Advertisement

ಮಳೆಯ ಅಬ್ಬರಕ್ಕೆ ಕೇರಳ ತತ್ತರ: 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

10:05 PM Aug 01, 2022 | Team Udayavani |

ತಿರುವನಂತಪುರ/ಶಿಮ್ಲಾ: ಕೇರಳದ ಏಳು ಜಿಲ್ಲೆಗಳಲ್ಲಿ ಮಂಗಳವಾರ ಭಾರೀ ಮಳೆಯಾಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ನೆಚ್ಚರಿಕೆ ನೀಡಿದೆ.

Advertisement

ಹೀಗಾಗಿ, ಅಲ್ಲಿಗೆ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ತಿರುವನಂತಪುರ, ಕೊಲ್ಲಂ, ಪತನಂತಿಟ್ಟ, ಆಲಪ್ಪುಳ, ಕೊಟ್ಟಾಯಂ, ಎರ್ನಾಕುಳಂ ಮತ್ತು ಇಡುಕ್ಕಿ ಜಿಲ್ಲಾಡಳಿತಗಳು ಮಳೆ ಮತ್ತು ಪ್ರವಾಹದ ಮುನ್ನೆಚ್ಚರಿಕೆ ಎದುರಿಸಲು ಸನ್ನದ್ಧ ಸ್ಥಿತಿಯಲ್ಲಿ ಇರಬೇಕು ಎಂದು ಪ್ರತ್ಯೇಕ ಸೂಚನೆಯನ್ನೂ ರವಾನಿಸಲಾಗಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಏಳು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆಗೆ ಸಭೆಯನ್ನೂ ನಡೆಸಿ, ಅಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಉಕ್ಕಿ ಹರಿಯುತ್ತಿರುವ ನದಿಗಳು, ತೊರೆಗಳ ಹತ್ತಿರ ಜನರು ವಿನಾಕರಣ ತೆರಳಬಾರದು, ಪ್ರಾಣಿಗಳನ್ನು ಸ್ನಾನ ಮಾಡಿಸಲು ತೆರಳಬಾರದು ಸೇರಿದಂತೆ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಮೀನುಗಾರರು ಕೂಡ ಸಮುದ್ರಕ್ಕಿಳಿಯಬಾರದು, ಅಗ್ನಿಶಾಮಕದಳ, ರಾಜ್ಯ ವಿಪತ್ತು ನಿರ್ವಹಣಾ ಪಡೆ ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿ ಕಟ್ಟೆಚ್ಚರದಿಂದ ಇರಬೇಕು ಎಂದು ಪಿಣರಾಯಿ ವಿಜಯನ್‌ ಸೂಚಿಸಿದ್ದಾರೆ.

ಹಠಾತ್‌ ಪ್ರವಾಹ:
ಹಿಮಾಚಲ ಪ್ರದೇಶದ ಕುಲ್ಲುವಿನಲ್ಲಿ ಹಠಾತ್‌ ಪ್ರವಾಹ ಉಂಟಾಗಿದೆ. ನೀರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಮೂವರನ್ನು ರಕ್ಷಣಾ ಪಡೆಗಳು ರಕ್ಷಿಸಿದ್ದಾರೆ ಮತ್ತು ಲಾಹುಲ್‌-ಸ್ಪಿಟಿಯಲ್ಲಿ ಸುಮಾರು 150 ಮಂದಿ ಸಿಕ್ಕಿ ಹಾಕಿಕೊಂಡಿದ್ದು ಅವರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ 30 ಕಟ್ಟಡಗಳಲ್ಲಿರುವ ಮಂದಿಯನ್ನು ತೆರವುಗೊಳಿಸಲಾಗಿದೆ.

Advertisement

ಸಾಮಾನ್ಯ ಮುಂಗಾರು:
ಪ್ರಸಕ್ತ ತಿಂಗಳು ಮತ್ತು ಮುಂದಿನ ತಿಂಗಳಲ್ಲಿ ಮುಂಗಾರು ಸಾಮಾನ್ಯದ್ದಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ವಿಶೇಷವಾಗಿ ಉತ್ತರ ಪ್ರದೇಶದ ಪೂರ್ವ ಭಾಗ ಮತ್ತು ಜಾರ್ಖಂಡ್‌ಗೆ ಸಂಬಂಧಿಸಿದಂತೆ ಈ ಮುನ್ಸೂಚನೆ ಮಹತ್ವದ್ದಾಗಿರಲಿದೆ.

ಒಟ್ಟಾರೆಯಾಗಿ ಹೇಳುವುದಿದ್ದರೆ ಜು.1ರಿಂದ ಜು.31ರ ಅವಧಿಯಲ್ಲಿ ಶೇ.7ರಷ್ಟು ಹೆಚ್ಚುವರಿಯಾಗಿ ಮಳೆಯಾಗಿದೆ.

 

 

Advertisement

Udayavani is now on Telegram. Click here to join our channel and stay updated with the latest news.

Next