Advertisement

ಗುಂಡ್ಲುಪೇಟೆ: ಕೇರಳ ಲಾಟರಿ ಮಾರಾಟ ಅಕ್ರಮವಾಗಿ ಪಟ್ಟಣ ಸೇರಿದಂತೆ ತಾಲೂಕಾದ್ಯಂತ ಎಗ್ಗಿಲ್ಲದೆ ನಡೆಯುತ್ತಿದೆ. ಇದರ ಅರಿವಿದ್ದರೂ ಸಹ ಪೊಲೀಸರು ಕ್ರಮಕ್ಕೆ ಮುಂದಾಗದೆ ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ. ಈ ಕಾರಣ ದಿಂದ ಪಟ್ಟಣದ ಹಲವು ಪ್ರದೇಶದಲ್ಲಿ ಅಧಿಕ ಪ್ರಮಾಣದಲ್ಲಿ ಲಾಟರಿ ಮಾರಾಟವಾಗುತ್ತಿದೆ.

Advertisement

ಗುಂಡ್ಲುಪೇಟೆ ಪಟ್ಟಣ, ಬೇಗೂರು, ತೆರಕಣಾಂಬಿ, ಹಂಗಳ ಹೋಬಳಿ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಂತೆಗಟ್ಟಲೆ ವಿವಿಧ ಮುಖ ಬೆಲೆಯ ಲಾಟರಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಅನೇಕ ಮಂದಿ ಕೆಲಸ ಬಿಟ್ಟು ಲಾಟರಿ ಗೀಳಿಗೆ ಬಿದ್ದು, ಸಾಲ ಮಾಡಿ ಲಾಟರಿ ತೆಗೆದುಕೊಳ್ಳುತ್ತಿದ್ದಾರೆ. ಅಪರೂಪಕ್ಕೊಮ್ಮೆ ಐನೂರು ಸಾವಿರ ರೂಪಾಯಿ ಲಾಟರಿ ಹೊಡೆಯುವುದಕ್ಕೆ ಸಾರ್ವಜನಿಕರು ಮತ್ತು ಕೂಲಿ ಕಾರ್ಮಿಕರು ಪ್ರತಿದಿನ ಹಣ ಕಳೆದುಕೊಳ್ಳತ್ತಾರೆ. ಇನ್ನೂ ಈ ಮಧ್ಯೆ ಕೆಲವರು ಲಾಭದ ಆಸೆಗಾಗಿ ಲಾಟರಿ ಮಾರಾಟದಲ್ಲಿ ತೊಡಗಿದ್ದಾರೆ.

ದೊಡ್ಡ ತಂಡವೇ ಉತ್ಪತ್ತಿ: ತಾಲೂಕಿನಿಂದ ಕೇರಳದ ವೈನಾಡ್‌ ಜಿಲ್ಲೆಯ ಸುಲ್ತಾನ್‌ ಬತ್ತೇರಿ ಸುತ್ತಮುತ್ತಲಿನ ಪ್ರದೇಶಗಳಿಗೆ ಕೂಲಿಗೆ ಹೋಗುತ್ತಾರೆ. ವಾಪಸ್‌ ಬರುವಾಗ ದುಡಿದ ಅರ್ಧದಷ್ಟು ಹಣದಲ್ಲಿ ಲಾಟರಿ ತರುತ್ತಿದ್ದಾರೆ. ಇನ್ನೂ ಅನೇಕ ಮಂದಿ ಕೆಲಸಗಾರರ ಸೋಗಿನಲ್ಲಿ ಕೇರಳಕ್ಕೆ ಹೋಗಿ ಕಂತೆ ಕಂತೆ ಲಾಟರಿ ತಂದು ತಾವು ಮಾರಾಟ ಮಾಡುವ ಜೊತೆಗೆ ಕೆಲ ಮಂದಿಗೆ ಇಂತಿಷ್ಟು ಹಣ ನೀಡಿ ಅವರ ಹತ್ತಿರವೂ ಲಾಟರಿ ಮಾರಿಸುತ್ತಿದ್ದಾರೆ. ಇದರಿಂದ ಲಾಟರಿ ಮಾರಾಟ ಮಾಡುವವರ ದೊಡ್ಡ ತಂಡವೇ ಉತ್ಪತ್ತಿಯಾಗಿದೆ.

ವಿದ್ಯಾರ್ಥಿಗಳಿಗೂ ಅಂಟಿದ ಚಟ: ಇನ್ನು ಲಾಟರಿ ಕೊಳ್ಳುವ ಗೀಳಿಗೆ ಕೇವಲ ಕೂಲಿ ಕಾರ್ಮಿಕರಷ್ಟೇ ಅಲ್ಲೆ ವಿದ್ಯಾರ್ಥಿಗಳು ಸಹ ಬಿದ್ದಿದ್ದು, ಮನೆಯಲ್ಲಿ ತಂದೆ-ತಾಯಿ ಖರ್ಚಿಗೆ ನೀಡಿದ ಹಣದಲ್ಲಿ ಒಂದು-ಎರಡು ಲಾಟರಿ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಇದರ ಚಟ ಅಂಟಿದೆ ಎಂದು ಕೆಲ ವಿದ್ಯಾರ್ಥಿ ಪೋಷಕರು ಅಸಮಾಧಾನ ವ್ಯಕ್ತಪಡಿಸಿದರು.

 ಗಡಿ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಇಲ್ಲ : ರಾಜ್ಯದ ಗಡಿ ಮೂಲೆಹೊಳೆ ಚೆಕ್‌ ಪೋಸ್ಟ್‌ ನಲ್ಲಿ ಕರ್ತವ್ಯ ನಿರ್ವಹಿಸುವ ಅರಣ್ಯ ಇಲಾಖೆ ಮತ್ತು ಪೊಲೀಸ್‌ ಸಿಬ್ಬಂದಿ ಸರಿಯಾಗಿ ತಪಾಸಣೆ ನಡೆಸದ ಹಿನ್ನೆಲೆ ಕಂತೆ ಕಂತೆ ಲಾಟರಿಗಳನ್ನು ಸರ್ಕಾರಿ ಬಸ್‌ ಸೇರಿದಂತೆ ವಿವಿಧ ಖಾಸಗಿ ವಾಹನಗಳಲ್ಲಿ ತರುತ್ತಿದ್ದಾರೆ. ಇದರೊಂದಿಗೆ ಕೇರಳ ತ್ಯಾಜ್ಯಗಳು ಸಹ ಕರ್ನಾಟಕಕ್ಕೆ ಬರುತ್ತಿವೆ.

Advertisement

ಪೊಲೀಸ್‌ ಗುಪ್ತ ಮಾಹಿತಿ ಸಿಬ್ಬಂದಿ ವೈಫ‌ಲ್ಯ : ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಹೋಬಳಿ ಭಾಗದಲ್ಲಿ ಅಕ್ರಮ ಲಾಟರಿ ಮಾರಾಟದ ಬಗ್ಗೆ ಪೊಲೀಸರು ಹಾಗೂ ಗುಪ್ತ ಮಾಹಿತಿ ಸಿಬ್ಬಂದಿಗೆ ಮಾಹಿತಿ ಇದ್ದರೂ ಸಹ ತಡೆಗೆ ಕ್ರಮ ವಹಿಸಿಲ್ಲ. ಇದನ್ನು ಗಮನಿಸಿದರೆ ಪರೋಕ್ಷವಾಗಿ ಅವರೇ ಲಾಟರಿ ಮಾರಾಟಕ್ಕೆ ಸಹಕಾರ ನೀಡುತ್ತಿದ್ದಾರೆ ಎಂಬ ಅನುಮಾನ ಬರುತ್ತದೆ ಎಂದು ಸಾರ್ವಜನಿಕರು ದೂರಿದರು. ಹಿಂದೆ ಗುಂಡ್ಲುಪೇಟೆ ಪೊಲೀಸ್‌ ಠಾಣೆಯಲ್ಲಿ ಇದ್ದ ಗುಪ್ತ ಮಾಹಿತಿ ಸಿಬ್ಬಂದಿ ಲಾಟರಿ ಮಾರಾಟ ಮಾಡುವ ಅನೇಕ ಮಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಆದರೆ ಕಳೆದೊಂದು ವರ್ಷಗಳಿಂದ ಎಗ್ಗಿಲ್ಲದೆ ಲಾಟರಿ ಮಾರಾಟ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿದ್ದು, ಅಲ್ಲೊಂದು ಇಲ್ಲೊಂದು ಎಂಬಂತೆ ಲಾಟರಿ ಮಾರಾಟ ಮಾಡುವವರನು ಬಂಧಿಸಿ ಸುಮ್ಮನಾಗುತ್ತಿದ್ದಾರೆ.

ಕೇರಳ ಲಾಟರಿ ಮಾರಾಟ ಸಂಬಂಧ ಕಳೆದ ತಿಂಗಳು ನಾಲ್ಕೆçದು ಪ್ರಕರಣ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಲಾಟರಿ ಮಾರಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಿಬ್ಬಂದಿಗೆ ಸೂಚನೆ ನೀಡಿ ಕ್ರಮ ವಹಿಸಲಾಗುವುದು. -ಪ್ರಿಯದರ್ಶಿನಿ ಸಾಣೆಕೊಪ್ಪ, ಡಿವೈಎಸ್ಪಿ, ಚಾ.ನಗರ

 

– ಬಸವರಾಜು ಎಸ್‌.ಹಂಗಳ

Advertisement

Udayavani is now on Telegram. Click here to join our channel and stay updated with the latest news.

Next