Advertisement

ಕೇಳ್ಕರ ದೇಗುಲ ಮತ್ಸ್ಯತೀರ್ಥ: ಮೀನುಗಳಿಗೆ ಸಂಚಕಾರ

08:06 PM May 22, 2019 | mahesh |

ಬೆಳ್ತಂಗಡಿ: ನೀರಿನ ಅಭಾವ ಎಲ್ಲೆಡೆ ತೀವ್ರ ಸ್ವರೂಪ ಪಡೆಯುತ್ತಿರುವ ಸಮಯದಲ್ಲೇ ಪ್ರಸಿದ್ಧ ತೀರ್ಥಕ್ಷೇತ್ರಗಳ ನದಿ ನೀರಿನ ಮತ್ಸ್ಯ ಸಂಕುಲಕ್ಕೂ ಆಪತ್ತು ಎದುರಾಗಿದೆ. ಬೆಳ್ತಂಗಡಿ ತಾಲೂಕಿನ ಕರಂಬಾರು ಗ್ರಾಮದ ಕೇಳ್ಕರ ಮಹಾಲಿಂಗೇಶ್ವರ ದೇಗುಲ ಸಮೀಪದ ಫಲ್ಗುಣಿ ನದಿಯ ಉಪನದಿ ಬತ್ತಿದ ಪರಿಣಾಮ ಮತ್ಸéಸಂತತಿಗೆ ಆಪತ್ತು ಎದುರಾಗಿದೆ. ಕಳೆದೆರಡು ತಿಂಗಳಿನಿಂದ ನೀರಿನ ಒಳ ಹರಿವು ಕಡಿಮೆಯಾದ ಪರಿಣಾಮ ಪೆರುವೊಳು ಜಾತಿಯ ಮೀನುಗಳು ನಾಲ್ಕೈದು ದಿನಗಳಿಂದ ಉಸಿರು ನಿಲ್ಲಿಸುತ್ತಿವೆ.

Advertisement

ತಾಲೂಕಿನಲ್ಲಿ ಶಿಶಿಲದ ಶಿಶಿಲೇಶ್ವರ ದೇಗುಲದ ಕಪಿಲಾ ನದಿ ಹೊರತು ಪಡಿಸಿ ಕೇಳ್ಕರೇಶ್ವರನ ಸನ್ನಿಧಿಯಲ್ಲಿ ಈ ಮತ್ಸéಸಂಕುಲ ಕಾಣಸಿಗುತ್ತದೆ. ಆದರೆ ಇಲ್ಲಿನ ವಿಶಿಷ್ಟ ಜಾತಿಯ ಮೀನುಗಳು ಬಿಸಿಲಿನ ತಾಪ ಸಹಿಸಲಾರದೆ ಸಾವು ಕಾಣುತ್ತಿದೆ. ನೀರಿನ ಮಟ್ಟ ನೆಲಕ್ಕೆ ಸನಿಹವಾಗುತ್ತಿರುವಂತೆಯೇ ಮೀನುಗಳು ಬಿಸಿ ತಾಳಲಾರದೆ ಸಾವನ್ನಪ್ಪುತ್ತವೆ. ಆಹಾರ, ಮತ್ತೂಂದೆಡೆ ಆಮ್ಲಜನಕದ ಕೊರತೆ ಎದುರಾಗುತ್ತಿರುವುದರಿಂದ ವಿಶಿಷ್ಟ ಮತ್ಸ್ಯಸಂಕುಲ ಅವನತಿ ಹಾದಿ ಹಿಡಿಯುತ್ತಿರುವುದು ಚಿಂತನಾರ್ಹ.

ದೇಗುಲದ ಕೆಳಭಾಗದಲ್ಲಿ ಬೃಹತ್‌ ಹೊಂಡವೊಂದಿದ್ದು, ಸ್ವಲ್ಪ ಮಾತ್ರ ನೀರಿನ ಸಂಗ್ರಹವಿದೆ. ತೀವ್ರ ಬಿಸಿಯಿಂದ ಎಲ್ಲ ಮೀನುಗಳು ಇಲ್ಲಿ ಬಂದು ಸೇರಿವೆ. ಬಿಸಿಲಿನ ಬೇಗೆಯಿಂದಾಗಿ ನೀರು ಬಿಸಿಯಾದ ಪರಿಣಾಮ ನೀರಿನಲ್ಲಿರುವ ಮೀನುಗಳು ಪ್ರಾಣಬಿಡುತ್ತಿದೆ.

ಕೊಳವೆಬಾವಿ ನೀರು ನದಿಗೆ
ನದಿಯ ಬಿಸಿ ನೀರಿನಲ್ಲಿ ಮೀನುಗಳ ಒದ್ದಾಟ ನೋಡಲಾರದೆ ನದಿ ಸಮೀಪದ ನಿವಾಸಿ ಶುಭಕರ ಆಚಾರ್ಯ ಎಂಬವರು ಮೀನುಗಳ ರಕ್ಷಣೆಗೆ ಮುಂದಾಗಿದ್ದಾರೆ. ತಮ್ಮ ತೋಟದ ಸ್ವಂತ ಕೊಳವೆ ಬಾವಿಯಿಂದ ದಿನಕ್ಕೆರಡು ಬಾರಿ ನೀರು ಹಾಯಿಸುತ್ತಿದ್ದಾರೆ. ಈ ಮೀನುಗಳನ್ನು ರಕ್ಷಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಸತ್ತ ಮೀನುಗಳು ಮತ್ತಷ್ಟು ಮೀನಿನ ಸಾವಿಗೆ ಕಾರಣವಾಗಬಹುದು ಎಂದು ಸತ್ತ ಮೀನುಗಳನ್ನು ಹೊರ ತೆಗೆದು ದಫನ ಮಾಡಲಾಗುತ್ತಿದೆ.

ಸಂರಕ್ಷಣೆ ಅವಶ್ಯ
ಇನ್ನೊಂದು ವಾರದಲ್ಲಿ ಮಳೆ ಬಾರದಿದ್ದರೆ ಇದ್ದ ಮೀನುಗಳ ಸಂತತಿ ಸಂಪೂರ್ಣ ನಾಶವಾಗುವ ಸಾಧ್ಯತೆ ಇದೆ. 2017ರಲ್ಲಿ ನೀರಿನ ಕೊರತೆಯಿಂದಾಗಿ ಸಾವಿರಾರು ಮೀನು ಸತ್ತು ಹೋಗಿ ಬಳಿಕ ನದಿಗೆ ಟ್ಯಾಂಕರ್‌ ಮೂಲಕ ನೀರನ್ನು ಹಾಯಿಸಲಾಗಿತ್ತು. ಮತ್ತೆ ಅದೇ ಆತಂಕ ಸ್ಥಳೀಯರಲ್ಲಿ ಮತ್ತು ದೇವಸ್ಥಾನ ಆಡಳಿತ ಮಂಡಳಿಗೆ ಮೂಡಿದೆ.

Advertisement

ಶಿಶಿಲೇಶ್ವರದಲ್ಲೂ ಆತಂಕ
ನೀರಿನ ಅಭಾವದಿಂದ ಶಿಶಿಲದ ಶಿಶಿಲೇಶ್ವರ ದೇವಸ್ಥಾನವೂ ಹೊರತಾಗಿಲ್ಲ. ನೀರಿನ ಹರಿವು ಸದ್ಯದ ಮಟ್ಟಿಗೆ ಸಾಕಷ್ಟಿದೆ. ಆದರೆ ಜೂನ್‌ ಮೊದಲ ವಾರದಲ್ಲಿ ಮಳೆ ಬಾರದಿದ್ದರೆ ಆತಂಕ ಸಾಧ್ಯತೆ ಇದೆ. ಈಗಾಗಲೇ ನೀರು ತಳ ಮಟ್ಟ ತಲುಪುತ್ತಿರುವುದರಿಂದ ಮೀನಿಗೆ ನೀರಿನ ಬಿಸಿ ತಾಳಲು ಸಾಧ್ಯವಾಗುತ್ತಿಲ್ಲ. ಮತ್ತೂಂದೆಡೆ ಮೀನಿನ ಸಂಖ್ಯೆ ಹೆಚ್ಚಿರುವುದರಿಂದ ಆಮ್ಲಜನಕದ ಕೊರತೆ ಕಾಡುತ್ತಿದೆ. ಕಳೆದ ವಾರ ಕೆಲವು ಮೀನುಗಳು ಸಂಕಷ್ಟಕ್ಕೆ ಸುತ್ತಾಗಿದ್ದವು. ಬಳಿಕ ಆರೈಕೆ ಮಾಡಿ ಮತ್ತೆ ನದಿಗೆ ಬಿಡಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಹೊರತಾಗಿ ಬೆಳ್ತಂಗಡಿ ತಾಲೂಕಲ್ಲಿ ಪಜಿರಡ್ಕ ಸದಾಶಿವ ದೇವಸ್ಥಾನ ಬಳಿ ಮೃತ್ಯುಂಜಯ ಹೊಳೆ- ನೇತ್ರಾವತಿ ಸಂಗಮ ಸ್ಥಾನ ಬತ್ತಿ ಹೋಗಿದೆ. ಕೊಲ್ಲಿ ದೇವಾಲಯ ಮತ್ತು ಕಾಜೂರು ದರ್ಗಾಗಳಿರುವ ನೇತ್ರಾವತಿ ಸಂಪೂರ್ಣ ಬರಡಾಗಿದೆ. ಉಳಿದಂತೆ ಧರ್ಮಸ್ಥಳ ಸ್ನಾನಘಟ್ಟ ಸಮೀಪದ ನದಿ ನೀರ ಹರಿವು ಕ್ಷೀಣಿಸಿರುವುದರಿಂದ ಮತ್ಸ್ಯಸಂಕುಲವೇ ಬರಿದಾಗುವ ಹಂತದಲ್ಲಿದೆ.

ಸೀಯಾಳ ಅಭಿಷೇಕ
ಮೀನುಗಳು ಸಾಯದಂತೆ ದೇವರಲ್ಲಿ ಪ್ರಾರ್ಥಿಸಿ, ಸೀಯಾಳ ಅಭಿಷೇಕ ಮಾಡಿದ್ದೇವೆ. ಆದಷ್ಟು ಬೇಗ ಮಳೆ ಬರಲಿ ಎಂದು ದೇವರಲ್ಲಿ ಬೇಡಿಕೊಳ್ಳಬೇಕಾಗಿದೆ.
ನಾರಾಯಣ ಭಟ್‌ ಗುರಿಪಳ್ಳ, ದೇಗುಲದ ಅರ್ಚಕರು

Advertisement

Udayavani is now on Telegram. Click here to join our channel and stay updated with the latest news.

Next