Advertisement

ಕೇರಳದಲ್ಲಿ ಹರತಾಳ; ಹಿಂಸಾಚಾರಕ್ಕೆ ತಿರುಗಿದ ಪಿಎಫ್ ಐ ಪ್ರತಿಭಟನೆ, ಕಲ್ಲುತೂರಾಟ; ಹಲವರ ಬಂಧನ

01:44 PM Sep 23, 2022 | Team Udayavani |

ತಿರುವನಂತಪುರಂ: ದೇಶಾದ್ಯಂತ ಪಿಎಫ್ ಐ, ಎಸ್ ಡಿಪಿಐ ಕಚೇರಿಗಳ ಮೇಲೆ ರಾಷ್ಟ್ರೀಯ ತನಿಖಾ ದಳ ದಾಳಿ ನಡೆಸಿ ಹಲವು ಮುಖಂಡರನ್ನು ಬಂಧಿಸಿರುವುದನ್ನು ವಿರೋಧಿಸಿ ಪಿಎಫ್ ಐ ಶುಕ್ರವಾರ (ಸೆಪ್ಟೆಂಬರ್ 23) ಕೇರಳ ಬಂದ್ ಗೆ ಕರೆ ನೀಡಿದ್ದು, ಈ ಸಂದರ್ಭದಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿರುವುದಾಗಿ ವರದಿ ತಿಳಿಸಿದೆ.

Advertisement

ಕೇರಳದಲ್ಲಿ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಪಿಎಫ್ ಐ ಬಂದ್ ಗೆ ಕರೆ ನೀಡಿತ್ತು. ಈ ವೇಳೆ ಪಿಎಫ್ ಐನ ಕಾರ್ಯಕರ್ತರು ಕಣ್ಣೂರಿನ ನಾರಾಯಣಪರದಲ್ಲಿ ದಿನಪತ್ರಿಕೆ ಹಂಚುತ್ತಿದ್ದ ವಾಹನಗಳ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದರು ಎಂದು ವರದಿ ವಿವರಿಸಿದೆ.

ಅಳಪುಳದಲ್ಲಿ ಕೇರಳ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ ಆರ್ ಟಿಸಿ)ಯ ಎರಡು ಬಸ್ ಹಾಗೂ ಲಾರಿಗಳ ಮೇಲೆ ಕಲ್ಲುತೂರಾಟ ನಡೆಸಿ ಜಖಂಗೊಳಿಸಲಾಗಿದೆ. ಅದೇ ರೀತಿ ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಎರ್ನಾಕುಲಂ, ಕೋಝಿಕೋಡ್, ವಯನಾಡ್ ಜಿಲ್ಲೆಗಳಲ್ಲಿ ವಾಹನಗಳ ಮೇಲೆ ಕಲ್ಲುತೂರಾಟ ನಡೆಸುವ ಮೂಲಕ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ ಎಂದು ವರದಿ ತಿಳಿಸಿದೆ.

ಕೋಝಿಕೋಡ್ ನಲ್ಲಿ ಕಲ್ಲುತೂರಾಟ ನಡೆಸಿದ್ದ ಸಂದರ್ಭದಲ್ಲಿ ಕೇರಳ ಸಾರಿಗೆ ಸಂಸ್ಥೆಯ ಬಸ್ ಚಾಲಕರೊಬ್ಬರ ಕಣ್ಣಿಗೆ ತೀವ್ರ ಗಾಯವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ತಿರುವನಂತಪುರಂನ ಪೋಥೆನ್ ಕೋಡ್ ಎಂಬಲ್ಲಿ 15 ಜನರ ಪ್ರತಿಭಟನಾಕಾರರ ಗುಂಪು ಅಂಗಡಿ, ಮುಂಗಟ್ಟುಗಳನ್ನು ಧ್ವಂಸಗೊಳಿಸಿದೆ. ಘಟನೆ ನಂತರ ಪಿಎಫ್ ಐನ ಕೆಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿ ಹೇಳಿದೆ.

ಕೊಲ್ಲಂನ ಪಲಿಮುಕ್ಕು ಎಂಬಲ್ಲಿ ಪ್ರತಿಭಟನಾಕಾರರ ಗುಂಪೊಂದು ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು, ಘಟನೆಯಲ್ಲಿ ಪೊಲೀಸ್ ಅಧಿಕಾರಿ ಆಂಥೋನಿ ಹಾಗೂ ಸರ್ಕಲ್ ಇನ್ಸ್ ಪೆಕ್ಟರ್ ನಿಖಿಲ್ ಗಾಯಗೊಂಡಿದ್ದಾರೆ.

Advertisement

ಬಿಜೆಪಿ ಆಕ್ರೋಶ:

ರಾಜ್ಯ ಗೃಹ ಖಾತೆ ಪಿಎಫ್ ಐನ ಗೂಂಡಾಗಿರಿಗೆ ತಲೆಬಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಆರೋಪಿಸಿದ್ದಾರೆ. ಹರತಾಳದ ಹೆಸರಿನಲ್ಲಿ ಪಿಎಫ್ ಐ ಹಿಂಸಾಚಾರಕ್ಕೆ ಇಳಿದಿದೆ. ಸಾರ್ವಜನಿಕರು, ವಾಹನಗಳ ಮೇಲೆ ಪೆಟ್ರೋಲ್ ಬಾಂಬ್ ಎಸೆಯುತ್ತಿದ್ದು, ಸಾರ್ವಜನಿಕ ಸೊತ್ತುಗಳನ್ನು ನಾಶ ಮಾಡುತ್ತಿದ್ದರೂ ಕೂಡಾ ಪೊಲೀಸರು ಮೂಕಪ್ರೇಕ್ಷಕರಾಗಿದ್ದಾರೆ ಎಂದು ಸುರೇಂದ್ರನ್ ಆಕ್ರೋಶ ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.

ಆರೋಪಿಗಳ ವಿರುದ್ಧ ಕಠಿಣ ಕ್ರಮ:

ಹರತಾಳದ ಸಂದರ್ಭದಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಲು ಪ್ರಯತ್ನಪಟ್ಟ ಪಿಎಫ್ ಐನ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೇರಳ ಪೊಲೀಸರು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಹರತಾಳದ ಹೆಸರಿನಲ್ಲಿ ಪಿಎಫ್ಐನ ಕಾರ್ಯಕರ್ತರು ಗುಂಪುಗೂಡುವುದನ್ನು ನಿಷೇಧಿಸುವಂತೆ ಕೇರಳ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕಾಂತ್ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಒಂದು ವೇಳೆ ಅಗತ್ಯಬಿದ್ದರೆ ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆಯುವಂತೆ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next