Advertisement

ಹಲವು ವಿಶೇಷಗಳ ಕೆಂಪೇಗೌಡರ ಭವ್ಯ ಕಂಚಿನ ಪ್ರತಿಮೆ

12:18 AM Nov 10, 2022 | Team Udayavani |

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನದ ಬಳಿ ನಿರ್ಮಾಣ ಮಾಡಲಾಗಿರುವ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಭವ್ಯ ಪ್ರತಿಮೆಯು ಉದ್ಘಾಟನೆಗೆ ಸಜ್ಜಾಗಿದೆ. ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರು ಈ ಪ್ರತಿಮೆಯನ್ನು ಅನಾವರಣ ಮಾಡಲಿದ್ದಾರೆ. ಈ ಪ್ರತಿಮೆಯ ವಿಶೇಷವೇನು? ಇದನ್ನು ನಿರ್ಮಿಸಿದವರು ಯಾರು? ಇತ್ಯಾದಿ ವಿವರಗಳು ಇಲ್ಲಿವೆ…

Advertisement

ಕಂಚಿನ ಪ್ರತಿಮೆ
ಪ್ರತಿಮೆಯನ್ನು ಸಂಪೂರ್ಣವಾಗಿ ಕಂಚಿನಲ್ಲಿ ತಯಾರಿಸಲಾಗಿದ್ದು, ಇದಕ್ಕಾಗಿ 98 ಟನ್‌ ಕಂಚನ್ನು ಬಳಸಲಾಗಿದೆ. ಅಡಿಪಾಯಕ್ಕಾಗಿ 120 ಟನ್‌ ಕಬ್ಬಿಣ ಬಳಕೆ ಮಾಡಲಾಗಿದೆ. 18 ಅಡಿ ವಿಸ್ತಾರವಾದ ಕಟ್ಟೆಯನ್ನು ಪ್ರತಿಮೆಯ ಅಡಿಯಲ್ಲಿ ನಿರ್ಮಿಸಲಾಗಿದ್ದು, ಕೆಂಪೇಗೌಡರ ಜೀವನದ ಪ್ರಮುಖ ಘಟನೆಗಳನ್ನು ಬಣ್ಣಿಸುವ ನಾಲ್ಕು ಉಬ್ಬು ಶಿಲ್ಪಗಳನ್ನು ಕಂಚಿನಲ್ಲಿಯೇ ತಯಾರಿಸಿ ನಾಲ್ಕೂ ಕಡೆಗಳಲ್ಲಿ ಅಂಟಿಸಲಾಗಿದೆ. ಕೇವಲ 18 ತಿಂಗಳಲ್ಲಿ ಇಂತಹ ಬೃಹತ್‌ ಪ್ರತಿಮೆಯ ಸ್ಥಾಪನೆಯ ಎಲ್ಲ ಕೆಲಸವನ್ನು ಮುಗಿಸಿರುವುದು ದಾಖಲೆಯೇ ಸರಿ.

ಸುತಾರ್‌ ನಿರ್ಮಾತೃ
“ಪ್ರಗತಿಯ ಪ್ರತಿಮೆ’ (ಸ್ಟಾಚ್ಯು ಆಫ್ ಪ್ರಾಸ್ಪಿರಟಿ) ಎಂಬ ಹೆಸರಿನಿಂದ ಗುರುತಿಸಲ್ಪಟ್ಟಿರುವ ಈ ಪ್ರತಿಮೆಯನ್ನು ರೂಪಿಸಿದ ಕೀರ್ತಿ ರಾಮ ಸುತಾರ್‌ಗೆ ಸಲ್ಲುತ್ತದೆ. ಅವರಲ್ಲಿ ಇಂಥ ಪ್ರತಿಮೆ ತಯಾರಿಸುವಲ್ಲಿ ಅಪಾರವಾದ ಪರಿಣತಿಯಿದೆ. ಈಗಾಗಲೇ ಅವರು ಗುಜರಾತಿನ ಕೇವಡಿಯಾದಲ್ಲಿ ಸದಾರ್‌ ವಲ್ಲಭ ಭಾಯಿ ಪಟೇಲ್‌ ಪ್ರತಿಮೆಯನ್ನು ತಯಾರಿಸಿ ಪ್ರತಿಷ್ಠಾಪಿಸಿದ್ದಾರೆ.

ಉತ್ತರ ಪ್ರದೇಶದ ನೊಯಿಡಾದಿಂದ ಸುಮಾರು 3 ಸಾವಿರ ಕಿಲೋ ಮೀಟರ್‌ ದೂರದಲ್ಲಿ ಇರುವ ಬೆಂಗಳೂರಿಗೆ ಹಲವು ಭಾಗಗಳಲ್ಲಿ ಲಾರಿಗಳ ಮೂಲಕ ಪ್ರತಿಮೆಯನ್ನು ಸುರಕ್ಷಿತವಾಗಿ ಸಾಗಿಸಿ ಸ್ಥಾಪಿಸಿರುವುದು ವಿಶೇಷ.

ವಿಶ್ವ ದಾಖಲೆ
ಈ ಪ್ರತಿಮೆ ತನ್ನದೇ ಆದ ರೀತಿಯಲ್ಲಿ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಇದು ನಗರ ನಿರ್ಮಾತೃವೊಬ್ಬರ ವಿಶ್ವದ ಅತಿ ಎತ್ತರದ ಪ್ರತಿಮೆ ಎಂದು ಲಂಡನ್‌ನ ವರ್ಲ್ಡ್ ಬುಕ್‌ ಆಫ್ ರೆಕಾರ್ಡ್‌ನಲ್ಲಿ ಪ್ರಮಾಣಿತವಾಗಿದೆ. ಪ್ರತಿಮೆಯ ಸುತ್ತಲೂ 22 ಎಕರೆ ಪ್ರದೇಶದಲ್ಲಿ ಥೀಮ್‌ ಪಾರ್ಕ್‌ ಬರಲಿದ್ದು, ಇದರ ಜತೆಗೆ ನಾಲ್ಕು ಗೋಪುರಗಳು ತಲೆ ಎತ್ತಲಿವೆ. ಈ ಗೋಪುರಗಳು ಬೆಂಗಳೂರಿನಲ್ಲಿ ಈಗಾಗಲೇ ಇರುವ ಕೆಂಪೇಗೌಡರ ಗಡಿ ಗೋಪುರಗಳ ಪ್ರತಿರೂಪಗಳಾಗಿವೆ.
ಈ ಗೋಪುರಗಳ ನಿರ್ಮಾಣದಲ್ಲಿ ಕರ್ನಾಟಕದ ವಿವಿಧ ಕಡೆಗಳಿಂದ ತಂದಿರುವ ಪವಿತ್ರ ಮೃತ್ತಿಕೆಯನ್ನು ಶಾಶ್ವತಗೊಳಿಸಲಾಗುತ್ತದೆ. ಬೆಂಗಳೂರನ್ನು ಕರ್ನಾಟಕದ ಉಳಿದ ಭಾಗದ ಜತೆಗೆ ತಳಕು ಹಾಕುವ ಉದ್ದೇಶದಿಂದ ಈ ಕಾರ್ಯ ಮಾಡಲಾಗಿದೆ. ಕೆಂಪೇಗೌಡರು ಕೇವಲ ಬೆಂಗಳೂರಿನ ನಿರ್ಮಾಪಕರು ಅಲ್ಲ ಅವರು ಆಧುನಿಕ ಕರ್ನಾಟಕದ ನಿರ್ಮಾಪಕರೂ ಆಗಿರುತ್ತಾರೆ ಎಂಬ ಸಂಕೇತವನ್ನು ಧ್ವನಿಸುವುದು ಸರ್ಕಾರದ ಉದ್ದೇಶವಾಗಿದೆ.

Advertisement

ಮೃತ್ತಿಕೆ ಸಂಗ್ರಹಣೆ ಎಲ್ಲೆಲ್ಲಿ?
ಕರ್ನಾಟಕದ ಎಲ್ಲ ಕಡೆಯ ಗ್ರಾಮ, ಪಟ್ಟಣ ಮತ್ತು ನಗರಗಳು ಸೇರಿದಂತೆ ಒಟ್ಟು 22 ಸಾವಿರ ಪ್ರದೇಶಗಳಿಂದ ಮೃತ್ತಿಕೆ ಸಂಗ್ರಹಿಸಲಾಗಿದೆ. ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ ಎನಿಸಿದ ವೀರ ರಾಣಿ ಕಿತ್ತೂರು ರಾಣಿ ಚನ್ನಮ್ಮ ಬ್ರಿಟಿಷರನ್ನು ಎದುರಿಸಿದ ಕಿತ್ತೂರು ಕೋಟೆಯಿಂದ, ಹಿಂದೂ ಹೃದಯ ಸಾಮ್ರಾಟರು ಎನಿಸಿದ ವಿಜಯನಗರ ಸಾಮ್ರಾಜ್ಯದ ಅಧಿದೇವತೆಯಾಗಿದ್ದ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದಿಂದ ಮತ್ತು ಭಕ್ತಿ ಭಂಡಾರಿ ಬಸವಣ್ಣನವರು ಐಕ್ಯವಾದ ಕೂಡಲ ಸಂಗಮದಿಂದ ಮೃತ್ತಿಕೆ ಸಂಗ್ರಹಿಸಿರುವುದು ಈ ಪರ್ಯಟನದ ಪಾವಿತ್ರ್ಯವನ್ನು ಹೆಚ್ಚಿಸಿದೆ.

ಪ್ರಗತಿಯ ಪ್ರತಿಮೆ
ಕೆಂಪೇಗೌಡರ ಪ್ರತಿಮೆಗೆ “ಪ್ರಗತಿಯ ಪ್ರತಿಮೆ’ ಎಂದು ಹೆಸರು ಇಡಲಾಗಿದೆ. ಕೆಂಪೇಗೌಡರ ಈ ಎತ್ತರದ ಪ್ರತಿಮೆಯನ್ನು ಸರ್ಕಾರದ ಅಭಿವೃದ್ಧಿಯ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಒಂದು ಆದರ್ಶವಾಗಿ ಇಟ್ಟುಕೊಂಡು ಇಡೀ ಕರ್ನಾಟಕವನ್ನು ಪ್ರಗತಿಯ ಹಾದಿಯಲ್ಲಿ ತೆಗೆದುಕೊಂಡು ಹೋಗಬೇಕು ಎಂದು ನಿರ್ಧರಿಸಲಾಗಿದೆ.

ಪ್ರತಿಮೆಯ ಉದ್ದೇಶ, ಧ್ಯೇಯ ವಾಕ್ಯ
ನವ ಕರ್ನಾಟಕ ನಿರ್ಮಾಣದಲ್ಲಿ ಯುವಶಕ್ತಿಯನ್ನು ಬಳಸಿಕೊಳ್ಳುವುದು ಇದರ ಉದ್ದೇಶವಾಗಿದೆ. ತಮ್ಮ 27ನೇ ವಯಸ್ಸಿನಲ್ಲಿ ಕೆಂಪೇಗೌಡರು ಬೆಂಗಳೂರು ಕೋಟೆ ನಿರ್ಮಿಸಿದ್ದರು. ಯೌವನದಲ್ಲಿ ನಮಗೆ ಉನ್ನತ ಕನಸುಗಳು ಇರಬೇಕು, ಉನ್ನತ ಆದರ್ಶಗಳು ಇರಬೇಕು, ಉನ್ನತ ಗುರಿಗಳು ಇರಬೇಕು ಎಂಬುದನ್ನು ನಮಗೆ ಕೆಂಪೇಗೌಡರು ತಿಳಿಸಿ ಕೊಟ್ಟಿದ್ದಾರೆ. ತಮ್ಮ ಕ್ರಿಯೆಗಳ ಮೂಲಕ ಸಾಧಿಸಿ ತೋರಿಸಿದ್ದಾರೆ. ಹೀಗೆ ಆದರ್ಶಗಳು, ಕನಸುಗಳು ಮತ್ತು ಗುರಿಗಳು ಇಲ್ಲದೇ ಇದ್ದರೆ ಇಂಥ ಪ್ರತಿಮೆಗಳು ಕೇವಲ ಸ್ಮಾರಕಗಳಾಗಿ ಮಾತ್ರ ಉಳಿಯುತ್ತವೆ. ಅವು ನಮ್ಮನ್ನು ಪ್ರಗತಿಯ ಹಾದಿಯಲ್ಲಿ ಕರೆದುಕೊಂಡು ಹೋಗುವ ಶ್ರದ್ಧಾ ಕೇಂದ್ರಗಳು ಎಂದು ಅನಿಸುವುದಿಲ್ಲ. ಅವರ ಹಾದಿಯಲ್ಲಿ ನಾವು ನಡೆಯಬೇಕಾಗಿದೆ. ಅದಕ್ಕಾಗಿಯೇ ನಾವು, ಬನ್ನಿ ನಾಡ ಕಟ್ಟೋಣ, ಕೆಂಪೇಗೌಡರ ಹಾದಿಯಲ್ಲಿ ನಡೆಯೋಣ ಎಂದು ಈ ಇಡಿ ಸಮಾರಂಭಕ್ಕೆ ಒಂದು ಘೋಷ ವಾಕ್ಯ ರೂಪಿಸಿದ್ದೇವೆ. ಅದು ಆ ದಿನಕ್ಕೆ ಮಾತ್ರ ಉಳಿಯುವಂತಹುದು ಅಲ್ಲ. ನಮ್ಮ ಸರ್ಕಾರದ ಧ್ಯೇಯ ವಾಕ್ಯವೂ ಮುಂದೆ ಅದೇ ಆಗಿರುತ್ತದೆ ಎಂದು ಹೇಳುತ್ತಾರೆ ನಾಡಪ್ರಭು ಕೆಂಪೇಗೌಡರ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಅಶ್ವತ್ಥನಾರಾಯಣ.

ಕೆಂಪೇಗೌಡ ರಥ ತಲುಪಿದ ಜನರು
3,61,02,058 ಜನರು ಕೆಂಪೇಗೌಡರ ರಥ ತಲುಪಿದ್ದಾರೆ. 21 ರಥ ಬಳಸಲಾಗಿದ್ದು, ಅವುಗಳು 20 ಸಾವಿರ ಕಿ.ಮೀ. ಕ್ರಮಿಸಿವೆ. ಸಾಮಾಜಿಕ ಮಾಧ್ಯಮಗಳಲ್ಲಿ 62.90 ಲಕ್ಷ ಅಭಿಯಾನ ಇಂಪ್ರಷನ್ಸ್‌ ಹಾಗೂ 53,33,600 ಪ್ರೊಫೈಲ್‌ಗ‌ಳು ತಲುಪಿದೆ.

ಈ ಪ್ರತಿಮೆ ಏಕೆ?
ಬೆಂಗಳೂರು ನಗರದಲ್ಲಿ 1 ಕೋಟಿ ಜನರು ವಾಸವಾಗಿದ್ದಾರೆ. ದೇಶದ ಆರ್ಥಿಕತೆಯಲ್ಲಿ ಈ ನಗರವು ತನ್ನದೇ ಆದ ಮಹತ್ವಗಳಿಸಿದೆ. ಇದು ಭಾರತದ ಆರ್ಥಿಕ ರಾಜಧಾನಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ದೇಶದ ಅತಿ ದೊಡ್ಡ ಐ.ಟಿ ರಾಜಧಾನಿ, ಸ್ಟಾರ್ಟ್‌ಅಪ್‌ಗಳ ಮತ್ತು ನಾವೀನ್ಯತೆಯ ತವರು ಎನಿಸಿರುವ ಬೆಂಗಳೂರಿನಲ್ಲಿ ಅವರೆಲ್ಲ ನೆಲೆ ಕಂಡುಕೊಳ್ಳುವ ಜತೆಗೆ ಸುಖ, ಸಂಪತ್ತು ಸಮೃದ್ಧಿಯನ್ನೂ ಸಂಪಾದಿಸಿದ್ದಾರೆ. ಡಿಜಿಟಲ್‌ ಜಗತ್ತಿನ ಅವಸ್ಥಾಂತರದಲ್ಲಿಯೂ ಈ ನಗರ ಮಹತ್ತರ ಪಾತ್ರ ವಹಿಸಿದೆ. ಇಂತಹ ಜಾಗತಿಕ ಮಹತ್ವದ ಮತ್ತು ಅವಕಾಶಗಳ ನೆಲೆವೀಡು ಎನಿಸಿರುವ ಬೆಂಗಳೂರು ನಗರ ನಾಡಪ್ರಭು ಕೆಂಪೇಗೌಡರಿಗೆ ಋಣಿಯಾಗಿದೆ.

ಐದು ಶತಮಾನಗಳ ಹಿಂದೆ ಕೆಂಪೇಗೌಡರು ಈ ನಗರವನ್ನು ನಿರ್ಮಿಸಿದ್ದರು. ವಿಜಯನಗರ ಅರಸರ ಕಾಲದಲ್ಲಿ ಇದ್ದ ಕೆಂಪೇಗೌಡರು ಇಂತಹ ನಗರವೊಂದರ ಕನಸು ಅಥವಾ ಹೊಳಹು ಕಂಡುದೇ ಒಂದು ವಿಸ್ಮಯ. ಏಕೆಂದರೆ ಈ ನಗರವನ್ನು ನಿರ್ಮಿಸುವ ಸಮಯದಲ್ಲಿಯೇ ಅವರಿಗೆ ಎಷ್ಟು ದೊಡ್ಡ ದೂರದೃಷ್ಟಿ ಇತ್ತು ಎನ್ನುವುದು ಎದ್ದು ಕಾಣುತ್ತದೆ. ಇಂತಹ ಪ್ರಮಾಣದ ಒಂದು ನಗರಕ್ಕೆ ಏನೆಲ್ಲ ಇರಬೇಕು ಎಂದು ಅವರು ಆಗಲೇ ಯೋಚಿಸಿದ್ದರು. ಅದರಲ್ಲಿ ನಿರಂತರ ನೀರು ಪೂರೈಕೆಗೆ ಕೆರೆ ಕಟ್ಟೆಗಳನ್ನು ಕಟ್ಟಿದ್ದು, ಜನರ ಬದುಕಿಗೆ ಭರವಸೆ ಬೇಕು ಎಂದು ದೇವಾಲಯಗಳನ್ನು ನಿರ್ಮಿಸಿದ್ದು ಎಷ್ಟು ಮುಖ್ಯವೋ ಇದು ಒಂದು ವಾಣಿಜ್ಯ ನಗರವೂ ಆಗಿರಬೇಕು ಎಂದು ಅವರು ಆಗಲೇ 64 ಪೇಟೆಗಳನ್ನು ಸ್ಥಾಪಿಸಿದರು. ಆ ಪೇಟೆಗಳು ಈಗಲೂ ಇವೆ ಎಂಬುದು ಕೆಂಪೇಗೌಡರು ರೂಪಿಸಿದ ಅರ್ಥಿಕತೆ ಎಷ್ಟು ದೂರದೃಷ್ಟಿಯದು ಮತ್ತು ತಾಳುವಂಥದು ಎಂದು ಅರ್ಥವಾಗುತ್ತದೆ.

ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರ
ಈಗಿನ ಸರ್ಕಾರ ರಚನೆಯಾದ ಕೂಡಲೇ ಆಗಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಈ ಸ್ಮಾರಕದ ರಚನೆಗೆ ಮುನ್ನುಡಿ ಬರೆದರು. ಅವರು ತಮ್ಮ ಮೊದಲ ಆಯವ್ಯಯದಲ್ಲಿಯೇ ಇದರ ಪ್ರಸ್ತಾಪ ಮಾಡಿದರು. ಮುಂದಿನ ಹೊಣೆಯನ್ನು ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರಕ್ಕೆ ವಹಿಸಿದರು. ಈ ಪ್ರಾಧಿಕಾರದ ಅಧ್ಯಕ್ಷರಾಗಿ ಮುಖ್ಯಮಂತ್ರಿಗಳೇ ಇರುತ್ತಾರೆ. ರಾಮನಗರ ಜಿಲ್ಲೆಯ ಮಾಗಡಿಯವರಾದ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಈ ಪ್ರಾಧಿಕಾರದ ಉಪಾಧ್ಯಕ್ಷರಾಗಿದ್ದಾರೆ.

– ಪ್ರತಿಮೆ ಉದ್ದ-108 ಅಡಿ
– ಪ್ರತಿಮೆಗೆ ಬಳಸಿರುವ ಲೋಹ- ಕಂಚು
– ಬಳಸಿರುವ ಪ್ರಮಾಣ- 98 ಟನ್‌
– ಅಡಿಪಾಯ- 120 ಟನ್‌ ಕಬ್ಬಿಣ
– ಕಟ್ಟೆ-18 ಅಡಿ
– ವಿಶೇಷತೆ- ಕೆಂಪೇಗೌಡರ ಜೀವನದ ಪ್ರಮುಖ ಘಟನೆಗಳನ್ನು ಬಣ್ಣಿಸುವ ನಾಲ್ಕು ಉಬ್ಬು ಶಿಲ್ಪಗಳನ್ನು ಕಂಚಿನಲ್ಲಿಯೇ ತಯಾರಿಸಿ ನಾಲ್ಕೂ ಕಡೆಗಳಲ್ಲಿ ಅಂಟಿಸಲಾಗಿದೆ.
– ಪ್ರತಿಮೆ ತಯಾರಾದ ಸಮಯ- 18 ತಿಂಗಳು

Advertisement

Udayavani is now on Telegram. Click here to join our channel and stay updated with the latest news.

Next