Advertisement

ಕೆಂಪೇಗೌಡರು ನಾಡಪ್ರಭುಗಳಾಗೇ ಇರಲಿ 

12:36 PM Jun 21, 2017 | |

ಬೆಂಗಳೂರು: ರಾಜ್ಯ ಸರ್ಕಾರದಿಂದ ಇದೇ ಮೊದಲ ಬಾರಿಗೆ ಜೂನ್‌ 27ರಂದು ನಡೆಯಲಿರುವ ನಾಡಪ್ರಭು ಕೆಂಪೇಗೌಡ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಒಕ್ಕಲಿಗರ ಸಂಘದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು. ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮಿಜೀ ಸಮ್ಮುಖದಲ್ಲಿ ನಡೆದ ಸಭೆ ಸಚಿವ ಡಿ.ಕೆ.ಶಿವಕುಮಾರ್‌, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ಪರಸ್ಪರ ಮುಖಾಮುಖೀಯಾದ ಸನ್ನಿವೇಶಕ್ಕೂ ಸಾಕ್ಷಿಯಾಯಿತು.

Advertisement

ಕೆಂಪೇಗೌಡ ಜಯಂತಿ ಆಚರಣೆಗೆ ಸಂಬಂಧಪಟ್ಟಂತೆ ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಮಂಗಳವಾರ ಒಕ್ಕಲಿಗರ ಸಂಘವು ಕುವೆಂಪು ಕಲಾಕ್ಷೇತ್ರದಲ್ಲಿ ಸಭೆ ಏರ್ಪಡಿಸಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ, “ಜಯಂತಿಗಳು ಕೇವಲ ಒಂದು ವರ್ಗದವರ ಆಚರಣೆಗೆ ಸೀಮಿತವಾಗಬಾರದು.

ಜೂನ್‌ 27ರಂದು ನಡೆಯುವ ಕೆಂಪೇಗೌಡ ಜಯಂತಿ ಆಚರಣೆ ವೇಳೆ ಹಾಗೂ ಮೆರವಣಿಗೆಯಲ್ಲಿ “ಒಕ್ಕಲಿಗರಿಗೆ ಜೈ’ ಎಂದು ಜೈಕಾರ ಹಾಕುವುದು ಬೇಡ. ಕೆಂಪೇಗೌಡರು ಒಕ್ಕಲಿಗರ ಪ್ರಭುವಾಗದೇ ನಾಡಪ್ರಭುವಾಗಿಯೇ ಇರಲಿ. ಜಯಂತಿ ಆಚರಣೆ ಸಂಭ್ರಮಕ್ಕೆ ಹೊರತು ಶಕ್ತಿ ಪ್ರದರ್ಶನಕ್ಕಲ್ಲ ಎಂಬುದು ತಿಳಿದಿರಲಿ,’ ಎಂದು ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರಕ್ಕೆ ಅಭಿನಂದನೆ: ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, “ಕೆಂಪೇಗೌಡರು ನಿರ್ಮಿಸಿದ ಕೆರೆಗಳನ್ನು ಉಳಿಸಿಕೊಳ್ಳುವ ವರ್ಷವಾಗಿ ಈ ವರ್ಷ ಆಚರಣೆ ಮಾಡಿದರೆ ಕೆಂಪೇಗೌಡರ ಜಯಂತಿ ಅರ್ಥಪೂರ್ಣವೆನಿಸಲಿದೆ. ಕೆರೆ ಉಳಿಸಿದರೆ ಕೆಂಪೇಗೌಡರಿಗೆ ನಾವು ಗೌರವ ಸಲ್ಲಿಸಿದಂತಾಗುತ್ತದೆ.

ಡಿ.ಕೆ.ಶಿವಕುಮಾರ್‌ ಅವರು ಪ್ರಾಮಾಣಿಕವಾಗಿ ಪ್ರಯತ್ನ ನಡೆಸಿ ಸರ್ಕಾರದ ವತಿಯಿಂದಲೇ ಕೆಂಪೇಗೌಡ ದಿನಾಚರಣೆ ನಡೆಯುವಂತೆ ಮಾಡಿದ್ದಾರೆ. ಇದಕ್ಕಾಗಿ ಸಮಾಜದ ಪರವಾಗಿ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲಾಗುವುದು’ ಎಂದು ಹೇಳಿದರು.

Advertisement

ಸಚಿವ ಡಿ.ಕೆ.ಶಿವಕುಮಾರ್‌ ಮಾತನಾಡಿ, “ಪ್ರತಿ ವರ್ಷ ಜೂನ್‌ 27ಕ್ಕೆ ಸರ್ಕಾರದ ವತಿಯಿಂದಲೇ ಕೆಂಪೇಗೌಡ ಜಯಂತಿ ಆಚರಿಸಲಾಗುವುದು. ಇದು ಜಾತಿ, ಮತದ ಆಚರಣೆಯಾಗಿ ನಡೆಯುವುದಿಲ್ಲ. ಬೆಂಗಳೂರಿನಲ್ಲಿ ಮಾತ್ರವಲ್ಲದೆ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲೂ ಕೆಂಪೇಗೌಡ ದಿನಾಚರಣೆ ನಡೆಸುವ ಬಗ್ಗೆಯೂ ಶೀಘ್ರವೇ ಸರ್ಕಾರ ಆದೇಶ ಹೊರಡಿಸಲಿದೆ.

ಮೊದಲ ಬಾರಿಗೆ ಜಯಂತಿ ಕಾರ್ಯಕ್ರಮವನ್ನು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಆಯೋಜಿಸಲಾಗಿದೆ. ಮುಂದಿನ ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಲು ಅನುಕೂಲವಾಗುವಂತಹ ಸ್ಥಳದಲ್ಲಿ ಆಯೋಜಿಸಲಾಗುವುದು. ನಗರದ ಮೆಯೋಹಾಲ್‌ನಲ್ಲಿ ಸದ್ಯದಲ್ಲೇ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಕಚೇರಿ ಆರಂಭವಾಗಲಿದೆ,’ ಎಂದು ಹೇಳಿದರು.

“ಹಿರಿಯರು ಕಟ್ಟಿದ ಒಕ್ಕಲಿಗರ ಸಂಘ ದೇವಸ್ಥಾನವಿದ್ದಂತೆ. ಹಾಗಾಗಿ ಮನಬಂದಂತೆ ಹೇಳಿಕೆ ನೀಡುವುದು, ಅಪರಾಧ ಚಟುವಟಿಕೆಗಳಲ್ಲಿ ತೊಡಗುವುದನ್ನು ಬಿಡಬೇಕು. ಸಂಘದ ಎಲ್ಲರೂ ಸಂಘಟಿತವಾಗಿ ಕಾರ್ಯ ನಿರ್ವಹಿಸಬೇಕು,’ ಎಂದು ಕಿವಿಮಾತು ಹೇಳಿದರು.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, “ನಾನು ಮುಖ್ಯಮಂತ್ರಿಯಾಗಿದ್ದಾಗ ಮಾಡಲಾಗದ ಕೆಲಸವನ್ನು ಡಿ.ಕೆ.ಶಿವಕುಮಾರ್‌ ಅವರು ಮಾಡಿದ್ದಾರೆ. ಕೆಂಪೇಗೌಡ ಜಯಂತಿಯನ್ನು ಸರ್ಕಾರದ ವತಿಯಿಂದಲೇ ಆಚರಿಸಲಾಗುತ್ತಿದೆ. ಸ್ಮಾರ್ಟ್‌ಸಿಟಿ, ಅಮೃತ್‌ನಂತಹ ಯೋಜನೆಗಳನ್ನು 500 ವರ್ಷಗಳ ಹಿಂದೆಯೇ ಕೆಂಪೇಗೌಡರು ಘೋಷಿಸಿದ್ದರು. ನಾವು ಈಗ ಅದನ್ನು ಹೊಸ ಯೋಜನೆಗಳಿಂದ ಪ್ರಕಟಿಸುತ್ತಿದ್ದೇವೆ,’ ಎಂದರು.

ಸ್ಫಟಿಕಪುರಿ ಮಠದ ನಂಜಾವಧೂತ ಸ್ವಾಮೀಜಿ, “ಕಳೆದ ಮೂರು ವರ್ಷಗಳಲ್ಲಿ ನಡೆದ ಘಟನೆಗಳನ್ನು ಗಮನಿಸಿದರೆ ಸಮಾಜವನ್ನು ನಾನಾ ರೀತಿಯಲ್ಲಿ ನಿಯಂತ್ರಿಸುವ ಕೆಲಸ ನಡೆಯುತ್ತಿರುವುದು ಗೊತ್ತಾಗುತ್ತದೆ. ಕೆಂಪೇಗೌಡರ ಜಯಂತಿ ಮಣ್ಣಿನ ಮಕ್ಕಳ ಹಬ್ಬವಾಗಬೇಕು. ದಸರಾ ವೈಭವದ ರೀತಿಯಲ್ಲಿ ಧರ್ಮ, ಜಾತಿ ವರ್ಗ ಮೀರಿದ ಅದ್ಧೂರಿ ಆಚರಣೆಯಾಗಬೇಕು. ಬೆಂಗಳೂರಿನಲ್ಲಿ ಕೆಂಪೇಗೌಡರ ಬೃಹತ್‌ ಪ್ರತಿಮೆ ನಿರ್ಮಾಣವಾಗಬೇಕು,’ ಎಂದು ಅಭಿಪ್ರಾಯಪಟ್ಟರು.

ಶಾಸಕ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ, ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಎನ್‌.ಬೆಟ್ಟೇಗೌಡ ಇತರರು ಉಪಸ್ಥಿತರಿದ್ದರು.

ಒಕ್ಕಲಿಗರ ಸಂಘದ ಬೇಡಿಕೆಗಳು
ಕೆಂಪೇಗೌಡರ ಇತಿಹಾಸವನ್ನು ಪಠ್ಯಕ್ರಮದಲ್ಲಿ ಅಳಡಿಸಬೇಕು. ಹೊಸದಾಗಿ ರಚನೆಯಾಗಲಿರುವ ಮೂರು ವಿ.ವಿಗಳಲ್ಲಿ ಒಂದು ವಿ.ವಿಗೆ ಕೆಂಪೇಗೌಡರ ಹೆಸರಿಡಬೇಕು. ಸರ್ಕಾರಿ ಕಚೇರಿಗಳಲ್ಲಿ ಕೆಂಪೇಗೌಡರ ಭಾವಚಿತ್ರ ಅಳವಡಿಸಲು ಆದೇಶಿಸಬೇಕು. ಅಂಚೆ ಚೀಟಿ ಬಿಡುಗಡೆ ಮಾಡಬೇಕು.

ಕೆಂಪೇಗೌಡ ಭವನ ನಿರ್ಮಿಸುವ ಜತೆಗೆ ವಿಧಾನಸೌಧ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಮುಂಭಾಗ ಅಶ್ವಾರೂಢ ಕೆಂಪೇಗೌಡರ ಪ್ರತಿಮೆ ನಿರ್ಮಿಸಬೇಕು ಎಂದು ಸರ್ಕಾರವನ್ನು ಒಕ್ಕಲಿಗರ ಸಂಘದಿಂದ ಒತ್ತಾಯಿಸಲು ನಿರ್ಧರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next