ಕೊಟ್ಟಾಯಂ: ನಾಯಿ ಸಾಕಣೆ ಕೇಂದ್ರದ ಬೋರ್ಡ್ ಹಾಕಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ಕೇರಳ ಪೊಲೀಸರು ದಾಳಿ ನಡೆಸಿ ಅಪಾರ ಪ್ರಮಾಣದ ಗಾಂಜಾವನ್ನು ವಶಪಡಿಸಿದ್ದಾರೆ.
ರಾಬಿನ್ ಜಾರ್ಜ್ ಎಂಬಾತ ಕಳೆದ ಕೆಲ ಸಮಯದಿಂದ ‘ಡೆಲ್ಟಾ K9’ ಎನ್ನುವ ನಾಯಿ ಸಾಕಾಣೆ ಕೇಂದ್ರವನ್ನು ಇಟ್ಟುಕೊಂಡಿದ್ದ. ಬಾಡಿಗೆ ಮನೆಯಲ್ಲಿದ್ದ ಈತ ಸಾಮಾನ್ಯವಾಗಿ ಮನೆಯೊಳಗೆ ಯಾರನ್ನು ಬರಲು ಬಿಡುತ್ತಿರಲಿಲ್ಲ. ಮನೆಯ ಕಂಪೌಂಡ್ ಮೇಲೆ ನಾಯಿಗಳ ಪೈಂಟ್ ನ್ನು ಮಾಡಿಸಿದ್ದ. ಗಾಂಜಾ ಮಾರಾಟದಲ್ಲಿ ತೊಡಗಿದ್ದ ಚಾರ್ಜ್ ಮನೆಯ ಹೊರಗೆಯೇ ಬಂದಿದ್ದ ವ್ಯಕ್ತಿಗಳನ್ನು ಮಾತನಾಡಿಸಿಕೊಂಡು ʼಗಾಂಜಾ ಡೀಲ್ʼ ನ್ನು ಮಾಡುತ್ತಿದ್ದ.
ಹೊರಗಿನವರಿಗೆ ರಾಬಿನ್ ಗಾಂಜಾ ಡೀಲ್ ಮಾಡುತ್ತಿದ್ದ ಬಗ್ಗೆ ಗೊತ್ತಿರಲಿಲ್ಲ. ಯಾರಾದರೂ ಹೊರಗೆ ಹೋದರೆ ಅವರ ಮನೆಯ ನಾಯಿಯನ್ನು ನೋಡಿಕೊಳ್ಳಲು ಈತನ ಬಳಿ ಬಿಟ್ಟು ಹೋಗುತ್ತಿದ್ದರು. ಈತ ನಾಯಿ ನೋಡಿಕೊಂಡು ಆ ನಾಯಿಗಳಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲು ಮನೆಯ ಮಾಲೀಕರರಿಂದ ದಿನಕ್ಕೆ 1000 ರೂ.ವನ್ನು ಪಡೆದುಕೊಳ್ಳುತ್ತಿದ್ದ. ಇದಲ್ಲದೆ ರಾಬಿನ್ ತನ್ನ ಕೇಂದ್ರದಲ್ಲಿ ಪಿಟ್ಬುಲ್ಸ್ ಮತ್ತು ರೊಟ್ವೀಲರ್ಸ್ ಜಾತಿಯ ಸುಮಾರು 13 ಆಕ್ರಮಣ ನಾಯಿಗಳನ್ನು ಸಾಕಿಕೊಂಡಿದ್ದ.
ಖಾಕಿ ನೋಡಿದರೆ ಆಟ್ಯಾಕ್… ಗಾಂಜಾ ಡೀಲ್ ಮಾಡಿಕೊಂಡಿದ್ದ ರಾಬಿನ್ ತನ್ನ ವ್ಯಾಪಾರಕ್ಕೆ ಯಾವುದೇ ಅಡ್ಡಿಯಾಗಬಾರದೆಂದು ತಾನು ಸಾಕಿದ್ದ ನಾಯಿಗಳಿಗೆ ಭಯಾನಕ ಆಟ್ಯಾಕ್ ತರಬೇತಿಯನ್ನು ನೀಡಿದ್ದ. ಪೊಲೀಸರು ಅಂದರೆ ಖಾಕಿ ಬಟ್ಟೆ ಹಾಕಿಕೊಂಡಿದ್ದ ಯಾರನ್ನಾದರೂ ನೋಡಿದರೆ ಅವರ ಮೇಲೆ ಅಟ್ಯಾಕ್ ಮಾಡುವ ತರಬೇತಿಯನ್ನು ಈತ ತನ್ನ ನಾಯಿಗಳಿಗೆ ಟ್ರೇನ್ ಮಾಡಿದ್ದ.
ರಾಬಿನ್ ಮಾದಕ ದ್ರವ್ಯ ಚಟುವಟಿಕೆಗಳ ಬಗ್ಗೆ ಪೊಲೀಸರು ಮತ್ತು ಅಬಕಾರಿ ಇಲಾಖೆಗೆ ದೂರುಗಳು ಬಂದಿದ್ದವು. ಅದರಂತೆ ಪೊಲೀಸರು ಆತನ ನಿವಾಸದ ಬಳಿ ಬಂದಿದ್ದ ವೇಳೆ ಆತ ತನ್ನ ನಾಯಿಗಳನ್ನು ಬಿಟ್ಟು ಕಂಪೌಂಡ್ ಹಾರಿ ಪರಾರಿ ಆಗಿದ್ದಾರೆ. ಇತ್ತ ನಾಯಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಕೋಣೆಯೊಳಗೆ ಹೋದ ಬಳಿಕ ಪೊಲೀಸರು ಅಲ್ಲಿಂದ 17 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಸದ್ಯ ಆರೋಪಿಗಳಿ ರಾಬಿನ್ ಗಾಗಿ ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.