ಗುಂಡ್ಲುಪೇಟೆ (ಚಾಮರಾಜನಗರ): ಮೈಸೂರಿನಿಂದ ಕೇರಳಕ್ಕೆ ಹೋಗುತ್ತಿದ್ದ ಚಿನ್ನದ ವ್ಯಾಪಾರಿಯ ಕಾರು ಅಡ್ಡಗಟ್ಟಿ ನಡು ರಸ್ತೆಯಲ್ಲೇ ಹಾಡು ಹಗಲೇ ದರೋಡೆ ಮಾಡಿರುವ ಘಟನೆ ತಾಲೂಕಿನ ಬೇಗೂರಿನ ಕೆಇಬಿ ಕಚೇರಿ ಮುಂಭಾಗದ ರಸ್ತೆಯಲ್ಲಿ ನಡೆದಿದೆ.
ಕೇರಳದ ಕಲ್ಪೇಟ ಮೂಲದ ಸುಖದೇವ್ ಎಂಬ ಚಿನ್ನದ ವ್ಯಾಪಾರಿ ಮೈಸೂರಿನಲ್ಲಿ ಚಿನ್ನ ಮಾರಾಟ ಮಾಡಿ ಚಾಲಕ ಅಶ್ರಪ್ ಜೊತೆಗೆ ಹೊಂಡಾ ಸಿಟಿ ಕಾರಲ್ಲಿ ಕೇರಳಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಎರಡು ಕಾರುಗಳಲ್ಲಿ ಬಂದ ಹೆಲ್ಮೇಟ್ ಧರಿಸಿದ ಎಂಟರಿಂದ ಹತ್ತು ಜನ ದರೋಡೆ ಕೋರರ ಗುಂಪೊಂದು ಸುಖದೇವ್ ಕಾರನ್ನು ಅಡ್ಡಗಟ್ಟಿ ಚಾಲಕ ಹಾಗೂ ಚಿನ್ನದ ವ್ಯಾಪಾರಿಗೆ ಥಳಿಸಿ ಕಾರಿನಿಂದ ಹೊರಗಳೆದೆ ಬಿಟ್ಟಿದೆ. ನಂತರ 40 ಲಕ್ಷ ರೂ. ಸಮೇತ ಕಾರು ತೆಗೆದುಕೊಂಡು ಪರಾರಿಯಾಗಿದ್ದಾರೆ.
ಬಂಧನ: ಪೊಲೀಸರ ದಿಕ್ಕು ತಪ್ಪಿಸಲು ಮೂರು ಕಾರುಗಳನ್ನು ಒಂದೊಂದು ದಿಕ್ಕಿಗೆ ಚಾಲನೆ ಮಾಡಿಕೊಂಡು ಹೋಗಿದ್ದು, ಒಂದು ಕಾರು ಸೋಮಹಳ್ಳಿ ಬಳಿ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಲ್ಲಿಗೆ ಗುದ್ದಿದೆ. ಈ ವೇಳೆ ಕಾರಿನಿಂದ ಇಳಿದ ದರೋಡೆಕೋರರು ಪರಾರಿಯಾಗಲು ಯತ್ನಿಸಿದ್ದಾರೆ. ಆ ಸಂದರ್ಭ ಸ್ಥಳೀಯರ ಸಹಕಾರದಿಂದ ಬೇಗೂರು ಠಾಣೆ ಪೊಲೀಸರು ಕೇರಳ ಮೂಲಕ 5 ಮಂದಿ ಆರೋಪಿಗಳನ್ನು ಬಂಧಿಸಿ ಕೇರಳ ನೋಂದಣಿಯ ಇನೋವಾ ಕಾರನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೂ ದರೋಡೆ ಪ್ರಕರಣ ನಡೆದ ಕೂಡಲೇ ಚಾಮರಾಜನಗರ, ಗುಂಡ್ಲುಪೇಟೆ, ಬೇಗೂರು, ತೆರಕಣಾಂಬಿ ರಸ್ತೆಗಳಲ್ಲಿ ಪೊಲೀಸರು ನಾಕಾಬಂದಿ ಹಾಕಿ ಎಲ್ಲಾ ಕಾರುಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಚಿನ್ನದ ವ್ಯಾಪಾರಿ ಸುಖದೇವ್ ಸಂಚರಿಸುತ್ತಿದ್ದ ಹೊಂಡಾ ಸಿಟಿ ಕಾರು ಹಾಗು ಹಣ ಇನ್ನೂ ಪತ್ತೆಯಾಗಿಲ್ಲ.
ದರೋಡೆ ಪ್ರಕರಣದಲ್ಲಿ ಬಂಧಿಸಿರುವ 5 ಮಂದಿ ಆರೋಪಿಗಳನ್ನು ಬೇಗೂರು ಠಾಣೆ ಪೊಲೀಸರು ತೀವ್ರ ತಪಾಸಣೆಗೆ ಒಳಪಡಿಸಿದ್ದಾರೆ. ಘಟನೆ ಮಾಹಿತಿ ಅರಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೋ ಹಾಗು ಐಜಿಪಿ ಬೋರಲಿಂಗಯ್ಯ ಠಾಣೆ ಹಾಗು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಘಟನೆ ಸಂಬಂಧ ತನಿಖೆ ಚುರುಕುಗೊಳಿಸಿ ಪ್ರಕರಣದಲ್ಲಿ ಭಾಗಿಯಾದ ಉಳಿದ ಆರೋಪಿಗಳ ಬಂಧನಕ್ಕೆ ಸೂಕ್ತ ಕ್ರಮ ವಹಿಸುವಂತೆ ಸೂಚಿಸಿದ್ದಾರೆ.