ಕೊಚ್ಚಿ/ತಿರುವನಂತಪುರ: ಸ್ವಪ್ನಾ ಸುರೇಶ್‌ಗೆ ಕೇರಳ ಮುಖ್ಯಮಂತ್ರಿ ಕಚೇರಿಯಲ್ಲಿ ಭಾರಿ ಹಿಡಿತ ಹೊಂದಿದ್ದಳು ಎಂದು ಎನ್‌ಐಎ ಹೇಳಿದೆ. ಅಮಾನತಾಗಿರುವ ಐಎಎಸ್ ಅಧಿಕಾರಿ ಎಂ.ಶಿವಶಂಕರ್ ಮೂಲಕ ಪ್ರಭಾವ ವಿಸ್ತರಿಸಿಕೊಂಡಿದ್ದಳು ಎಂದು ಸಹಾಯಕ ಸಾಲಿಸಿಟರ್ ಜನರಲ್ ವಿಜಯ ಕುಮಾರ್ ಹೇಳಿದ್ದಾರೆ. ಗುರುವಾರ ಕೊಚ್ಚಿಯ ಎನ್‌ಐಎ ಕೋರ್ಟ್‌ನಲ್ಲಿ ತನಿಖಾ ಸಂಸ್ಥೆ ಪರ ವಾದಿಸಿದ ಅವರು, ಸ್ವಪ್ನಾಗೆ ಜಾಮೀನು ನೀಡಬಾರದು ಎಂದು ನ್ಯಾಯಾಧೀಶರಿಗೆ ಅರಿಕೆ ಮಾಡಿಕೊಂಡಿದ್ದಾರೆ. ಎನ್‌ಐಎಯ ಈ ಹೇಳಿಕೆಯಿಂದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆಗೆ ಒತಾಯಿಸುತ್ತಿರುವ ಪ್ರತಿಪಕ್ಷ ಯುಡಿಎಫ್, ಬಿಜೆಪಿಗೆ ಒಂದು ಹೊಸ ಅಸ್ತ್ರ ಸಿಕ್ಕಿದಂತಾಗಲಿದೆ.
ಗಮನಾರ್ಹ ಅಂಶವೆಂದರೆ ಎನ್‌ಐಎ ಇದೇ ಮೊದಲ ಬಾರಿಗೆ ಸ್ವಪ್ನಾ ಸುರೇಶ್ ಕೇರಳ ಮುಖ್ಯ ಮಂತ್ರಿ ಕಚೇರಿಯಲ್ಲಿ ಪ್ರಭಾವ ಹೊಂದಿದ್ದಳು ಎಂಬುದನ್ನು ದೃಢೀಕರಿಸಿದೆ. ರಾಜ್ಯ ಸರಕಾರ ಕೈಗೊಂಡಿದ್ದ ಸ್ಪೇಸ್ ಪಾರ್ಕ್ ಯೋಜನೆಗೆ ಸ್ವಪ್ನಾಳನ್ನು ನೇಮಕ ಮಾಡುವ ಬಗ್ಗೆ ಎಂ. ಶಿವಶಂಕರ್ ಕಾನೂನು ಬದ್ಧ ನಡೆಯನ್ನು ಅನುಸರಿಸಲೇ ಇಲ್ಲ ಎಂದು ವಿಜಯ ಕುಮಾರ್ ದೂರಿದರು. ಹಲವು ವಿಚಾರಗಳಲ್ಲಿ ಶಿವಶಂಕರ್ ಸ್ವಪ್ನಾಳಿಗೆ ಸಲಹೆ ನೀಡುತ್ತಿದ್ದರು ಎಂದರು.
ನೆರವು ನೀಡದ ಅಧಿಕಾರಿ: ಜು.5ರಂದು ಬಯ ಲಿಗೆ ಬಂದಿರುವ ಅಕ್ರಮ ಚಿನ್ನ ಸಾಗಣೆ ಪ್ರಕರಣ ದಲ್ಲಿ ಸಸ್ಪೆಂಡ್ ಆಗಿರುವ ಐಎಎಎಸ್ ಅಧಿಕಾರಿ ಎಂ.ಶಿವಶಂಕರ್ ಸ್ವಪ್ನಾಗೆ ನೆರವು ನೀಡಲಿಲ್ಲ. ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡ ರಾಜ ತಾಂತ್ರಿಕ ಬ್ಯಾಗ್‌ನಲ್ಲಿದ್ದ ಚಿನ್ನ ಬಿಡಿಸಲು ಪ್ರಭಾವ ಬೀರಬೇಕು ಎಂದು ಸ್ವಪ್ನಾ ಮನವಿ ಮಾಡಿದ್ದಳು ವಿಜಯ ಕುಮಾರ್ ಕೋರ್ಟ್‌ಗೆ ತಿಳಿಸಿದರು. ಪ್ರಕರಣ ಬೆಳಕಿಗೆ ಬಂದ ದಿನ, ಶಿವಶಂಕರ್ ಬಳಿಗೆ ತೆರಳಿದ ಸ್ವಪ್ನಾ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಳು. ಆದರೆ ನೆರವು ನೀಡಲು ಶಿವಶಂಕರ್ ತಿರಸ್ಕರಿಸಿದರು ಎಂದು ಮಾಹಿತಿ ನೀಡಿದರು.
ಎನ್‌ಐಎ ಸ್ವಪ್ನಾ ಗ್ಯಾಂಗ್ ಮೇಲೆ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆಯನ್ವಯ ಕೇಸು ದಾಖಲಿಸಿದ್ದ ಬಗ್ಗೆ ನ್ಯಾಯಾಧೀಶರು ಪ್ರಶ್ನೆ ಮಾಡಿದರು. ಅದನ್ನು ಸಮರ್ಥಿಸಿಕೊಂಡ ಎನ್‌ಐಎ ಪರ ವಕೀಲರು, ಚಿನ್ನವನ್ನು ದೇಶದಲ್ಲಿ ಭಯೋತ್ಪಾದಕ ಕೃತ್ಯಗಳಿಗೆ ನೆರವು ನೀಡುವುದಕ್ಕೆ ಬಳಕೆ ಮಾಡಿರುವ ಸಾಧ್ಯತೆ ಇದೆ. ಹೀಗಾಗಿ, ಈ ಕೇಸು ದಾಖಲಿಸಲಾಗಿದೆ ಎಂದರು. ಮುಂದಿನ ವಿಚಾರಣೆ ಸೋಮವಾರ ನಡೆಯಲಿದೆ.
ಉದ್ಯೋಗಿ ಸಸ್ಪೆಂಡ್: ಸ್ವಪ್ನಾ ವಿರುದ್ಧ ದೂರು ನೀಡಿದ್ದ ಎಲ್.ಎಸ್.ಶಿಬು ಎಂಬಾತನನ್ನು ಏರ್ ಇಂಡಿಯಾ ಸಸ್ಪೆಂಡ್ ಮಾಡಿದೆ. ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಆತ ಪ್ರಕರಣದ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದನೆಂದು ಆರೋಪಿಸಲಾಗಿದೆ.
ಎಲ್ಲೆಲ್ಲೂ ಪ್ರಭಾವಿ
ವಿಚಾರಣೆ ವೇಳೆ ಬಹಿರಂಗಗೊಂಡ ಮತ್ತೂಂದು ಸಂಗತಿಯೆಂದರೆ, ಸ್ವಪ್ನಾ ಸುರೇಶ್ ಪೊಲೀಸ್ ಇಲಾಖೆಯಲ್ಲಿಯೂ ಪ್ರಭಾವ ಹೊಂದಿದ್ದಳು. ಕೆಲವೊಂದು ಸಂದರ್ಭಗಳಲ್ಲಿ ಸ್ವಪ್ನಾ ಹೊಂದಿರುವ ಪ್ರಭಾವ ವನ್ನು ಇತರರು ದುರುಪಯೋಗ ಪಡಿಸಿ ಕೊಂಡಿದ್ದಾರೆ ಎಂದು ವಿಜಯ ಕುಮಾರ್ ಹೇಳಿದ್ದಾರೆ. ವಿಚಾರಣೆ ಬಳಿಕ ಮಾತನಾಡಿದ ಸ್ವಪ್ನಾ ಪರ ವಕೀಲ ಜಿಯೋ ಪೌಲ್ ತಮ್ಮ ಕಕ್ಷೀದಾರಳು ಸಿಎಂ ಕಚೇರಿಯಲ್ಲಿ ಹೆಚ್ಚಿನ ಪ್ರಭಾವ ಹೊಂದಿರುವ ಬಗ್ಗೆ ಎನ್‌ಐಎ ಸ್ಪಷ್ಟವಾಗಿ ಹೇಳಿಲ್ಲ ಎಂದರು.