Advertisement

ತೊಗರಿ ಖರೀದಿ ಕೇಂದ್ರ ಬಂದ್‌: ರೈತರ ಸಂಕಷ್ಟ

10:37 AM Feb 08, 2018 | |

ಹಟ್ಟಿ ಚಿನ್ನದ ಗಣಿ: ಪಟ್ಟಣದ ಪಾಮನಕಲ್ಲೂರು ಕ್ರಾಸ್‌ ಬಳಿ ಇರುವ ಬೆಂಬಲ ಬೆಲೆ ತೊಗರಿ ಖರೀದಿ ಕೇಂದ್ರವನ್ನು ಚೀಲ ಮತ್ತು ದಾಸ್ತಾನಿಗೆ ಜಾಗೆ ಕೊರತೆಯಿಂದಾಗಿ ಕಳೆದ ನಾಲ್ಕು ದಿನಗಳಿಂದ ಬಂದ್‌ ಮಾಡಲಾಗಿದೆ. ಇದೀಗ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಮುಂದಿನ ಆದೇಶದವರೆಗೆ ತೊಗರಿ ಖರೀದಿ ಕೇಂದ್ರವನ್ನು ಬಂದ್‌ ಮಾಡುವಂತೆ ಆದೇಶಿಸಿದ್ದು ಇದು ಈಗಾಗಲೇ ಕೇಂದ್ರಕ್ಕೆ ತೊಗರಿಯನ್ನು ತೆಗೆದುಕೊಂಡ ಬಂದ ರೈತರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ.

Advertisement

ಒಂದೆಡೆ ತೊಗರಿ ಖರೀದಿ ಕೇಂದ್ರದ ಸಿಬ್ಬಂದಿಯಿಂದ ಅಸಮರ್ಪಕ ನಿರ್ವಹಣೆ, ಅವ್ಯವಹಾರದಿಂದ ಕಂಗೆಟ್ಟಿದ್ದ ರೈತರು ಕಳೆದ ನಾಲ್ಕು ದಿನಗಳಿಂದ ಕೇಂದ್ರಕ್ಕೆ ಬೀಗ ಜಡಿದಿದ್ದರಿಂದ ಮತ್ತಷ್ಟು ಸಮಸ್ಯೆ ಎದುರಿಸುವಂತಾಗಿದೆ. ಹಟ್ಟಿ ತೊಗರಿ ಖರೀದಿ ಕೇಂದ್ರದಲ್ಲಿ 1188 ರೈತರು ಆನ್‌ಲೈನ್‌ ಮೂಲಕ ಹೆಸರು ನೋಂದಣಿ ಮಾಡಿಸಿದ್ದಾರೆ. ಕೇಂದ್ರದ ಸಿಬ್ಬಂದಿ ಸರದಿ ಪ್ರಕಾರ ರೈತರಿಂದ ತೊಗರಿ ಖರೀದಿಸದೇ ತಮಗೆ ಕಮೀಷನ್‌ ನೀಡಿದವರಿಂದ ಖರೀದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಕೇಂದ್ರಕ್ಕೆ ಮೊದಲು ತೊಗರಿ ತಂದ ರೈತರ ಚೀಲಗಳು ಆವರಣದಲ್ಲೇ ಹಾಗೇ ಇವೆ. 

ಮಾರುಕಟ್ಟೆಯಲ್ಲಿ ಮಾರಾಟ: ಕಳೆದ ನಾಲ್ಕು ದಿನಗಳಿಂದ ಕೇಂದ್ರಕ್ಕೆ ಬೀಗ ಜಡಿದಿದ್ದರಿಂದ ಕಂಗಾಲಾದ ತೊಗರಿ ತಂದ ರೈತರು ತಮ್ಮ ಬೆಳೆಗೆ ರಕ್ಷಣೆ ಇಲ್ಲದ್ದರಿಂದ ಅನಿವಾರ್ಯವಾಗಿ ಖಾಸಗಿ ವರ್ತಕರಲ್ಲಿ ಕಡಿಮೆ ಬೆಲೆಗೆ ಮಾರಿಕೊಳ್ಳುತ್ತಿದ್ದಾರೆ. ಒಟ್ಟಾರೆ ಈ ಬಾರಿ ಈ ಭಾಗದಲ್ಲಿ ತೊಗರಿ ಬೆಳೆದ ರೈತರ ಸಂಕಷ್ಟಕ್ಕೆ ಕೊನೆ ಇಲ್ಲ ಎಂಬಂತಾಗಿದೆ.

ತೊಗರಿ ಖರೀದಿ ಇಂದಿನಿಂದ ಸ್ಥಗಿತ
ರಾಯಚೂರು: ಬೆಂಬಲ ಬೆಲೆ ಯೋಜನೆಯಡಿ ಡಿ.12ರಿಂದ 90 ದಿನಗಳ ಅವಧಿ ವರೆಗೆ 1,65,750 ಮೆಟ್ರಿಕ್‌ ಟನ್‌ ತೊಗರಿ ಖರೀದಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ನಿರೀಕ್ಷಿತ ಗುರಿ ತಲುಪಿದ ಹಿನ್ನೆಲೆಯಲ್ಲಿ ಫೆ.8ರಿಂದ ತೊಗರಿ ಖರೀದಿ ಪ್ರಕ್ರಿಯೆ ತಾತ್ಕಲಿಕವಾಗಿ ಸ್ಥಗಿತಗೊಳಿಸುತ್ತಿದ್ದು, ಸರ್ಕಾರದ ಅನುಮತಿ ಮೇರೆಗೆ ಖರೀದಿ ದಿನಾಂಕ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ನೋಂದಣಿ ಮಾಡಿದ ರೈತರಿಂದ ಖರೀದಿ ಪ್ರಕ್ರಿಯೆ ಜಾರಿಯಲ್ಲಿದ್ದು, ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಲ್‌ ಪ್ರಮಾಣದಂತೆ, ಸುಮಾರು 89,110 ರೈತರಿಂದ 14,10,000 ಕ್ವಿಂಟಲ್‌ ತೊಗರಿ ಖರೀದಿಸಲಾಗಿದೆ. ಇನ್ನೂ 2,47,500 ಕ್ವಿಂಟಲ್‌ ಮಾತ್ರ ತೊಗರಿ ಖರೀದಿ ಬಾಕಿ ಇದೆ. ಎರಡು ದಿನಗಳೊಳಗೆ ಖರೀದಿಸಲಾಗುವುದು. ಕೇಂದ್ರ ಸರ್ಕಾರವು ಜ.31ರಂದು ಹೆಚ್ಚುವರಿಯಾಗಿ ಅನುಮತಿಸಿರುವ ಪ್ರಮಾಣವನ್ನು ಬಾಕಿ ಉಳಿದಿರುವ ರೈತರಿಂದ ಖರೀದಿಸಿದರೂ ಇನ್ನೂ ಹೆಚ್ಚಿನ ಸಂಖ್ಯೆಯ ರೈತರು ಬಾಕಿ ಉಳಿಯುವರು. ಅವಶ್ಯವಿರುವ ಪ್ರಮಾಣ ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಮತ್ತೂಮ್ಮೆ ಕೋರಲಾಗುವುದು. ನಂತರ ತೊಗರಿ ಖರೀದಿ ಪ್ರಕ್ರಿಯೆ ಮುಂದುವರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Advertisement

ಬಯಲಿನಲ್ಲಿ ತೊಗರಿ ಸಂಗ್ರಹಿಸಿಟ್ಟಿದ್ದು ಸೂಕ್ತ ರಕ್ಷಣೆ ಇಲ್ಲ. ಗಾಡಿ ಬಾಡಿಗೆ ಮಾಡಿ ತಂದು ಇಷ್ಟು ದಿನ ಕಾದು ಕುಳಿತಿದ್ದು ವ್ಯರ್ಥವಾಗಿದೆ. ರೈತರು ನಷ್ಟ ಅನುಭವಿಸುವಂತಾಗಿದೆ. 
 ಅಮರಪ್ಪ, ಮೇದಿನಾಪುರ ಗ್ರಾಮದ ರೈತ

ಎಪಿಎಂಸಿ ಉಪ ನಿರ್ದೇಶಕರಿಗೆ ಹಟ್ಟಿ ಕೇಂದ್ರದ ಸಮಸ್ಯೆ ಬಗೆಹರಿಸುವಂತೆ ತಿಳಿಸಲಾಗಿದೆ. ಇಂದಿನಿಂದ ಕೇಂದ್ರವನ್ನು ಮುಂದಿನ ಆದೇಶ ಬರುವವರೆಗೂ ಬಂದ್‌ ಮಾಡಲಾಗುವುದು. ಈಗಾಗಲೇ ತೂಕ ಮಾಡಿಟ್ಟ ತೊಗರಿಯನ್ನು ಸಾಗಿಸಲು ವಾಹನ ವ್ಯವಸ್ಥೆ ಕಲ್ಪಿಸಲಾಗುವುದು.
 ಡಾ| ಬಗಾದಿ ಗೌತಮ್‌, ಜಿಲ್ಲಾಧಿಕಾರಿಗಳು.

Advertisement

Udayavani is now on Telegram. Click here to join our channel and stay updated with the latest news.

Next