ತಿರುವನಂತಪುರಂ: ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಮಂಗಳವಾರ(ಸೆ.24ರಂದು) ನಟ, ಶಾಸಕ ಎಂ. ಮುಖೇಶ್(MLA M Mukesh) ಅವರನ್ನು ಬಂಧಿಸಲಾಗಿದೆ.
ಹೇಮಾ ಸಮಿತಿ ವರದಿ (Hema Committee Report) ಸಲ್ಲಿಕೆಯಾದ ಬಳಿಕ ಮಾಲಿವುಡ್‌ನ(Mollywood) ಕೆಲ ಖ್ಯಾತ ಕಲಾವಿದರ ಮೇಲೆ ಲೈಂಗಿಕ ಕಿರುಕುಳದ ಆರೋಪ ಕೇಳಿ ಬರುತ್ತಿದೆ. ನಟ, ಶಾಸಕ ಮುಕೇಶ್ ವಿರುದ್ಧವೂ ಅತ್ಯಾಚಾರ ಆರೋಪ ಕೇಳಿ ಬಂದಿತ್ತು.
ಮುಕೇಶ್ ಮೇಲಿನ ಆರೋಪವೇನು?:
2010ರಲ್ಲಿ ಕೊಚ್ಚಿಯಲ್ಲಿರುವ ತನ್ನ ಫ್ಲಾಟ್‌ನಲ್ಲಿ ಕಲಾವಿದರ ಸಂಘವಾದ ʼಅಮ್ಮಾʼ ಸದಸ್ಯತ್ವ ನೀಡುತ್ತೇನೆ ಎಂದು ಭರವಸೆ ನೀಡಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಮಾಜಿ ನಟಿರೊಬ್ಬರು ಆರೋಪಿಸಿದ್ದರು.
ಈ ಸಂಬಂಧ ಮಂಗಳವಾರ ಎಸ್‌ಐಟಿ ಮುಕೇಶ್ ಅವರನ್ನು ವಿಚಾರಣೆ ನಡೆಸಿದೆ. ಎಐಜಿ ಪೂಂಗಾಝಾಲಿ ನೇತೃತ್ವದಲ್ಲಿ ನಡೆದ ವಿಚಾರಣೆಯ ನಂತರ ಮುಕೇಶ್ ಅವರನ್ನು ಬಂಧಿಸಲಾಗಿದೆ.
ಮುಖೇಶ್ ಅವರು ತಮ್ಮ ವಕೀಲರೊಂದಿಗೆ ಎರ್ನಾಕುಲಂನಲ್ಲಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಂದೆ ಹಾಜರಾಗಿದ್ದರು ಅಲ್ಲಿ ಅವರನ್ನು ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿ, ಬಂಧಿಸಲಾಗಿದೆ.
ಈ ಪ್ರಕರಣ ಸಂಬಂಧ ಸೆಪ್ಟೆಂಬರ್ 5 ರಂದು ಎರ್ನಾಕುಲಂ ಪ್ರಿನ್ಸಿಪಲ್ ಸೆಷನ್ಸ್ ನ್ಯಾಯಾಲಯವು ಅವರಿಗೆ ನಿರೀಕ್ಷಣಾ ಜಾಮೀನು ನೀಡಿತ್ತು. ಅವರು ಯಾವುದೇ ದಿನ ಬೆಳಿಗ್ಗೆ 9 ಗಂಟೆಗೆ ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು ಮತ್ತು ತನಿಖೆಗೆ ಸಹಕರಿಸಬೇಕು ಎನ್ನುವ ಷರತ್ತು ಹಾಕಿ ಅವರಿಗೆ ನಿರೀಕ್ಷಣಾ ಜಾಮೀನು ನೀಡಲಾಗಿತ್ತು.
ಬಂಧನದ ಬಳಿಕ ನಿರೀಕ್ಷಣಾ ಜಾಮೀನು ಆಧಾರದ ಮೇಲೆ ಅವರನ್ನು ಬಿಡುಗಡೆಗೊಳಿಸಲಾಗಿದೆ.
ವಡಕ್ಕಂಚೇರಿ ,ಮರಡು ಠಾಣೆಯಲ್ಲಿ ಮುಕೇಶ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು.
ಇನ್ನು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ನಟ ಸಿದ್ದೀಕ್ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರವಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ದೀಕ್ ಅವರನ್ನು ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ.