ತಿರುವನಂತಪುರ: ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಿರುದ್ಧ ಕೇರಳ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡುವ ಸಾಧ್ಯತೆಗಳು ಇವೆ ಎಂದು ಹೇಳಲಾಗಿದೆ. ಈ ಬಗ್ಗೆ ಯಾವ ರೀತಿಯಲ್ಲಿ ಮುಂದಿನ ಹೆಜ್ಜೆಗಳನ್ನು ಇರಿಸಬಹುದು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನು ಮತ್ತು ಸಾಂವಿಧಾನಿಕ ತಜ್ಞರ ಜತೆಗೆ ರಾಜ್ಯ ಸರ್ಕಾರ ಸಮಾಲೋಚನೆ ನಡೆಸುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ “ದ ಹಿಂದುಸ್ತಾನ್ ಟೈಮ್ಸ್’ ವರದಿ ಮಾಡಿದೆ.
ವಿವಿಗಳಲ್ಲಿ ನೇಮಕ ವಿಚಾರದ ಬಗ್ಗೆ ಎಲ್‌ಡಿಎಫ್ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಭಿನ್ನಾಭಿಪ್ರಾಯ ಬಿರುಸಾಗಿದೆ. ಮತ್ತೊಂದು ಬೆಳವಣಿಗೆಯಲ್ಲಿ ವಿವಿಗಳ ಕುಲಾಧಿಪತಿ ಹುದ್ದೆಯಿಂದ ರಾಜ್ಯಪಾಲರನ್ನೇ ತೆಗೆದುಹಾಕುವ ಸುಗ್ರಿವಾಜ್ಞೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಬಗ್ಗೆ ಸಿಪಿಎಂ ಕೇರಳ ರಾಜ್ಯ ಘಟಕದ ಅನುಮೋದನೆಯೂ ಸಿಕ್ಕಿದೆ.