Advertisement

Kerala:ಧರ್ಮ ಆಧಾರಿತ ವಾಟ್ಸಾಪ್‌ ಗ್ರೂಪ್‌ ರಚನೆ ಆರೋಪ; ಇಬ್ಬರು ಐಎಎಸ್‌ ಅಧಿಕಾರಿಗಳ ಅಮಾನತು

01:08 PM Nov 12, 2024 | Team Udayavani |

ತಿರುವನಂತಪುರಂ: ಧರ್ಮದ ಆಧಾರದ ಮೇಲೆ ವಾಟ್ಸಾಪ್‌ ಗ್ರೂಪ್‌ ರಚನೆ ಮಾಡಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಕೇರಳ ಸರ್ಕಾರ ಇಬ್ಬರು ಐಎಎಸ್‌ ಅಧಿಕಾರಿಗಳನ್ನು ಅಮಾನತು ಮಾಡಿದೆ.

Advertisement

ಐಎಎಸ್‌ ಅಧಿಕಾರಿಗಳಾದ ಕೆ.ಗೋಪಾಲಕೃಷ್ಣನ್‌ ಮತ್ತು ಎನ್‌ ಪ್ರಶಾಂತ್‌ ಅಮಾನತುಗೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಅಧಿಕಾರಿಗಳ ಮೂಲಗಳ ಪ್ರಕಾರ, ಗೋಪಾಲಕೃಷ್ಣನ್‌ ಅವರು ಧರ್ಮ ಆಧಾರಿತ ವಾಟ್ಸಾಪ್‌ ಗ್ರೂಪ್‌ ರಚಿಸಿದ್ದು, ಪ್ರಶಾಂತ್‌ ಅವರು ಹಿರಿಯ ಅಧಿಕಾರಿಗಳನ್ನು ಕಟುವಾಗಿ ಟೀಕಿಸಿದ್ದಕ್ಕೆ ಇಬ್ಬರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ಅಕ್ಟೋಬರ್‌ 31ರಂದು ಕೇರಳದಲ್ಲಿ ಹಲವಾರು ಐಎಎಸ್‌ ಅಧಿಕಾರಿಗಳನ್ನು “ಮಲ್ಲು ಹಿಂದೂ ಆಫೀಸರ್ಸ್‌ ಎಂಬ ಹೆಸರಿನ ವಾಟ್ಸಾಪ್‌ ಗ್ರೂಪ್‌ ಗೆ ಅನಿರೀಕ್ಷಿತವಾಗಿ ಸೇರ್ಪಡೆಗೊಳಿಸಿದ ನಂತರ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು.

ಐಎಎಸ್‌ ಕೆ.ಗೋಪಾಲಕೃಷ್ಣನ್‌ ಅವರು ಈ ಗ್ರೂಪ್‌ ಅನ್ನು ಕ್ರಿಯೇಟ್‌ ಮಾಡಿ, ಕೇವಲ ಹಿಂದೂ ಅಧಿಕಾರಿಗಳನ್ನು ಮಾತ್ರ ಸೇರ್ಪಡೆಗೊಳಿಸಿದ್ದರು. ಇದು ಭಾರೀ ಆಕ್ಷೇಪಕ್ಕೆ ಕಾರಣವಾಗಿತ್ತು. ಈ ಗ್ರೂಪ್‌ ನಲ್ಲಿ ಜಾತ್ಯತೀತ ಮೌಲ್ಯಗಳನ್ನು ಗಾಳಿ ತೂರಿ, ಟೀಕೆ ಮಾಡಲಾಗುತ್ತಿದೆ ಎಂಬುದನ್ನು ಹಲವು ಅಧಿಕಾರಿಗಳ ಗಮನಿಸಿದ ನಂತರ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಮರುದಿನ ಗ್ರೂಪ್‌ ಅನ್ನು ಡಿಲೀಟ್‌ ಮಾಡಲಾಗಿತ್ತು ಎಂದು ವರದಿ ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆ.ಗೋಪಾಲಕೃಷ್ಣನ್‌ ಅವರು ತನ್ನ ಮೊಬೈಲ್‌ ಫೋನ್‌ ಅನ್ನು ಹ್ಯಾಕ್‌ ಮಾಡಲಾಗಿದೆ ಎಂದು ತಿಳಿಸಿದ್ದು, ಇದರ ಪರಿಣಾಮ ಅನಧಿಕೃತವಾಗಿ ತಮ್ಮ ಸಂಪರ್ಕದಲ್ಲಿರುವವರ ವಾಟ್ಸಾಪ್‌ ಗ್ರೂಪ್‌ ಕ್ರಿಯೇಟ್‌ ಮಾಡಲಾಗಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ವಿವಾದಿತ ವಾಟ್ಸಾಪ್‌ ಗ್ರೂಪ್‌ ರಚನೆಯಲ್ಲಿ ತಾನು ಶಾಮೀಲಾಗಿಲ್ಲ ಎಂದು ತಿಳಿಸಿದ್ದಾರೆ.

Advertisement

RSS ಮುಖಂಡರನ್ನು ಭೇಟಿಯಾದ ಐಪಿಎಸ್‌ ಅಧಿಕಾರಿ ವರ್ಗ:

ಆಡಳಿತಾರೂಢ ಎಲ್‌ ಡಿಎಫ್‌ ಸರ್ಕಾರದ ಅನುಮತಿ ಇಲ್ಲದೇ ಆರ್‌ ಎಸ್‌ ಎಸ್‌ ಮುಖಂಡರನ್ನು ಭೇಟಿಯಾಗಿದ್ದ ಐಪಿಎಸ್‌ ಅಧಿಕಾರಿ ಎಂಆರ್‌ ಅಜಿತ್‌ ಕುಮಾರ್‌ ಅವರನ್ನು ಇತ್ತೀಚೆಗೆ ವರ್ಗಾವಣೆ ಮಾಡಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಸಿಪಿಐ ಮತ್ತು ಮೈತ್ರಿ ಎಲ್‌ ಡಿಎಫ್‌ ನಡುವೆ ತೀವ್ರ ಸಂಘರ್ಷ ಏರ್ಪಟ್ಟಿತ್ತು. ಆದರೆ ಇದೇ ವಿಚಾರದಲ್ಲಿ ವರ್ಗಾವಣೆ ಮಾಡಲಾಗಿದೆ ಎಂಬುದನ್ನು ಕೇರಳ ಸರ್ಕಾರ ಅಧಿಕೃತವಾಗಿ ಸ್ಪಷ್ಟಪಡಿಸಿಲ್ಲ ಎಂದು ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next