Advertisement

ಕೇರಳದಲ್ಲಿ ಲಾಕ್ ಡೌನ್ ನಿಯಮಗಳ ಸಡಿಲಿಕೆ: ದೇವಸ್ಥಾನ, ಸಲೂನ್ ತೆರೆಯಲು ಅವಕಾಶ

12:06 PM Jul 18, 2021 | Team Udayavani |

ತಿರುವನಂತಪುರಂ: ಕೇರಳ ಸರ್ಕಾರ ಶನಿವಾರ ಹೊಸ ಲಾಕ್ ಡೌನ್ ನಿಯಮಗಳನ್ನು ಪ್ರಕಟಿಸಿದೆ. ಕೆಲವೊಂದು ನಿಯಮಗಳನ್ನು ಸಡಿಲಿಸಿ  ದೇವಸ್ಥಾನ, ಕ್ಷೌರದಂಗಡಿ ತೆರೆಯಲು, ಚಿತ್ರೀಕರಣ ನಡೆಸಲು ಅನುಮತಿ ನೀಡಲಾಗಿದೆ.

Advertisement

ಕೋವಿಡ್ ಪಾಸಿಟಿವಿಟಿ ದರದ ಆಧಾರದಲ್ಲಿ ಪ್ರದೇಶಗಳನ್ನು ವಿಂಗಡಿಸಲಾಗಿದೆ. ಐದು ಶೇಕಡಾಕ್ಕಿಂತ ಕಡಿಮೆ ಇರುವ ಪ್ರದೇಶಗಳನ್ನು ಎ ವಿಭಾಗ, 5ರಿಂದ 10 ಶೇ. ನಡುವಿನ ಪ್ರದೇಶವನ್ನು ಬಿ ವಿಭಾಗವೆಂದು, 15 ಶೇಕಡಾವರೆಗಿನ ಪ್ರದೇಶಗಳನ್ನು ಸಿ ವಿಭಾಗವೆಂದೂ, ಶೇ.15 ಕ್ಕಿಂತ ಹೆಚ್ಚಿನ ಪಾಸಿಟಿವಿಟಿ ದರ ಹೊಂದಿರುವ ಪ್ರದೇಶಗಳನ್ನು ಡಿ ವಿಭಾಗವೆಂದು ಗುರುತಿಸಲಾಗಿದೆ.

ಬಕ್ರಿದ್ ಕಾರಣದಿಂದ ಬಟ್ಟೆ, ಪಾದರಕ್ಷೆಗಳು, ಆಭರಣಗಳು, ಗೃಹೋಪಯೋಗಿ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳು ಹಾಗೂ ಎಲ್ಲಾ ರೀತಿಯ ದುರಸ್ತಿ ಅಂಗಡಿಗಳು ಮತ್ತು ಅಗತ್ಯ ವಸ್ತುಗಳ ಅಂಗಡಿಗಳನ್ನು ಜುಲೈ 18, 19 ಮತ್ತು 20 ರಂದು ಬೆಳಿಗ್ಗೆ 7 ರಿಂದ ರಾತ್ರಿ 8 ರವರೆಗೆ ಎ, ಬಿ ಮತ್ತು ಸಿ ವಿಭಾಗದಲ್ಲಿ ಬರುವ ಪ್ರದೇಶಗಳಲ್ಲಿ ತೆರೆಯಲು ಅನುಮತಿಸಲಾಗಿದೆ. ಡಿ ವಿಭಾಗದಲ್ಲಿ ಬರುವ ಪ್ರದೇಶದಲ್ಲಿ ಈ ಅಂಗಡಿಗಳು ಜು.19ರಂದು ಮಾತ್ರ ತೆರೆಯಬಹುದು.

ಪೂಜಾ ಸ್ಥಳಗಳಲ್ಲಿ ವಿಶೇಷ ಸಂದರ್ಭದಲ್ಲಿ 40 ಜನರು ಸೇರಲು ಅನುಮತಿಸಲಾಗಿದೆ. ದೇವಸ್ಥಾನಗಳಿಗೆ ಭೇಟಿ ನೀಡುವ ಜನರು ಕನಿಷ್ಠ ಒಂದು ಡೋಸ್ ಲಸಿಕೆ ಪಡೆದಿರಬೇಕು. ಶಬರಿಮಲೆಯಲ್ಲಿ ಒಂದು ದಿನಕ್ಕೆ ಐದು ಸಾವಿರ ಜನರಿಗಿದ್ದ ಅವಕಾಶವನ್ನು ಹತ್ತು ಸಾವಿರ ಜನರಿಗೆ ಹೆಚ್ಚಿಸಲಾಗಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next