ಕೊಚ್ಚಿ: ಕಣ್ಣೂರು ವಿವಿಯಲ್ಲಿ ಮಲಯಾಳಂ ವಿಭಾಗದ ಸಹಾಯಕ ಪ್ರಾಧ್ಯಾಪಕಿಯಾಗಿ ಪ್ರಿಯಾ ವರ್ಗೀಸ್ ಅವರ ನೇಮಕ ಸಾಧ್ಯವಿಲ್ಲ. ಅವರು ಯುಜಿಸಿ ನಿಗದಿಪಡಿಸಿದ ಅರ್ಹತೆಯನ್ನು ಹೊಂದಿಲ್ಲವೆಂದು ಕೇರಳ ಹೈಕೋರ್ಟ್ ಗುರುವಾರ ಹೇಳಿದೆ. ಇದರಿಂದಾಗಿ ವಿವಿಗಳಲ್ಲಿನ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಸರ್ಕಾರಕ್ಕೆ ಹಿನ್ನಡೆಯಾಗಿದೆ.
ಅವರ ನೇಮಕ ಮಾಡಿರುವ ಬಗ್ಗೆ ಮತ್ತೂಮ್ಮೆ ಪರಿಶೀಲನೆ ಆಗಬೇಕು ಎಂದು ನ್ಯಾ.ದೇವನ್ ರಾಮಚಂದ್ರನ್ ನೇತೃತ್ವದ ನ್ಯಾಯಪೀಠ ಪ್ರತಿಪಾದಿಸಿದೆ. ಯಾವುದೇ ವಿಶ್ವವಿದ್ಯಾಲಯ ಯುಜಿಸಿ ನಿಗದಿಪಡಿಸಿರುವ ಮಾನದಂಡ ಮತ್ತು ನಿಯಮಗಳ ವ್ಯಾಪ್ತಿಗಿಂತ ಹೊರತಾಗಿಲ್ಲ ಎಂದು ಹೇಳಿದೆ. ದೇಶದ ನಿರ್ಮಾಣದಲ್ಲಿ ಅಧ್ಯಾಪಕರು ಪ್ರಮುಖ ಪಾತ್ರ ವಹಿಸುತ್ತಾರೆ. ಅವರು ಮೊಂಬತ್ತಿಯಂತೆ ಇದ್ದು, ಕತ್ತಲನ್ನು ನಿವಾರಿಸಬೇಕು. ಸಹಾಯ ಪ್ರಾಧ್ಯಾಪಕಿ ಹುದ್ದೆಗೆ ಯುಜಿಸಿ ನಿಯಮ ಪ್ರಕಾರ ಬೋಧನಾನುಭವ ಕಡ್ಡಾಯ ಬೇಕು ಎಂದು ನ್ಯಾಯಪೀಠ ಹೇಳಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಆಪ್ತ ಕಾರ್ಯದರ್ಶಿ ಕೆ.ಕೆ.ರಾಜೇಶ್ ಅವರ ಪತ್ನಿ ಪ್ರಿಯಾ ವರ್ಗಿಸ್ ಆಗಿದ್ದಾರೆ. ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ಕುಲಪತಿ ಹುದ್ದೆಯಿಂದ ಮುಕ್ತಗೊಳಿಸಬೇಕು ಎಂದು ಸುಗ್ರೀವಾಜ್ಞೆ ಹೊರಡಿಸಿರುವ ಎಲ್‌ಡಿಎಫ್ ಸರ್ಕಾರಕ್ಕೆ ಈ ಬೆಳವಣಿಗೆ 2ನೇ ಹಿನ್ನಡೆಯಾಗಿದೆ. ಕೆಲ ದಿನಗಳ ಹಿಂದೆ ಮೀನುಗಾರಿಕಾ ವಿವಿಯ ಕುಲಪತಿಯ ನೇಮಕವನ್ನು ಹೈಕೋರ್ಟ್ ರದ್ದುಗೊಳಿಸಿತ್ತು.