಿಷ್ಠ ನಾಲ್ಕು ಕಡೆ ಭೂಕುಸಿತ ಉಂಟಾಗಿದ್ದು, ಮೂರು ಮನೆಗಳು ಕೊಚ್ಚಿಹೋಗಿವೆ.

ಜನರಿಗೆ ಎಚ್ಚರಿಕೆ: ಭಾರೀ ಮಳೆಯ ಹಿನ್ನೆಲೆಯಲ್ಲಿ ಎಲ್ಲರೂ ಆದಷ್ಟು ಎಚ್ಚರಿಕೆಯಲ್ಲಿರಬೇಕು. ಪರ್ವತಪ್ರದೇಶ, ಗುಡ್ಡಗಾಡು ಹಾಗೂ ನದಿ ತೀರಗಳಿಂದ ಆದಷ್ಟು ದೂರವಿರಬೇಕು. ಸುಖಾಸುಮ್ಮನೆ ಮನೆಗಳಿಂದ ಹೊರಬರಬಾರದು ಎಂದು ರಾಜ್ಯದ ಜನತೆಗೆ ಸಿಎಂ ಕಾರ್ಯಾಲಯ ಮನವಿ ಮಾಡಿದೆ. ಕೇರಳ ಕರಾವಳಿಯಲ್ಲಿ ಗಂಟೆಗೆ 60 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಮೀನುಗಾರರು ಸಮುದ್ರಕ್ಕಿಳಿಯದಂತೆ ಸೂಚಿಸಲಾಗಿದೆ.

ಇದನ್ನೂ ಓದಿ:ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ತಡವಾದರೂ ಮಾನ್ಯ: ಸುಪ್ರೀಂ ಕೋರ್ಟ್‌

Advertisement

ಮಧ್ಯಪ್ರದೇಶದಲ್ಲಿ ಯೆಲ್ಲೋ ಅಲರ್ಟ್‌: ಮಧ್ಯಪ್ರದೇಶದಾದ್ಯಂತ ರವಿವಾರ‌ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿರುವ ಕಾರಣ, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್‌ ಘೋಷಿಸಿದೆ. ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಮಳೆಯ ಅಬ್ಬರ ಹೆಚ್ಚಲಿದೆ ಎಂದೂ ತಿಳಿಸಿದೆ.

ಸೇನೆ, ವಾಯುಪಡೆ ಆಗಮನ
ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಕೋರಿಕೆ ಮೇರೆಗೆ ಭೂಸೇನೆ ಹಾಗೂ ವಾಯುಪಡೆಯ ಯೋಧರು ಕೇರಳಕ್ಕೆ ಆಗಮಿಸಿದ್ದು, ರಕ್ಷಣ ಕಾರ್ಯ ಆರಂಭಿಸಿದ್ದಾರೆ. ದಕ್ಷಿಣ ಏರ್‌ ಕಮಾಂಡ್‌ನ‌ ಎಲ್ಲ ನೆಲೆಗಳಲ್ಲೂ ಎಂಐ- 17 ಹಾಗೂ ಸಾರಂಗ್‌ ಹೆಲಿಕಾಪ್ಟರ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. 30 ಯೋಧರನ್ನು ಒಳಗೊಂಡ ಸೇನೆಯ ಒಂದು ತಂಡ ಕೊಟ್ಟಾಯಂನ ಕಾಂಜಿರಪ್ಪಾಳಿನ್‌ಗೆ ತೆರಳಿದೆ.

ಬಸ್‌ ಮುಳುಗುತ್ತಿರುವ ವೀಡಿಯೋ ವೈರಲ್‌!
ಕೇರಳದ ಕೆಎಸ್‌ಆರ್‌ಟಿಸಿ ಬಸ್‌ವೊಂದು ಪ್ರವಾಹದ ನೀರಿನಲ್ಲಿ ಮುಳುಗುತ್ತಿರುವಂಥ ಬೆಚ್ಚಿಬೀಳುವ ವೀಡಿಯೋವೊಂದು ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಒಳಗಿದ್ದ ಪ್ರಯಾಣಿಕರನ್ನು ರಕ್ಷಿಸಲು ಸ್ಥಳೀಯರು ಹರಸಾಹಸಪಟ್ಟಿದ್ದಾರೆ. ಇದರ ಬೆನ್ನಲ್ಲೇ ಪ್ರವಾಹಪೀಡಿತ ಪ್ರದೇಶಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಸ್ಥಗಿತಗೊಳಿಸಿದೆ.

ಶಬರಿಮಲೆ ಯಾತ್ರೆಗೂ ಸಮಸ್ಯೆ
ಭಾರೀ ಮಳೆ, ಪ್ರವಾಹದ ಹಿನ್ನೆಲೆಯಲ್ಲಿ ಅಕ್ಟೋಬರ್‌ 19ರ ವರೆಗೂ ಶಬರಿಮಲೆ ಯಾತ್ರೆಗೆ ಅವಕಾಶ ನೀಡದಿರಲು ಸರಕಾರನಿರ್ಧರಿಸಿದೆ. ಸಿಎಂ ಪಿಣರಾಯಿ ವಿಜಯನ್‌ ನೇತೃತ್ವದಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲಿ ಶನಿವಾರ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದೇ ವೇಳೆ, ಅ.18ರಿಂದ ಆರಂಭವಾಗಬೇಕಾಗಿದ್ದ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಅ.20ರ ಅನಂತರ ಪುನರಾರಂಭಿಸಲು ತೀರ್ಮಾನಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next