Advertisement

ಕೇರಳ-ದ.ಕ. ಪ್ರವೇಶಕ್ಕೆ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಕಡ್ಡಾಯ

12:42 AM Nov 28, 2021 | Team Udayavani |

ಮಂಗಳೂರು: ವಿದೇಶದಲ್ಲಿ ರೂಪಾಂತರಿತ ಕೊರೊನಾ ವೈರಸ್‌ ಒಮಿಕ್ರಾನ್‌ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶ ಪಡೆಯಲು ಆರ್‌ಟಿಪಿಸಿಆರ್‌ ನೆಗೆಟಿವ್‌ ಪ್ರಮಾಣ ಪತ್ರ ಹೊಂದುವುದು ಕಡ್ಡಾಯ ಗೊಳಿಸಲಾಗಿದೆ.

Advertisement

ಈ ಕುರಿತಂತೆ ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಪ್ರತಿಕ್ರಿಯಿಸಿದ್ದು, ಕೇರಳ ದಿಂದ ದ.ಕ. ಪ್ರವೇಶದ ಗಡಿಯಲ್ಲಿ ದಿನದ 24 ಗಂಟೆಯೂ ಕಟ್ಟುನಿಟ್ಟಿನ ನಿಗಾ ವಹಿಸು ವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.

ಗಡಿಯಲ್ಲಿ ಚೆಕ್‌ಪೋಸ್ಟ್‌ ಗಳನ್ನು ಮಾಡಿ 3 ಪಾಳಿಗಳಲ್ಲಿ ಅಧಿ ಕಾರಿ- ಸಿಬಂದಿ, ಪೊಲೀಸರನ್ನು ನಿಯೋಜಿಸಬೇಕು. ಕೇರಳದಿಂದ ಬರುವವ  ರೆಲ್ಲರೂ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಹೊಂದಿ ರುವುದನ್ನು, ಲಸಿಕೆ ಪಡೆದಿರು ವುದನ್ನು ಕಡ್ಡಾಯವಾಗಿ ಪರಿಶೀಲನೆ ಮಾಡಬೇಕು. ಬಂದ ಬಳಿಕ 7 ದಿನಗಳ ಕಾಲ ಕಾರಂಟೈನ್‌ ಆಗಬೇಕು ಎಂದು ಸಿಎಂ ನಿರ್ದೇಶಿಸಿದ್ದಾರೆ ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ ತಪಾಸಣೆಗೆ ಮತ್ತಷ್ಟು ವೇಗ ನೀಡಬೇಕು. ದೃಢಪಟ್ಟವರ ಪ್ರಾಥಮಿಕ ಸಂಪರ್ಕ ಪತ್ತೆ ಹಚ್ಚಬೇಕು. ಕೊರೊನಾ ಸಾಮುದಾಯಿಕವಾಗಿ ಹರಡದಂತೆ ಜಾಗೃತೆ ವಹಿಸಬೇಕು ಎಂದು ಸೂಚಿಸಿದ್ದಾರೆ ಎಂದರು.

ಮಾಸ್‌ ಸ್ಕ್ರೀನಿಂಗ್‌
ದ.ಕ. ಆರೋಗ್ಯಾಧಿಕಾರಿ ಡಾ| ಕಿಶೋರ್‌ ಕುಮಾರ್‌ ಪ್ರತಿಕ್ರಿಯಿಸಿ, ಎಲ್ಲ ಶಾಲಾ-ಕಾಲೇಜು ಕ್ಯಾಂಪಸ್‌ಗಳಲ್ಲಿ ಹಾಸ್ಟೆಲ್‌ಗ‌ಳಲ್ಲಿ ಮಾಸ್‌ ಸ್ಕ್ರೀನಿಂಗ್‌ಗೆ ಸೂಚನೆ ನೀಡಲಾಗಿದೆ. ಶಾಲಾ-ಕಾಲೇಜುಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ವಿಮಾನ ನಿಲ್ದಾಣದಲ್ಲಿಯೂ ಕಟ್ಟೆಚ್ಚರ ವಹಿಸಲು ನಿರ್ಧರಿಸಲಾಗಿದೆ.

Advertisement

ಇದನ್ನೂ ಓದಿ:ವನಿತಾ ಚಾಲೆಂಜರ್‌ ಕ್ರಿಕೆಟ್‌ ಸರಣಿ: ಮಂಧನಾ, ಶಫಾಲಿ, ಕೌರ್‌ ಗೈರು

ಎರಡೂ ಡೋಸ್‌ ಲಸಿಕೆ ಪಡೆದವರಿಗೆ ಮಾತ್ರ ಮಾಲ್‌ಗ‌ಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು. ಹೊಸ ತಳಿ ಪತ್ತೆಯಾದ ದೇಶಗಳಿಂದ ಮಂಗಳೂರಿಗೆ ನೇರ ವಿಮಾನವಿಲ್ಲ. ಆದರೂ ವಿದೇಶಗಳಿಂದ ಮಂಗಳೂರಿಗೆ ಆಗಮಿಸುವ ಪ್ರಯಾಣಿಕರ ಮೇಲೆ ನಿಗಾ ಇಡಲಾಗಿದೆ ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ ಕೊರೊನಾ ದಿನದ ಪ್ರಕರಣ ಇಳಿಕೆ ಕಾಣುತ್ತಿದೆ. ಸದ್ಯ ಇರುವ ಸಕ್ರಿಯ ಪ್ರಕರಣಗಳಲ್ಲಿ ಹದಿನೇಳು ವರ್ಷ ಕೆಳಗಿನ 32 ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಅದರಲ್ಲಿ ಕೆಲವರು ಶಾಲಾ-ಕಾಲೇಜು ವಿದ್ಯಾರ್ಥಿಗಳು. ಈ ಹಿನ್ನೆಲೆಯಲ್ಲಿ ಕೋವಿಡ್‌ ಸಕ್ರಿಯ ಪ್ರಕರಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಲಸಿಕೆ ಪಡೆಯಲು ಮುಂದೆ ಬರಬೇಕು ಎಂದಿದ್ದಾರೆ.

ಬಸ್‌ ಸಂಚಾರ ಮತ್ತೆ
ನಿರ್ಬಂಧ ಸಾಧ್ಯತೆ
ದಕ್ಷಿಣ ಕನ್ನಡ-ಕಾಸರಗೋಡು ನಡುವಣ ಕೆಲಶಉ ದಿನಗಳ ಹಿಂದೆಯಷ್ಟೇ ಬಸ್‌ ಸಂಚಾರ ಆರಂಭಗೊಂಡಿದೆ. ಆದರೆ ಇದೀಗ ಕೇರಳದಿಂದ ದ.ಕ. ಪ್ರವೇಶಕ್ಕೆ ಆರ್‌ಟಿಪಿಸಿಆರ್‌ ಪ್ರಮಾಣ ಪತ್ರ ಕಡ್ಡಾಯ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಉಭಯ ಜಿಲ್ಲೆಗಳ ನಡುವಣ ಬಸ್‌ ಸಂಚಾರ ಮತ್ತೆ ನಿರ್ಬಂಧಗೊಳ್ಳುವ ಸಾಧ್ಯತೆ ಇದೆ. ಈ ಕುರಿತಂತೆ ಎರಡು ದಿನದೊಳಗೆ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ಜಿಲ್ಲಾಧಿಕಾರಿ “ಉದಯವಾಣಿ’ಗೆ ತಿಳಿಸಿದ್ದಾರೆ.

ಪರೀಕ್ಷೆ ಹೆಚ್ಚಿಸಲು ಮತ್ತೆ ಸೂಚನೆ
ಉಡುಪಿ: ರೂಪಾಂತರಿತ ವೈರಸ್‌ ಉಡುಪಿ ಜಿಲ್ಲೆಗೆ ಹಬ್ಬದಂತೆ ಕಟ್ಟೆಚ್ಚರ ವಹಿಸಲು ಜಿಲ್ಲಾಡಳಿತಕ್ಕೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ನಿರ್ದೇಶನ ನೀಡಿದ್ದಾರೆ.

ಶನಿವಾರ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್‌ ನಡೆಸಿದ ಅವರು ಹಲವು ಸೂಚನೆಗಳನ್ನು ನೀಡಿದ್ದಾರೆ.

ಶಬರಿಮಲೆ ಯಾತ್ರಿಕರಿಗೆ ಪರೀಕ್ಷೆ
ಜ್ವರ, ಕೆಮ್ಮು, ಶೀತ ಇರುವವರೂ ಪರೀಕ್ಷೆಗೆ ಒಳಪಡಬೇಕು. ಎಲ್ಲ ರೀತಿಯ ಖಾಸಗಿ ವೈದ್ಯರಲ್ಲಿ ಬಂದ ರೋಗ ಲಕ್ಷಣಗಳಿರುವವರು ಕಡ್ಡಾಯ ವಾಗಿ ಪರೀಕ್ಷೆಗೆ ಒಳಪಡು ವಂತೆ ನೋಡಬೇಕು ಎಂದು ನಿರ್ಧರಿಸಲಾಗಿದೆ. ಶಬರಿಮಲೆಗೆ ಹೋಗುವವರು ಬಂದ ಬಳಿಕ ಪರೀಕ್ಷೆ ಜತೆಗೆ ಕ್ವಾರಂಟೈನ್‌ನಲ್ಲಿರಬೇಕು.

ಲಸಿಕೆಗೆ ಮತ್ತೆ ಆದ್ಯತೆ
ಮೂರನೇ ಅಲೆ ಬಾರದಂತೆ ತಡೆಯಲು ಎಲ್ಲರೂ ಕೊರೊನಾ ಲಸಿಕೆ ಹಾಕಿಸಿಕೊಳ್ಳಬೇಕು. ಮೊದಲ ಡೋಸ್‌ ಪಡೆಯದೆ ಇರುವವರು ತತ್‌ಕ್ಷಣ ಪಡೆಯಬೇಕು. ಎರಡನೇ ಡೋಸ್‌ ಪಡೆಯಲು ಬಾಕಿ ಇರುವವರೂ ತತ್‌ಕ್ಷಣ ಪಡೆಯಬೇಕು ಎಂದು ಜಿಲ್ಲಾಡಳಿತ ನಿರ್ದೇಶನ ನೀಡಿದೆ. ವಿಮಾನ, ರೈಲಿನ ಮೂಲಕ ಬರುವವರಿಗೂ ನಿಯಮಗಳನ್ನು ಸದ್ಯವೇ ಕೇಂದ್ರ ಸರಕಾರ ಹೊರಡಿಸಲಿದೆ. ಮತ್ತೆ ಹಿಂದಿನಂತೆ ಐಸೊಲೇಶನ್‌, ಮೈಕ್ರೋ ಕಂಟೈನ್ಮೆಂಟ್‌ ವಲಯವನ್ನು ಸ್ಥಾಪಿಸುವ ಸಾಧ್ಯತೆಗಳಿವೆ.

ವೀಡಿಯೋ ಕಾನ್ಫರೆನ್ಸ್‌ನಲ್ಲಿ ಜಿಲ್ಲಾಧಿಕಾರಿ ಕೂರ್ಮಾ ರಾವ್‌, ಜಿ.ಪಂ. ಸಿಇಒ ಡಾ| ನವೀನ್‌ ಭಟ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗಭೂಷಣ ಉಡುಪ, ಆರ್‌ಸಿಎಚ್‌ ಅಧಿಕಾರಿ ಡಾ| ಎಂ.ಜಿ. ರಾಮ ಮೊದಲಾದವರು ಪಾಲ್ಗೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next