ಮಡಿಕೇರಿ: ವೀರಾಜಪೇಟೆ ತಾಲೂಕಿನ ಮಾಕುಟ್ಟ ಅರಣ್ಯ ಪ್ರದೇಶ ದಲ್ಲಿ ಕೇರಳ ರಾಜ್ಯದ ತ್ಯಾಜ್ಯವನ್ನು ತಂದು ಸುರಿಯುತ್ತಿರುವ ಬಗ್ಗೆ ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅವರು ಮಂಗಳವಾರ ಪೆರುಂಬಾಡಿ ಚೆಕ್‌ಪೋಸ್ಟ್‌ನಿಂದ ಮಾಕುಟ್ಟ ಚೆಕ್‌ಪೋಸ್ಟ್ ವರೆಗೆ ರಸ್ತೆ ಬದಿ ಹಾಗೂ ಸೂಕ್ಷ್ಮ ಪ್ರದೇಶಗಳಿಗೆ ತೆರಳಿ ಪರಿಶೀಲಿಸಿದರು.
ಮಾಕುಟ್ಟದಲ್ಲಿರುವ ಪೊಲೀಸ್, ಅರಣ್ಯ ಇಲಾಖೆ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ಕೇರಳದಿಂದ ಬರುವ ಪ್ರತೀ ವಾಹನವನ್ನು ತಪಾಸಣೆ ಮಾಡಿ ಒಳಗೆ ಬಿಡುವಂತೆ ಸಿಬಂದಿಗೆ ಸೂಚಿಸಿದರು.
ಕೇರಳದಿಂದ ಕೆಲವರು ತ್ಯಾಜ್ಯವನ್ನು ವಾಹನದಲ್ಲಿ ತಂದು ನಮ್ಮ ಪ್ರದೇಶದೊಳಗೆ ಎಸೆಯಲು ಮುಂದಾಗುತ್ತಾರೆ. ಅಂಥ ಪ್ರಕಣವನ್ನು ಪತ್ತೆ ಮಾಡಿ ವಾಪಸ್ ಕಳುಹಿಸಲಾಗುತ್ತದೆ ಎಂದು ಚೆಕ್‌ಪೋಸ್ಟ್ ಸಿಬಂದಿ ಹೇಳಿದರು.
ಇದೇ ವೇಳೆ ತ್ಯಾಜ್ಯವನ್ನು ಹೆಕ್ಕಿ ವಿಲೇವಾರಿ ಮಾಡುವ ಕಾರ್ಯದಲ್ಲಿ ತೊಡಗಿದ್ದ ಅರಣ್ಯಾಧಿಕಾರಿಗಳು ಹಾಗೂ ಸಿಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.