Advertisement

ಬೈಕ್ ನಿಲ್ಲಿಸಲಿಲ್ಲ ಎಂದು ಯುವಕನ ಮೆಲೆ ಲಾಠಿ ಎಸೆದ ಪೊಲೀಸ್ ; ಆಮೇಲೇನಾಯ್ತು ನೋಡಿ!

09:54 AM Nov 30, 2019 | Hari Prasad |

ತಿರುವನಂತಪುರಂ: ರಸ್ತೆಯಲ್ಲಿ ಸಾಗುವ ವಾಹನ ಸವಾರರನ್ನು ನಿಲ್ಲಿಸಿ ಸೂಕ್ತ ದಾಖಲೆಗಳನ್ನು ಸಂಚಾರಿ ಪೊಲೀಸರು ತಪಾಸಣೆ ನಡೆಸುವುದು ನಮಗೆಲ್ಲಾ ತಿಳಿದೇ ಇದೆ. ಈ ಸಂದರ್ಭದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ನಿಲ್ಲುವ ಪೊಲೀಸ್ ಸಿಬ್ಬಂದಿ ತಮ್ಮ ಕೈಯಲ್ಲಿರುವ ಲಾಠಿಯನ್ನು ಸಾಂಕೇತಿಕವಾಗಿ ವಾಹನಗಳಿಗೆ ಅಡ್ಡ ಹಿಡಿದು ಅವುಗಳನ್ನು ನಿಲ್ಲಿಸುವುದು ರೂಢಿ.

Advertisement

ಆದರೆ ಕೇರಳದಲ್ಲಿ ವರದಿಯಾಗಿರುವ ಘಟನೆಯೊಂದರಲ್ಲಿ ತಪಾಸಣೆಗಾಗಿ ಬೈಕ್ ನಿಲ್ಲಿಸಲಿಲ್ಲ ಎಂದು ಸಿಟ್ಟುಗೊಂಡ ಪೊಲೀಸ್ ಸಿಬ್ಬಂದಿ ತನ್ನ ಕೈಯಲ್ಲಿದ್ದ ಲಾಠಿಯನ್ನು ಬೈಕ್ ಚಲಾಯಿಸುತ್ತಿದ್ದ ಯುವಕನ ಮೆಲೆ ಎಸೆದ ಪರಿಣಾಮ ಯುವಕನ ಬೈಕ್ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಕಾರಿಗೆ ಅಪ್ಪಳಿಸಿ ಆ ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಕೇರಳದ ಕೊಲ್ಲಂನಲ್ಲಿ ಈ ಘಟನೆ ನಡೆದಿದೆ. ಚಂದ್ರಮೋಹನ್ ಎಂಬ ಸಿವಿಲ್ ಪೊಲೀಸ್ ಸಿಬ್ಬಂದಿ ವಾಹನಗಳ ತಪಾಸಣೆಯಲ್ಲಿ ನಿರತರಾಗಿದ್ದರು. ಈ ವೇಳೆ ಬೈಕಿನಲ್ಲಿ ಬರುತ್ತಿದ್ದ 22 ವರ್ಷದ ಸಿದ್ದಿಕ್ ಎಂಬ ಯುವಕನ ಬೈಕನ್ನು ನಿಲ್ಲಿಸುವಂತೆ ಚಂದ್ರಮೋಹನ್ ಸೂಚಿಸಿದ್ದಾರೆ. ಆದರೆ ಸಿದ್ದಿಕ್ ಪೊಲೀಸ್ ಸೂಚನೆಯನ್ನು ಲಕ್ಷಿಸಿದೇ ಮುಂದೆ ಸಾಗಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಸಿಟ್ಟಿನಿಂದ ಪೊಲೀಸ್ ಸಿಬ್ಬಂದಿ ತನ್ನ ಕೈಯಲ್ಲಿದ್ದ ಲಾಠಿಯನ್ನು ಸಿದ್ದಿಕ್ ಬೈಕಿನತ್ತ ಎಸೆದಿದ್ದಾರೆ. ಈ ಗೊಂದಲದಲ್ಲಿ ಸಿದ್ದಿಕ್ ಚಲಾಯಿಸುತ್ತಿದ್ದ ಬೈಕ್ ನಿಯಂತ್ರಣ ಕಳೆದುಕೊಂಡು ಎದುರಿನಿಂದ ಬರುತ್ತಿದ್ದ ಕಾರಿಗೆ ಅಪ್ಪಳಿಸಿದೆ.


ಘಟನೆಯಲ್ಲಿ ಸಿದ್ದಿಕ್ ಅವರ ತಲೆಭಾಗಕ್ಕೆ ತೀವ್ರ ಪೆಟ್ಟಾಗಿದೆ ಮಾತ್ರವಲ್ಲದೇ ಬಲ ಕಾಲಿಗೂ ಏಟುಬಿದ್ದಿದೆ. ಘಟನೆ ನಡೆದ ಬಳಿಕ ಪೊಲೀಸರು ಆ ಯುವಕನನ್ನು ಸಮೀಪದಲ್ಲಿದ್ದ ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿ ಹೋಗಿದ್ದಾರೆ, ಘಟನೆಯ ಕುರಿತಾದಂತೆ ಮನೆಯವರಿಗೆ ಆಸ್ಪತ್ರೆಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ ಎಂದು ಯುವಕನ ತಂದೆ ಪೊಲೀಸರ ನಿರ್ಲಕ್ಷ್ಯತನವನ್ನು ಆರೋಪಿಸಿದ್ದಾರೆ.

ಪೊಲೀಸರ ವರ್ತನೆಯನ್ನು ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಇದಾದ ಬಳಿಕ ಕೇರಳ ಡಿಜಿಪಿ ಲೋಕನಾಥ್ ಬೆಹ್ರಾ ಅವರು ಈ ಘಟನೆಗೆ ಕಾರಣರಾದ ಪೊಲೀಸ್ ಸಿಬ್ಬಂದಿ ಮೇಲೆ ಕ್ರಿಮಿನಲ್ ಮೊಕದ್ದಮ್ಮೆ ದಾಖಲಿಸುವಂತೆ ಕೊಲ್ಲಂ ಎಸ್.ಪಿ.ಯವರಿಗೆ ಸೂಚನೆಯನ್ನು ನೀಡಿದ್ದಾರೆ. ಮತ್ತು ಘಟನೆ ಕುರಿತಾದಂತೆ ಡಿ.ಎಸ್.ಪಿ. ಶ್ರೇಣಿಯ ಇಬ್ಬರು ಅಧಿಕಾರಿಗಳಿಂದ ತನಿಖೆ ನಡೆಸಲಾಗುವುದು ಎಂದು ಸಹ ಬೆಹ್ರಾ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ವಾಹನ ನಿಬಿಡ ರಸ್ತೆಗಳಲ್ಲಿ ಪೊಲೀಸರು ತಪಾಸಣೆಗಾಗಿ ವಾಹನಗಳನ್ನು ನಿಲ್ಲಿಸುವ ವಿಧಾನಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ಇತ್ತೀಚೆಗಷ್ಟೇ ಪೊಲೀಸ್ ಇಲಾಖೆ ಮತ್ತು ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next