ನವದೆಹಲಿ: ಆಡಳಿತಾರೂಢ ಸಿಪಿಐ(ಎಂ) ನೇತೃತ್ವದ ಸರ್ಕಾರದ ವಿರುದ್ಧ ಕೇರಳ ರಾಜ್ಯಪಾಲ ಅರೀಫ್ ಮೊಹಮ್ಮದ್ ಖಾನ್ ಬುಧವಾರ (ಫೆ.21) ಗಂಭೀರ ಆರೋಪ ಮಾಡಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:Delhi; ವಸತಿ ಕಟ್ಟಡದಲ್ಲಿ ಅಗ್ನಿ ಅವಘಡ: 5 ನೇ ಮಹಡಿಯಿಂದ ಜಿಗಿದ ಮಹಿಳೆಯರು
ಎನ್ ಡಿಟಿವಿ ಜೊತೆ ಮಾತನಾಡಿದ ಗವರ್ನರ್ ಮೊಹಮ್ಮದ್ ಖಾನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಡಳಿತ ವೈಖರಿ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದು, ಹಗಲಿನಲ್ಲಿ ಕೇರಳ ಸರ್ಕಾರ ಎಸ್ ಎಫ್ ಐ ಜತೆಗಿರುತ್ತದೆ, ಆದರೆ ರಾತ್ರಿ ಪಿಎಫ್ ಐಗಾಗಿ ಕಾರ್ಯನಿರ್ವಹಿಸುತ್ತದೆ ಎಂದು ಆರೋಪಿಸಿದರು.
ಕೇರಳದ ಜನರು ಮಾತನಾಡಿಕೊಳ್ಳುತ್ತಿರುವ ವಿಷಯವೇ ನನ್ನಲ್ಲಿರುವ ಆಧಾರ(ಎಸ್ ಎಫ್ ಐ-ಪಿಎಫ್ ಐ ಸಂಬಂಧ)ವಾಗಿದೆ. ಆದರೆ ಈಗ ನಾನು ನಿಮಗೆ ಖಚಿತವಾದ ಹೆಸರನ್ನು ಹೇಳಲಾರೆ. ಈ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆಗೆ ಮಾಹಿತಿ ಇದೆ ಎಂದು ಹೇಳಿದರು.
ವಿಶ್ವವಿದ್ಯಾಲಯದಲ್ಲಿನ ನೇಮಕಾತಿ ಸೇರಿದಂತೆ ಹಲವು ವಿಚಾರಗಳಲ್ಲಿ ರಾಜ್ಯಪಾಲರು ಮತ್ತು ಕೇರಳ ಸರ್ಕಾರದ ನಡುವೆ ಜಟಾಪಟಿ ನಡೆಯುತ್ತಲೇ ಇದ್ದು, ಇದೀಗ ಸರ್ಕಾರದ ವಿರುದ್ಧ ರಾಜ್ಯಪಾಲ ಖಾನ್ ಅವರು ಗಂಭೀರ ಆರೋಪ ಹೊರಿಸಿರುವುದು ಮತ್ತೊಂದು ಸಂಘರ್ಷಕ್ಕೆ ಕಾರಣವಾದಂತಾಗಿದೆ.