ಎಲ್ಲಾದರೂ ತಿರುಗಾಡಿ ತುಂಬಾ ದಿನವಾಯಿತು. ದೂರದ ಪ್ರಯಾಣಕ್ಕೆ ಪೂರ್ವತಯಾರಿ ಬೇಕು, ಇಲ್ಲೇ ಎಲ್ಲಾದರೂ ಹೋಗಿ ಬರೋಣ ಎಂದರು ಅಮ್ಮ. ನನಗೂ ಮೂರು ದಿನಗಳ ರಜೆಯಿದ್ದ ಕಾರಣ, “ಸರಿ ಹೊರಡೋಣ’ ಎಂದೆ. ಆಗ ನನಗೆ ಹೊಳೆದ ಮೊದಲ ಸ್ಥಳವೇ ಕೆಮ್ಮಣ್ಣುಗುಂಡಿ. ಚಿಕ್ಕಂದಿನಲ್ಲಿ ನೋಡಿದ್ದರೂ ಬಹಳ ವರ್ಷಗಳ ನಂತರ ಅಲ್ಲಿಗೆ ಹೋಗುವಾಗ ಒಂದು ರೀತಿಯ ಕುತೂಹಲವಿತ್ತು. ದಾವಣಗೆರೆಯಿಂದ ಕಾರಿನಲ್ಲಿ ಬೆಳಿಗ್ಗೆ ಬೇಗನೆ ಹೊರಟು ಸುಮಾರು ಏಳು ಗಂಟೆಗೆ ಶಿವಮೊಗ್ಗ ತಲುಪಿದೆವು. ‘ಮೀನಾಕ್ಷಿ ಭವನ’ದಲ್ಲಿ ತೆಂಗಿನೆಣ್ಣೆಯಲ್ಲಿ ತಯಾರಿಸಿದ ಪಡ್ಡು, ಇಡ್ಲಿ ವಡೆಯನ್ನು ಹಿನ್ನೆಲೆಯಲ್ಲಿ ತೇಲಿಬರುತ್ತಿದ್ದ ವಿಷ್ಣು ಸಹಸ್ರನಾಮದೊಂದಿಗೆ ಸೇವಿಸುವುದೇ ಒಂದು ದೈವಿಕ ಅನುಭವ. ನಾವು ಕೆಮ್ಮಣ್ಣುಗುಂಡಿ ತಲುಪಿದಾಗ ಸಮಯ ಒಂಭತ್ತಾಗಿತ್ತು.
ಅಲ್ಲಿನ ತಣ್ಣನೆಯ ಗಾಳಿ, ಹಸಿರು, ಪ್ರಶಾಂತ ವಾತಾವರಣ ನಮ್ಮನ್ನೂ ಕೂಡ ಮೌನಿಯಾಗಿಸಿ ಆ ಮೌನವನ್ನು ಅನುಭವಿಸುವಂತೆ ಮಾಡಿತ್ತು. ಅಲ್ಲಿಯ ಗಿಡಮರಗಳು ಹಿಂದೆ ನಡೆದ ಗಣಿಗಾರಿಕೆಯ ಗುರುತುಗಳನ್ನು ಅದು ನಡೆದೇ ಇಲ್ಲವೇನೋ ಎಂಬಂತೆ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದವು. ಅಲ್ಲಲ್ಲಿ ಕಾಣಿಸುತ್ತಿದ್ದ ಕುವೆಂಪುರವರ ಬರಹಗಳು ಕಾವ್ಯ ಮತ್ತು ಪ್ರಕೃತಿಯನ್ನು ಒಂದಾಗಿಸಿ ಮನಸ್ಸಿಗೆ ಹೆಚ್ಚಿನ ಮುದವನ್ನು ನೀಡುತ್ತಿದ್ದವು. ಅಲ್ಲಿಯೇ ಕೆಲಕಾಲ ಪ್ರಕೃತಿಯ ಸೌಂದರ್ಯವನ್ನು ಸವಿದು ಹೆಬ್ಬೆ ಜಲಪಾತದತ್ತ ನಮ್ಮ ಪಯಣವನ್ನು ಮುಂದುವರೆಸಿದೆವು. ಜಲಪಾತವನ್ನು ನಮ್ಮ ಸ್ವಂತ ವಾಹನದಲ್ಲಿ ತಲುಪಲು ಅವಕಾಶವಿಲ್ಲ. ಅರಣ್ಯ ಇಲಾಖೆಯಿಂದ ಅನುಮತಿ ಪಡೆದ ಜೀಪ್‌ಗ್ಳಿಗೆ ಮಾತ್ರ ಅಲ್ಲಿಗೆ ಹೋಗಲು ಅನುಮತಿಯಿದೆ.
ಸಾಮಾನ್ಯವಾಗಿ ನಾವು ಬಳಸುವ ಕಾರುಗಳಿಗೆ ಇಂಜಿನ್ನಿನಿಂದ ಕೇವಲ ಎರಡು ಚಕ್ರಗಳಿಗೆ ಮಾತ್ರ ಶಕ್ತಿಯ ವರ್ಗಾವಣೆಯಾಗುತ್ತಿರುತ್ತದೆ, ದುರ್ಗಮ ಹಾದಿಗಳಲ್ಲಿ ಅಷ್ಟು ಶಕ್ತಿ ಸಾಲದಾಗುತ್ತದೆ. ಆದ್ದರಿಂದ ನಾಲ್ಕೂ ಚಕ್ರಗಳಿಗೆ ಶಕ್ತಿಯನ್ನು ವರ್ಗಾಯಿಸುವಂತಹ ಜೀಪ್‌ಗ್ಳು ಅತ್ಯವಶ್ಯಕ. ತಲಾ 400 ರೂ. ನಂತೆ ದರವನ್ನು ನಿಗದಿಪಡಿಸಲಾಗಿದೆ. ಕಾಫೀ ತೋಟ ಮತ್ತು ಕಾಡಿನ ನಡುವೆ ಸಾಗುವ ದುರ್ಗಮ ಹಾದಿಯಲ್ಲಿ ಸಾಗುವುದು ಒಂದು ಸಾಹಸವೇ ಸರಿ. ಸುಮಾರು ಇಪ್ಪತ್ತು ನಿಮಿಷಗಳ ಪ್ರಯಾಣದ ನಂತರ ನಮ್ಮನ್ನು ಒಂದು ಸಣ್ಣ ಝರಿಯ ಬಳಿ ಇಳಿಸಿದರು. ಅಲ್ಲಿಂದ ಜಲಪಾತದವರೆಗೆ ಕಾಲ್ನಡಿಗೆಯಲ್ಲೇ ಸಾಗಬೇಕು. ಏಕೆಂದರೆ, ಜೀಪು ಕೂಡಾ ಸಾಗದಂತಹ ಚಿಕ್ಕ ಕಾಲುದಾರಿ ಅದು. ನಾವು ಮೂರು-ನಾಲ್ಕು ಬಾರಿ ಸುಮಾರು ಒಂದೂವರೆ ಅಡಿಯಷ್ಟು ಆಳದ ಅತ್ಯಂತ ಶುಭ್ರವಾದ ನೀರುಳ್ಳ, ತಂಪಾದ ಝರಿಗಳನ್ನು ದಾಟಿದೆವು. ಆಗ ನನಗೆ ಜಯಂತ ಕಾಯ್ಕಿಣಿಯವರ ಸಾಲೊಂದು ನೆನೆಪಾಯಿತು: ಹರಿವ ಝರಿಗೇ ಕಥೆಗಳು ಹೆಚ್ಚು, ನಿಂತ ಕೊಳಕ್ಕಲ್ಲ . ಈ ಮಾತಿನಲ್ಲಿ ಅದೆಷ್ಟು ಸತ್ಯವಿದೆ! ಹದಿನೈದು ನಿಮಿಷಗಳ ನಡಿಗೆಯ ನಂತರ ಜಲಪಾತವನ್ನು ತಲುಪಿದ ನಮಗೆ ಕಂಡದ್ದು ಪ್ರಕೃತಿಯ ಅತ್ಯದ್ಭುತ ಕಲಾಕೃತಿಗಳಲೊಂದು. ಹೆಬ್ಬೆ ಜಲಪಾತದ ಸೌಂದರ್ಯ ಕೇವಲ ಪದಗಳಲ್ಲಿ ವರ್ಣನಾತೀತ. ಜಲಪಾತದ ನೀರಲ್ಲಿ ಮಿಂದೆದ್ದು. ಅಲ್ಲಿಯ ಪರಿಸರವನ್ನು ಅತ್ಯಂತ ಸ್ವತ್ಛವಾಗಿ ಕಾಪಾಡಿಕೊಂಡು ಬಂದಿರುವ ಅರಣ್ಯ ಇಲಾಖೆಗೆ ಮತ್ತು ಪ್ರವಾಸಿಗರಿಗೆ ಮನಸ್ಸಿನಲ್ಲಿಯೇ ಕೃತಜ್ಞತೆಯನ್ನು ಸಲ್ಲಿಸುತ್ತಾ ಅಲ್ಲಿಂದ ಬೀಳ್ಕೊಟ್ಟೆವು.
ದೇವಿರಮ್ಮನ ಗುಡಿಯಲ್ಲಿ
ನಂತರ ನಮ್ಮ ಪಯಣ ಮುಳ್ಳಯ್ಯನ ಗಿರಿಯ ಕಡೆಗೆ ಸಾಗಿತ್ತು. ದಾರಿಯಲ್ಲಿ ಸಿಗುವ ಬೆಟ್ಟದ ತಪ್ಪಲಿನಲ್ಲಿರುವ ದೇವೀರಮ್ಮನವರ ಗುಡಿಗೆ ಭೇಟಿ ನೀಡಿ ಮುಂದುವರೆದೆವು. ಮುಳ್ಳಯ್ಯನ ಗಿರಿ ಸಮೀಪಿಸುತ್ತಿದ್ದಂತೆ ರಸ್ತೆಯಲ್ಲಿ ಟ್ರಾಫಿಕ್ ಜಾಮ…! ಚೆಕ್‌ಪೋಸ್ಟ್‌ನಲ್ಲಿ ನಾವು ಮುಂದೆ ಹೋಗದೆ ವಾಪಸ್ ಹೋಗುವುದೇ ಲೇಸೆಂಬ ಸಲಹೆ ಬೇರೆ. ಬೆಂಗಳೂರಿನಲ್ಲಿರುವ ಹೊರರಾಜ್ಯದ ಟೆಕ್ಕಿಗಳೇ ಈ ಸಂಚಾರ ದಟ್ಟಣೆ ಹಾಗೂ ಮಾಲಿನ್ಯಕ್ಕೆ ಕಾರಣ ಮತ್ತು ಪ್ರತೀ ವಾರಾಂತ್ಯವೂ ಇದೇ ಪರಿಸ್ಥಿತಿ ಎಂದು ತಿಳಿದು ಕೊಂಚ ಬೇಸರವೆನಿಸಿತು. ಇಷ್ಟು ದೂರ ಬಂದು ವಾಪಾಸು ಹೋದರೆ ಏನು ಚೆನ್ನ ಎಂದು ನಮ್ಮ ಪ್ರಯಾಣ ಮುಂದುವರೆಸಿದೆವು. ಸೀತಾಳಯ್ಯನ ಗಿರಿಯ ಬಳಿ ರಸ್ತೆಯನ್ನು ಮುಚ್ಚಲಾಗಿತ್ತು. ಪ್ರತಿ ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಆ ರಸ್ತೆಯನ್ನು ಮುಚ್ಚಲಾಗಿರುತ್ತದೆ ಎಂಬ ಸೂಚನೆಯೂ ಇತ್ತು. ಅಲ್ಲಿಂದ ಮುಳ್ಳಯ್ಯನ ಗಿರಿಗೆ ನಾವು ಕಾಲ್ನಡಿಗೆಯಲ್ಲೇ ಹೋಗುವಷ್ಟರಲ್ಲಿ ಕತ್ತಲು ಆವರಿಸುತ್ತಿತ್ತು. ಆದ್ದರಿಂದ ಅಲ್ಲಿಂದಲೇ ಸೂರ್ಯಾಸ್ತವನ್ನು ಸವಿದು ರಾತ್ರಿಯನ್ನು ಕಳೆಯಲು ಚಿಕ್ಕಮಗಳೂರಿಗೆ ಹಿಂತಿರುಗಿದೆವು. ಅಲ್ಲಿಯೂ ಯಾವ ಹೋಟೆಲ್‌ನಲ್ಲೂ ರೂಮುಗಳು ಸಿಗದೆ ನಮ್ಮ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡೆವು.
ಅಲ್ಲಿಂದ ಬೆಳಿಗ್ಗೆ ಹಿರೇಮಗಳೂರಿನ ಕೋದಂಡರಾಮನ ಪುರಾತನ ದೇವಾಲಯದ ದರ್ಶನ ಮಾಡಿ ಸಕಲೇಶಪುರದ ಮಂಜರಾಬಾದ್ ಕೋಟೆಯೆಡೆಗೆ ಪ್ರಯಾಣ ಬೆಳೆಸಿದೆವು. ಮೇಲಿನಿಂದ ಅಂದರೆ ಡ್ರೋನ್ ಕೆಮರಾದಲ್ಲಿ ನೋಡಿದರೆ ನಕ್ಷತ್ರದ ಆಕಾರದಲ್ಲಿ ಕಾಣುವುದು ಈ ಕೋಟೆಯ ವಿಶೇಷ. ಟಿಪ್ಪು ಸುಲ್ತಾನ್ 1792ರಲ್ಲಿ ಈ ಕೋಟೆಯನ್ನು ಕಟ್ಟಿಸಿದನೆಂಬ ಇತಿಹಾಸವಿದೆ. ಕೋಟೆಯ ತುಂಬಾ ಎಲ್ಲಿ ಕಣ್ಣು ಹಾಯಿಸಿದರೂ ಕೇವಲ ಪ್ರೀ ವೆಡ್ಡಿಂಗ್ ಫೋಟೋಶೂಟ್‌ಗಳದ್ದೇ ಹಾವಳಿ. ಕೋಟೆಯ ಸುಂದರ ವಾಸ್ತುಶಿಲ್ಪ ವಿವಿಧ ಬಗೆಯ ಛಾಯಾಚಿತ್ರಗಳಿಗೆ ಸ್ಫೂರ್ತಿಯಾಗುತ್ತಿತ್ತು. ಅಲ್ಲೇ ಇದ್ದ ಹಿರಿಯರೊಬ್ಬರು ಮದುವೆ ಆದಮೇಲೆ ಹೇಗಿರ್ತಾರೋ ಏನೋ, ಫೋಟೋಗೆ ಮಾತ್ರ ತುಂಬಾ ಚೆನ್ನಾಗಿ ಪೋಸ್ ಕೊಡ್ತಾರೆ ಎಂದ ಮಾತು ನಮ್ಮನ್ನು ನಗೆಗಡಲಲ್ಲಿ ತೇಲಿಸಿತ್ತು. ಅಲ್ಲಿ ಕೊಂಚ ಸಮಯ ಕಳೆದು ನಾವು ಹೊರಟಿದ್ದು ಬೇಲೂರಿನ ಕಡೆಗೆ. ಬೇಲೂರಿನ ಚನ್ನಕೇಶವನ ಸನ್ನಿಧಿಯಲ್ಲಿ ಹೊಯ್ಸಳರ ಅದ್ವಿತೀಯ ಕೆತ್ತನೆಯ ದೇವಾಲಯ ಆ ಕಾಲದ ಜನರ ಮುಂದೆ ನಾವೆಲ್ಲ ತೃಣಕ್ಕೆ ಸಮಾನ ಎಂಬ ಭಾವನೆಯನ್ನು ಮೂಡಿಸಿದ್ದು ಸುಳ್ಳಲ್ಲ. ಅಲ್ಲಿಂದ ಹಳೇಬೀಡಿಗೆ ಹೊರಟು ಅಲ್ಲಿನ ಶಿವನ ದೇವಾಲಯ ಹಾಗೂ ಜೈನ ಬಸದಿಗಳನ್ನು ಸಂದರ್ಶಿಸಿ, ಶಾಂತಿಯನ್ನು ಅನುಭವಿಸಿ ನಮ್ಮೂರಿನ ಕಡೆಗೆ ಹೊರಟಾಗ ರಜೆಯ ಎರಡು ದಿನಗಳನ್ನು ಒಳ್ಳೆಯ ರೀತಿಯಲ್ಲಿ ಕಳೆದ ಸಂತೃಪ್ತ ಭಾವ ನಮ್ಮೆದೆಯಲ್ಲಿತ್ತು. ನಮ್ಮ ರಾಜ್ಯದ ಪ್ರಕೃತಿ, ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಹೆಮ್ಮೆಯಿಂದ ಬೀಗುತ್ತ ಅಲ್ಲಿಂದ ಬೀಳ್ಕೊಟ್ಟೆವು.
ಸಚಿತ್‌ರಾಜು