Advertisement

ನಿಫಾ ಸೋಂಕು ತಗುಲಿ ಮೃತಪಟ್ಟ ನರ್ಸ್ ಲಿನಿಗೆ ಮರಣೋತ್ತರ ಫ್ಲೊರೆನ್ಸ್ ನೈಟಿಂಗೇಲ್ ಪ್ರಶಸ್ತಿ

10:02 AM Dec 07, 2019 | Team Udayavani |

ನವದೆಹಲಿ: ಕೇರಳದ ನರ್ಸ್ ಲಿನಿ  ಪಿ.ಎನ್. ಅವರಿಗೆ ಮರಣೋತ್ತರವಾಗಿ ನ್ಯಾಷನಲ್ ಫ್ಲೊರೆನ್ಸ್ ನೈಟಿಂಗೇಲ್ ಪ್ರಶಸ್ತಿ-2019ನ್ನು ಪ್ರದಾನ ಮಾಡಲಾಗಿದೆ. ಲಿನಿ ಅವರು ಕಳೆದ ವರ್ಷ ನಿಫಾ ಸೋಂಕು ತಗುಲಿದ್ದ ರೋಗಿಗೆ ಚಿಕಿತ್ಸೆ ನೀಡುತ್ತಿದ್ದ ಸಂದರ್ಭದಲ್ಲಿ ಈಕೆಗೆ ಆ ಸೋಂಕು ತಗುಲಿ ಬಳಿಕ ಅವರು ಮೃತಪಟ್ಟಿದ್ದರು. ಲಿನಿ ಅವರ ಪತಿ ಸಜೀಶ್ ಪುತೂರ್ ಅವರು ತನ್ನ ಮೃತ ಪತ್ನಿಯ ಪರವಾಗಿ ರಾಷ್ಟ್ರಪತಿಗಳಿಂದ ಈ ಪ್ರಶಸ್ತಿಯನ್ನು ಪಡೆದುಕೊಂಡರು.

Advertisement

ವೈದ್ಯಕೀಯ ಕ್ಷೇತ್ರದಲ್ಲಿ ನರ್ಸ್ ಗಳ ಅನುಪಮ ಸೇವೆಯನ್ನು ಗುರುತಿಸುವ ಸಲುವಾಗಿ ಭಾರತ ಸರಕಾರವು 1973ರಲ್ಲಿ ನ್ಯಾಷನಲ್ ಫ್ಲೊರೆನ್ಸ್ ನೈಟಿಂಗೇಲ್ ಪ್ರಶಸ್ತಿಯನ್ನು ಸ್ಥಾಪಿಸಿತ್ತು.

ಕಳೆದ ವರ್ಷ ಘಾತಕ ನಿಫಾ ಸೋಂಕು ಕೇರಳ ರಾಜ್ಯವನ್ನು ದೃತಿಗೆಡಿಸಿದ್ದ ಸಂದರ್ಭದಲ್ಲಿ ಲಿನಿ ಅವರು ಕೇರಳದ ಪೆರಂಬ್ರಾದಲ್ಲಿರುವ ಇಎಂಎಸ್ ಸ್ಮಾರಕ ಆಸ್ಪತ್ರೆಯಲ್ಲಿ ನಿಫಾ ಸೋಂಕು ತಗುಲಿದ ರೋಗಿಗಳ ಚಿಕಿತ್ಸೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಹೀಗೆ ಚಿಕಿತ್ಸೆ ನೀಡುತ್ತಿದ್ದ ಸಂದರ್ಭದಲ್ಲೇ ಆಕಸ್ಮಿಕವಾಗಿ ಲಿನಿ ಅವರಿಗೆ ಈ ಸೋಂಕು ತಗುಲಿತ್ತು.

ಬಳಿಕ ಲಿನಿ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸುತ್ತಿದ್ದಂತೆ ಅವರನ್ನು ಕೊಝಿಕ್ಕೋಡ್ ವೈದ್ಯಕೀಯ ಕಾಲೇಜಿನ ತುರ್ತುನಿಗಾ ವಿಭಾಗಕ್ಕೆ ದಾಖಲಿಸಲಾಗಿತ್ತು. ಅಲ್ಲಿ ಆಕೆಯ ದೇಹದಲ್ಲಿ ಬಹುವಿಧ ತೊಂದರೆಗಳು ಉಲ್ಬಣಿಸಿದ ಪರಿಣಾಮ ಲಿನಿ ಅವರು ಮೇ 21ರಂದು ಇಹಲೋಕವನ್ನು ತ್ಯಜಿಸಿದ್ದರು.

ನರ್ಸ್ ಲಿನಿ ಅವರ ಸೇವಾ ಬದ್ಧತೆಯನ್ನು ಪರಿಗಣಿಸಿದ ಕೇರಳ ಸರಕಾರವು ಈಕೆಯ ಹೆಸರಿನಲ್ಲಿ ಪ್ರಶಸ್ತಿಯೊಂದನ್ನು ಸ್ಥಾಪಿಸಿತ್ತು. ಈ ಸಲ ಲಿನಿ ಸಹಿತ ಒಟ್ಟು 35 ನರ್ಸ್ ಗಳಿಗೆ ಈ ಪ್ರಶಸ್ತಿಯನ್ನು ಭಾರತ ಸರಕಾರ ಪ್ರದಾನಿಸಿದೆ.

Advertisement

ವೈದ್ಯಕೀಯ ಕ್ಷೇತ್ರದಲ್ಲಿ ಮಾರಕವೆಂದೇ ಪರಿಗಣಿಸಲ್ಪಟ್ಟಿರುವ ನಿಫಾ ಸೋಂಕಿನ ಮರಣ ಪ್ರಮಾಣ 70 ಪ್ರತಿಶತವಾಗಿದೆ. ಈ ಸೋಂಕನ್ನು ತಡೆಗಟ್ಟುವ ಯಾವುದೇ ಚುಚ್ಚುಮದ್ದುಗಳು ಲಭ್ಯವಿಲ್ಲ ಮತ್ತು ರೋಗ ಲಕ್ಷಣದ ತೀವ್ರತೆಯ ಮೇಲೆ ರೋಗಿ ಚೇತರಿಸಿಕೊಳ್ಳುವ ಸಾಧ್ಯತೆಗಳಿರುವ ಮಾರಕ ಕಾಯಿಲೆ ಇದಾಗಿದೆ.

Advertisement

Udayavani is now on Telegram. Click here to join our channel and stay updated with the latest news.