Advertisement

ಕಾಮಗಾರಿಯಲ್ಲಿ ಲೋಪದೋಷ

11:36 AM Aug 28, 2019 | Naveen |

ಕೆಂಭಾವಿ: ಪಟ್ಟಣದ ಸಂಘ ಸಂಸ್ಥೆಗಳು, ಸಾರ್ವಜನಿಕರು ಹಾಗೂ ಮಾಧ್ಯಮಗಳಲ್ಲಿ ಸತತವಾಗಿ ನಗರೋತ್ಥಾನ ಯೋಜನೆ ಅವೈಜ್ಞಾನಿಕ ರಸ್ತೆ ಕಾಮಗಾರಿ ಕುರಿತು ಬಂದ ದೂರು ಹಾಗೂ ವರದಿಗಳ ಹಿನ್ನೆಲೆಯಲ್ಲಿ ಎಚ್ಚೆತ್ತ ಜಿಲ್ಲಾಡಳಿತ ಮಂಗಳವಾರ ಜಿಲ್ಲಾ ನಗರಾಭಿವೃದ್ಧಿ ಕೋಶದ ಉನ್ನತ ಅಧಿಕಾರಿಗಳನ್ನೊಳಗೊಂಡ ತಂಡ ಭೇಟಿ ನೀಡಿ ಪರಿಶೀಲಿಸಿತು.

Advertisement

ಸಿಸಿ ರಸ್ತೆ ಕಾಮಗಾರಿ ಹಾಗೂ ಒಳ ಚರಂಡಿ ಕಾಮಗಾರಿ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಹಾಗೂ ಪ್ರಭಾರಿ ಯೋಜನಾ ನಿರ್ದೇಶಕ ಅಲ್ಲಾಭಕ್ಷ, ಸುಮಾರು 2 ಗಂಟೆ ಸ್ಥಳ ಪರಿಶೀಲಿಸಿದಾಗ ಹಲವು ರೀತಿಯ ಲೋಪದೋಷಗಳು ಕಂಡು ಬಂದಿವೆ. ಅಂದಾಜು ಪತ್ರಿಕೆ ಪ್ರಕಾರ ಅನೇಕ ಕಡೆ 30 ಅಡಿ ರಸ್ತೆ ಅಗಲೀಕರಣವಾಗಿಲ್ಲ. ಒಳ ಚರಂಡಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಹಲವು ಕಡೆ ತೆರವು ಕಾರ್ಯಾಚರಣೆ ನಡೆಯಬೇಕಾಗಿದೆ. ಗುಣಮಟ್ಟದ ಕಾಮಗಾರಿ ಬಗ್ಗೆಯೂ ದೂರು ಇದೆ, ವಿದ್ಯುತ್‌ ಕಂಬಗಳನ್ನು ಸ್ಥಳಾಂತರ ಮಾಡಿಲ್ಲ, ವಿದ್ಯುತ್‌ ತಂತಿಗಳು ಕೈಗೆಟುಕುವಂತಿವೆ. ಸೂಕ್ಷ್ಮ ತಿರುವಿನಲ್ಲಿ ಸರಿಯಾಗಿ ರಸ್ತೆ ನಿರ್ಮಾಣವಾಗದೆ ಇರುವುದು ಸೇರಿದಂತೆ ಹಲವು ಲೋಪದೋಷಗಳು ಕಂಡು ಬಂದಿವೆ ಎಂದರು.

ಒಟ್ಟಾರೆ ಕಾಮಗಾರಿಯಲ್ಲಿ ನಡೆದ ಲೋಪದೋಷಗಳ ಬಗ್ಗೆ ಅಧಿಕಾರಿಗಳ ಹಾಗೂ ಸಂಬಂಧಿಸಿದ ಇಂಜಿನಿಯರ್‌ ಅವರ ಅಲಕ್ಷ ಎದ್ದು ಕಾಣುತ್ತಿದ್ದು, ಈ ಕುರಿತು ವರದಿಯನ್ನು ಜಿಲ್ಲಾಧಿಕಾರಿಗೆ ನೀಡಲಾಗುವುದು. ತಪ್ಪಿತಸ್ಥ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗುವುದು. ತಪ್ಪಿತಸ್ಥರೆಲ್ಲರಿಗೂ ನೋಟಿಸ್‌ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು. ಕಾಮಗಾರಿ ಸರಿಯಾಗಿ ನಿರ್ವಹಿಸದೆ ಬೇಜವಾಬ್ದಾರಿ ತೋರಿಸುತ್ತಿರುವ ಗುತ್ತಿಗೆದಾರನ ಬಿಲ್ ತಡೆ ಹಿಡಿಯಲಾಗುವುದು ಎಂದು ತಿಳಿಸಿದರು. 24 ಗಂಟೆಗಳ ಒಳಗಾಗಿ ವಿದ್ಯುತ್‌ ಕಂಬಗಳ ಸ್ಥಳಾಂತರಕ್ಕೆ ಟೆಂಡರ್‌ ಕರೆಯುವಂತೆ ಸ್ಥಳದಲ್ಲಿದ್ದ ಪುರಸಭೆ ಸಿಬ್ಬಂದಿಗೆ ಆದೇಶಿಸಿದರು. ಜಿಲ್ಲಾ ನಗರಾಭಿವೃದ್ಧಿ ಕೋಶದ ಎಇಇ ಬಂಡೆಪ್ಪ ಆಕಳ, ಪುರಸಭೆ ವ್ಯವಸ್ಥಾಪಕ ಅರುಣ ಚವ್ಹಾಣ, ರೈತ ಸಂಘದ ಅಧ್ಯಕ್ಷ ಎಚ್.ಆರ್‌. ಬಡಿಗೇರ, ಕರವೇ ಮುಖಂಡ ಶ್ರೀಶೈಲ ಕಾಚಾಪುರ, ಕುಮಾರ ಮೋಪಗಾರ, ದಲಿತ ಸಂಘದ ಲಕ್ಷ್ಮಣ ಬಾವಿಮನಿ, ರವಿ ಮಾಳಳ್ಳಿಕರ್‌ ಸೇರಿದಂತೆ ಸಂಘ ಸಂಸ್ಥೆಗಳು ಪದಾಧಿಕಾರಿಗಳು ಹಾಗೂ ಸಾರ್ವಜನಿಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next