Advertisement

ಬಲಿ ಕೊಟ್ಟವರಿಂದ ನರಮಾಂಸ ಭಕ್ಷಣೆ; ದುಷ್ಕರ್ಮಿಗಳ ಘಾತಕ ಕೃತ್ಯ ಬಯಲು

01:03 AM Oct 13, 2022 | Team Udayavani |

ಕೊಚ್ಚಿ/ಪತ್ತನಂತಿಟ್ಟ: ಆರ್ಥಿಕ ಸ್ಥಿತಿ ಉತ್ತಮಗೊಳಿಸುವ ನಿಟ್ಟಿನಲ್ಲಿ ಇಬ್ಬರು ಮಹಿಳೆಯರನ್ನು ನರಬಲಿ ನೀಡಿ ಪೈಶಾಚಿಕತೆ ಮೆರೆದಿರುವ ಭಗವಾಲ್‌ ಸಿಂಗ್‌ ಮತ್ತು ಆತನ ಪತ್ನಿ ಲೈಲಾಳ ಹೇಯ ಖಯಾಲಿಯೂ ಬಯಲಾಗಿದೆ.

Advertisement

ತಿರುವಲ್ಲಾದಲ್ಲಿ ಅವರಿಬ್ಬರೂ ಮಹಿಳೆಯರನ್ನು ಕೊಂದ ಬಳಿಕ ಅವರ ಮಾಂಸವನ್ನು ತಿಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಒಟ್ಟಾರೆ ಪ್ರಕರಣದ ಬಗ್ಗೆ ಅವರನ್ನು ಬಲವಾಗಿ ವಿಚಾರಣೆಗೆ ಒಳಪಡಿಸಿದಾಗ ಈ ಅಂಶ ಬೆಳಕಿಗೆ ಬಂದಿದೆ ಎಂದು ಬುಧವಾರ ಕೊಚ್ಚಿ ಪೊಲೀಸ್‌ ಆಯುಕ್ತ ಸಿ.ನಾಗರಾಜು ತಿಳಿಸಿದ್ದಾರೆ.

ಇದರ ಜತೆಗೆ ಮತ್ತೊಬ್ಬ ಬಂಧಿತ ವ್ಯಕ್ತಿ ಮೊಹಮ್ಮದ್‌ ಶರೀಫ್ ಕಾಮ ಪಿಪಾಸು ಆಗಿದ್ದನೆಂದೂ ಅವರು ತಿಳಿಸಿದ್ದಾರೆ. ಇಬ್ಬರು ಮಹಿಳೆಯರನ್ನೂ ಕಟ್ಟಿ ಹಾಕಿ, ಅತ್ಯಂತ ಹಿಂಸಾತ್ಮಕವಾಗಿ ಅವರ ದೇಹದ ಭಾಗಗಳನ್ನು ಹರಿತವಾದ ಆಯುಧಗಳಿಂದ ಗಾಯಗೊಳಿಸ ಲಾಗಿತ್ತು. ಈ ಪೈಕಿ ಪದ್ಮಾ ಅವರನ್ನು 56 ತುಂಡುಗಳನ್ನಾಗಿ ಕತ್ತರಿಸಿ ಮೂರು ಗುಂಡಿಗಳಲ್ಲಿ ಪ್ರತ್ಯೇಕವಾಗಿ ಹೂಳಲಾಗಿತ್ತು. ಅದಕ್ಕಿಂತ ಮೊದಲು ಅವರ ಕತ್ತು ಹಿಸುಕಿ ಕೊಲ್ಲಲಾಗಿತ್ತು. ಅವರ ಶಿರಚ್ಛೇದವನ್ನೂ ನಡೆಸಲಾಗಿತ್ತು ಎಂದು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

ರೋಸ್ಲಿನ್‌ ಎಂಬವರ ಎದೆಯ ಭಾಗವನ್ನು ಲೈಲಾ ತುಂಡರಿಸಿದ್ದಳು ಎಂದು ತನಿಖೆಯ ವೇಳೆ ಗೊತ್ತಾಗಿದೆ. ಇದೇ ವೇಳೆ, ಮೂವರನ್ನು ಕೊಚ್ಚಿಯ ಸ್ಥಳೀಯ ನ್ಯಾಯಾಲಯ 14 ದಿನಗಳ ನ್ಯಾಯಾಂಗ ವಶಕ್ಕೊಪ್ಪಿಸಿ ಆದೇಶ ನೀಡಿದೆ.

ಶರೀಫ್ ಕಾಮಪಿಪಾಸು: ಬಂಧಿತನಾಗಿರುವ ಮೊಹಮ್ಮದ್‌ ಶರೀಫ್ ಭಗವತ್‌ ಸಿಂಗ್‌ ಮತ್ತು ಲೈಲಾ ದಂಪತಿಯ ವಿತ್ತೀಯ ಬಿಕ್ಕಟ್ಟು ನಿವಾರಣೆಯಾಗಲು ನರಬಲಿ ನೀಡುವುದೇ ಉತ್ತಮ ಎಂದು ಸಲಹೆ ನೀಡಿದ್ದ. 2020ರಲ್ಲಿ ವೃದ್ಧೆಯ ಮೇಲೆ ಲೈಂಗಿಕ ಹಲ್ಲೆ ನಡೆಸಿದ ಆರೋಪ ಕೂಡ ದಾಖಲಾಗಿತ್ತು ಎಂದು ಕೊಚ್ಚಿ ಪೊಲೀಸ್‌ ಆಯುಕ್ತರು ಹೇಳಿದ್ದಾರೆ. ಇದರ ಜತೆಗೆ ಆತನೂ ನರಮಾಂಸ ಭಕ್ಷಣೆ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Advertisement

ಆತನೇ ಪ್ರಮುಖ: ಒಟ್ಟಾರೆ ಪ್ರಕರಣದಲ್ಲಿ ಮೊಹಮ್ಮದ್‌ ಶರೀಫ್ ಅವನೇ ಪ್ರಧಾನ ಆರೋಪಿ. ಆತ ನರಬಲಿ ಕೊಡದೇ ಇದ್ದರೆ ಸಮಸ್ಯೆಗಳು ನಿವಾರಣೆಯಾಗಲು ಸಾಧ್ಯ ವಿಲ್ಲ ಎಂದು ದಂಪತಿಯ ಮನಸ್ಸಿನಲ್ಲಿ ಭಯದ ಬೀಜ ಬಿತ್ತಿದ್ದ. 15 ವರ್ಷಗಳ ಅವಧಿ ಯಲ್ಲಿ ಆತನ ವಿರುದ್ಧ ಹತ್ತು ಕೇಸು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಅಸುನೀಗಿದ ಮಹಿಳೆಯರ ದೇಹದ ಖಾಸಗಿ ಭಾಗಗಳಿಗೂ ಚೂರಿಯಿಂದ ಇರಿದು ಘಾಸಿಗೊಳಿಸಿದ್ದ. ಆತ ಅತ್ಯಾಚಾರ ಎಸಗಿ, ಗಾಯಗೊಳಿಸಿ, ನೋವಿನಿಂದ ನರಳುವು ದನ್ನು ನೋಡಿ ಸಂತೋಷಪಡುತ್ತಿದ್ದ.

ಹೀಗಾಗಿ ಆತ ವಿಕೃತ ಸಂತೋಷವನ್ನು ಹೊಂದುವ ವ್ಯಕ್ತಿಯಾಗಿದ್ದಾನೆ ಎಂದು ಅವರು ತಿಳಿಸಿದ್ದಾರೆ.

ಶಫಿ ಕೊಚ್ಚಿಯ ಗಾಂಧಿನಗರ ನಿವಾಸಿ ಯಾಗಿದ್ದಾನೆ. ಆತ ಪತ್ನಿಯ ಜತೆಗೆ ಸದಾ ಕಾಲ ಜಗಳವನ್ನೇ ಮಾಡುತ್ತಿದ್ದ ಎಂದು ಸ್ಥಳೀಯರು ಆರೋಪಿ ಸಿದ್ದಾರೆ. ಈತ ದಂಪತಿಗೆ ಮಹಿಳೆಯರನ್ನು ಪೂರೈಸುವ ಏಜೆಂಟ್‌ ಕೂಡ ಆಗಿದ್ದ.

ನಕಲಿ ಖಾತೆ
ಶರೀಫ್ ದುಷ್ಕೃತ್ಯವನ್ನು ಎಸಗಲು ಫೇಸ್‌ಬುಕ್‌ನಲ್ಲಿ “ಶ್ರೀದೇವಿ’ ಎಂಬ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದ ಎಂದು ಐಪಿಎಸ್‌ ಅಧಿಕಾರಿ ಹೇಳಿದ್ದಾರೆ. ಅದರ ಮೂಲಕ ಮಹಿಳೆಯರನ್ನು ಮರಳು ಗೊಳಿಸಿ, ವಂಚಿಸುತ್ತಿದ್ದ. ಫೇಸ್‌ಬುಕ್‌ ಮೆಸೇಂಜರ್‌ ಮೂಲಕವೇ ಸಿಂಗ್‌ ಮತ್ತು ಆತನ ಪತ್ನಿಯನ್ನು ಸಂಪರ್ಕಿಸಿದ್ದ. ಇದಾದ ಬಳಿಕ ಪದೇ ಪದೆ ಅವರ ಮನೆಗೆ ತೆರಳಿ ನಂಬಿಕೆ ಬರುವಂತೆ ಮಾಡಿದ್ದ. ಹೀಗಾಗಿ ಮೂವರ ನಡುವೆ ಗಾಢ ಬಾಂಧವ್ಯ ಏರ್ಪಟ್ಟಿತ್ತು.

Advertisement

Udayavani is now on Telegram. Click here to join our channel and stay updated with the latest news.

Next