ಕಾಪು: ಕಳೆದ ಜೂನ್ 2ರಂದು ಕೇರಳದ ಮಲ್ಲಪ್ಪುರಂ ಜಿಲ್ಲೆಯಿಂದ ಕಾಲ್ನಡಿಗೆಯಿಂದ 2023ರ ಪವಿತ್ರ ಹಜ್ ಯಾತ್ರೆಗೆ ಹೊರಟ ಶಿಹಾಬ್ ಚೊಟ್ಟೂರು ಶನಿವಾರ ಉಡುಪಿ ಜಿಲ್ಲೆ ಪ್ರವೇಶಿಸಿದ್ದಾರೆ.
ಉಡುಪಿ ಜಿಲ್ಲೆಯ ಗಡಿ ಪ್ರದೇಶವಾದ ಹೆಜಮಾಡಿಗೆ ಆಗಮಿಸಿದ ಅವರನ್ನು ಕಣ್ಣಂಗಾರ್ ಜುಮ್ಮಾ ಮಸೀದಿಯ ಖತೀಬ್ ಅಶ್ರಫ್ ಸಖಾಫಿ ಕಿನ್ಯ ಹಾಗೂ ಮುಸ್ಲಿಮ್ ಬಾಂಧವರು ಸ್ವಾಗತಿಸಿದರು.
ಮೂಳೂರು ಕೇಂದ್ರ ಜುಮ್ಮಾ ಮಸೀದಿಯಲ್ಲಿ ಬೆಳಗ್ಗಿನ ಉಪಹಾರ ಸೇವಿಸಿದ ಅವರು ಸುಮಾರು ಅರ್ಧ ಗಂಟೆಗಳ ಕಾಲ ವಿಶ್ರಾಂತಿ ಹೊಂದಿ ತಮ್ಮ ಕಾಲ್ನಡಿಗೆ ಯಾತ್ರೆಯನ್ನು ಮುಂದುವರಿಸಿದರು. ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ಜನರು ಅವರನ್ನು ಕುತೂಹಲದಿಂದ ನೋಡಲು ಸಾಲುಗಟ್ಟಿ ನಿಂತಿದ್ದರು. ಯುವಕರು, ವೃದ್ಧರೂ, ಮಕ್ಕಳು ಅವರೊಂದಿಗೆ ಹೆಜ್ಜೆ ಹಾಕಿ ಅವರ ಯಾತ್ರೆಗೆ ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಶಿಹಾಬ್, ಕಾಲ್ನಡಿಗೆಯಲ್ಲಿ ತೆರಳಿ ಹಜ್ ಯಾತ್ರೆ ಕೈಗೊಳ್ಳಬೇಕು ಎಂಬ ನನ್ನ ಏಳು ವರ್ಷದ ಕನಸಾಗಿತ್ತು. ಮುಂದಿನ ವರ್ಷದ ಹಜ್‌ಗಾಗಿ ಕಾಲ್ನಡಿಗೆಯಲ್ಲಿ ಯಾತ್ರೆ ಕೈಗೊಂಡಿದ್ದೇನೆ. ಪಾಕಿಸ್ಥಾನ, ಇರಾನ್, ಇರಾಕ್, ಕುವೈತ್, ಸೌದಿ ಅರೇಬಿಯಾ ಮೂಲಕ ಮೆಕ್ಕಾ ತಲುಪಲಿದ್ದು, 8640 ಕಿಮೀ ಕ್ರಮಿಸಲಿದ್ದೇನೆ ಎಂದರು.
ಇಕ್ಬಾಲ್ ಕಟಪಾಡಿ ಮಾತನಾಡಿ, ನೂರು ವರ್ಷಗಳ ಹಿಂದೆ ಅಂದು ಈಗಿನಷ್ಟು ಸಂಪರ್ಕ ವ್ಯವಸ್ಥೆ ಇಲ್ಲದ ಸಮಯದಲ್ಲಿ ನಮ್ಮ ಹಿರಿಯರು ಕಾಲ್ನಡಿಗೆಯಲ್ಲಿ ಹಜ್ ಯಾತ್ರೆ ಕೈಗೊಂಡಿದ್ದರು. ಇತ್ತೀಚಿನ ಆಧುನಿಕ ವ್ಯವಸ್ಥೆ ಇರುವ ಸಂದರ್ಭದಲ್ಲಿ ಕಾಲ್ನಡಿಗೆಯಲ್ಲಿ ಹಜ್‌ಗೆ ಯಾತ್ರೆ ಕೈಗೊಂಡಿರುವುದು ನಮಗೆ ತಿಳಿದಿಲ್ಲ. 8000 ಕಿಮೀ ನಷ್ಟು ದೂರ ಕಾಲ್ನಡಿಗೆಯಲ್ಲಿ ತೆರಳುವುದು ಸಾಹಸವಾಗಿದೆ. ಇವರ ಯಾತ್ರೆ ಒಳ್ಳೆಯ ರೀತಿಯಲ್ಲಿ ನಡೆಯಲಿದೆ ಎಂದು ಹಾರೈಸಿದರು.
ಮೂಳೂರಿನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮೂಳೂರು ಜುಮ್ಮಾ ಮಸೀದಿ ಮುದರ್ರಿಸ್ ಅಶ್ರಫ್ ಸಖಾಫಿ ಕಕ್ಕಿಂಜೆ ಅಭಿನಂದಿಸಿದರು. ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ನೇಜಾರು, ಉಡುಪಿ ಜಿಲ್ಲಾ ಕರ್ನಾಟಕ ಮುಸ್ಲಿಮ್ ಜಮಾಅತ್ ಉಡುಪಿ ಜಿಲ್ಲಾ ಅಧ್ಯಕ್ಷ ಬಿ.ಎಸ್.ಎಫ್ ರಫೀಕ್, ಅಲ್ ಇಹ್ಸಾನ್ ಸಂಸ್ಥೆಯ ಮ್ಯಾನೇಜರ್ ಮುಸ್ತಫಾ ಸಅದಿ, ಮೂಳೂರು ಮಸೀದೊ ಅಧ್ಯಕ್ಷ ಸಯ್ಯದ್ ಮುರಾದರ್ ಅಲಿ, ಕಟಪಾಡಿ ಜುಮಾ ಮಸೀದಿಯ ಅಧ್ಯಕ್ಷ ಮುಹಿಯುದ್ದೀನ್ , ಕಾರ್ಯದರ್ಶಿ ಎಸ್.ಆರ್ ರಫೀಕ್, ಕೋಶಾಧಿಕಾರಿ ಎನ್.ಎಸ್. ಅಬ್ದುಲ್ ರಹ್ಮಾನ್ ಮತ್ತಿತರರು ಉಪಸ್ಥಿತರಿದ್ದರು.
ವಿವಿಧ ಕಡೆಗಳಲ್ಲಿ ಅಭಿನಂದನೆ: ಪಡುಬಿದ್ರಿಯಲ್ಲಿ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಶಾಲು ಹೊಂದಿಸಿ ಅಭಿನಂದಿಸಿದರು. ಉಚ್ಚಿಲದಲ್ಲಿ ಸಾಮಾಜಿಕ ಕಾರ್ಯಕರ್ತ ನಿಸಾರ್ ಅಹಮದ್ ಮೂಲ್ಕಿ ರಾಷ್ಟ್ರಧ್ವಜ ನೀಡಿ ಸ್ವಾಗತಿಸಿದರು. ಅಲ್‌ಇಹ್ಸಾನ್ ಶಿಕ್ಷಣ ಸಂಸ್ಥೆಯ ಮುಂಭಾಗದಲ್ಲಿ ಸಂಸ್ಥೆಯ ಮ್ಯಾನೇಜರ್ ಮುಸ್ತಫಾ ಸಅದಿ ಶಾಲು ಹೊದಿಸಿ ಅಭಿನಂದಿಸಿದರು. ಕಾಪುವಿನಲ್ಲಿ ಖಾಜಿ ಪಿ.ಬಿ. ಅಹ್ಮದ್ ಮುಸ್ಲಿಯಾರ್, ಖತೀಬ್ ಇರ್ಷಾದ್ ಸ ಅದಿ, ಅಬ್ಸುಲ್ ರಶೀದ್ ಸಖಾಪಿ, ಎಚ್ಮ ಅಬ್ದುಲ್ಲಾ ಸೇರಿದಂತೆ ವಿದ್ಯಾರ್ಥಿಗಳು ದಫ್ ಮೂಲಕ ಸ್ವಾಗತಿಸಿದರು.