ತಿರುವನಂತಪುರ : ಕಾಂಗ್ರೆಸ್ ನಿಂದ ಸೀಟು ಸಿಗಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ನಾಯಕಿಯೊಬ್ಬರು ತಲೆ ಬೋಳಿಸಿಕೊಂಡು ಪ್ರತಿಭಟನೆ ಮಾಡಿರುವ ಘಟನೆ ನಡೆದಿದೆ. ಕೇರಳದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಿಕಾ ಸುಭಾಶ್ ತಲೆ ಬೋಳಿಸಿಕೊಂಡು ತಮ್ಮ ಸ್ಥಾನವನ್ನು ತ್ಯಜಿಸುವ ಮೂಲಕ ಕಾಂಗ್ರೆಸ್ ಪಕ್ಷದ ಮೇಲೆ ಗರಂ ಆಗಿದ್ದಾರೆ.
ಕೇರಳದಲ್ಲಿ ವಿಧಾನ ಸಭಾ ಚುನಾವಣೆ ಸಮೀಪಿಸಿದ್ದು, ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ಈ ಪಟ್ಟಿಯಲ್ಲಿ ಲತಿಕಾ ಹೆಸರು ಇಲ್ಲದ ಕಾರಣ ಕಾಂಗ್ರೆಸ್ ಕಚೇರಿ ಮುಂದೆಯೇ ತಲೆ ಕೂದಲನ್ನು ಬೋಳಿಸಿಕೊಂಡಿದ್ದಾರೆ.
ತಿರುವನಂತಪುರಂನ ಪಕ್ಷದ ಪ್ರಧಾನ ಕಚೇರಿ ಇಂದಿರಾ ಭವನದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಲತಿಕಾ, ರಾಜ್ಯ ಕಾಂಗ್ರೆಸ್ ಪಕ್ಷದ ಮುಖ್ಯಸ್ಥರಾದ ಮುಲ್ಲಪ್ಪಲ್ಲಿ ರಾಮಚಂದ್ರನ್ ನವದೆಹಲಿಯಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಈ ಪಟ್ಟಿಯಲ್ಲಿ ಮಹಿಳಾ ಅಭ್ಯರ್ಥಿಗಳ ಕೊರತೆ ಇದೆ ಎಂದಿದ್ದಾರೆ.
ಚುನಾವಣೆ ಪ್ರಚಾರಕ್ಕಾಗಿ ಓಡಾಡುತ್ತಿದ್ದ ಮಹಿಳಾ ನಾಯಕಿಯರನ್ನು ಅಭ್ಯರ್ಥಿಗಳಾಗಿ ಪರಿಗಣಿಸಿಲ್ಲ. ನಮ್ಮನ್ನು ಪರಿಗಣಿಸದೇ ಇರುವುದು ನೋವು ತಂದಿದೆ ಎಂದು ಲತಿಕಾ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮಹಿಳೆಯರಿಗಾಗಿ 20 ಸಿಟುಗಳನ್ನು ಕೇಳಿದ್ದೆವು ಎಂದು ತಿಳಿಸಿದ್ದಾರೆ. ಹಾಗೂ ಮುಂದೆ ನಾನು ಯಾವ ಪಕ್ಷಕ್ಕೂ ಸೇರುವುದಿಲ್ಲ ಎಂದು ನಿರ್ಧಾರ ಮಾಡಿದ್ದಾರೆ.