ಕುಂದಾಪುರ: ಹೇರೂರು ಗ್ರಾಮದ ಕೆಳ ಹೇರೂರಿನ ದುರ್ಗಾಂಬಿಕಾ ದೇವಸ್ಥಾನದ ಬಾಗಿಲಿನ ಬೀಗ ಒಡೆದು ಒಳ ಪ್ರವೇಶಿಸಿದ ಕಳ್ಳರು ಗರ್ಭ ಗುಡಿಯ ಬೀಗ ಒಡೆದು ದೇವರಿಗೆ ಹಾಕಿರುವ ಚಿನ್ನ -ಬೆಳ್ಳಿಯ ಆಭರಣಗಳು ಹಾಗೂ ಪರಿಕರಗಳನ್ನು ಕಳವು ಮಾಡಲಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ದೇವಸ್ಥಾನದ ಅರ್ಚಕ ರಾಮಯ್ಯ ಬಳೆಗಾರ ಅವರು ಬೆಳಗ್ಗೆ ದೇವಸ್ಥಾನಕ್ಕೆ ಪೂಜೆಗೆ ಬಂದಾಗ ಕಳವು ನಡೆದ ಬಗ್ಗೆ ತಿಳಿದುಬಂದಿದ್ದು ತತ್‌ಕ್ಷಣ ಆಡಳಿತ ಮೊಕ್ತೇಸರರಿಗೆ ಕರೆ ಮಾಡಿ ತಿಳಿಸಿರುತ್ತಾರೆ.
ಎದುರಿನ ಬಾಗಿಲಿನ ಬೀಗ ಹಾಕುವ ಕೊಂಡಿಯನ್ನು ಮುರಿದು ಬಾಗಿಲಿಗೆ ಒಳಗಡೆಯಿಂದ ಚಿಲಕ ಹಾಕಿರುವುದು ತಿಳಿದ ಅನಂತರ ದೇವಸ್ಥಾನದ ಉತ್ತರ ಬದಿಯಲ್ಲಿ ಬಾಗಿಲನ್ನು ತೆರೆದು ಹೊಕ್ಕ ಕಳ್ಳರು ದೇವಸ್ಥಾನದ ಒಳಗಿನ ಗರ್ಭಗುಡಿಗೆ ಹೋಗುವ ಬಾಗಿಲಿನ ಬೀಗ ಹಾಕುವ ಕೊಂಡಿಯನ್ನು ಮುರಿದು ಗರ್ಭಗುಡಿಯ ಒಳಗೆ ಪ್ರವೇಶಿಸಿ ದೇವರಿಗೆ ಹಾಕಿರುವ ಬೆಳ್ಳಿಯ ಪ್ರಭಾವಳಿ, ಬೆಳ್ಳಿಯ ತ್ರಿಶೂಲ, ಬೆಳ್ಳಿಯ ಮುಖವಾಡ, ಬೆಳ್ಳಿಯ ಸೊಂಟದ ಪಟ್ಟಿ, ಬೆಳ್ಳಿಯ ಬಳೆ ಒಂದು ಜತೆ, ಬೆಳ್ಳಿಯ ತಂಬಿಗೆ, ಬೆಳ್ಳಿಯ ಕಾಲು ಬಳೆ, ಬೆಳ್ಳಿಯ ಎಲೆಯ ಹಾರ, ದೇವರ ಕುತ್ತಿಗೆಯಲ್ಲಿ ಹಾಕಿರುವ ಚಿನ್ನದ ಲಕ್ಷ್ಮೀ ಹಾರ, ಚಿನ್ನದ 22 ತಾಳಿಯ ಸರ, 12 ಚಿನ್ನದ ಕರಿಮಣಿ ಸರವನ್ನು ಕಳವು ಮಾಡಿದ್ದಾರೆ.
ಒಟ್ಟು 3 ಕೆ.ಜಿ. ತೂಕದ ಬೆಳ್ಳಿಯ, ಅಂದಾಜು 100 ಗ್ರಾಂ ಚಿನ್ನದ ವಸ್ತುಗಳನ್ನು ಕಳವು ಮಾಡಲಾಗಿದ್ದು ಒಟ್ಟು ಮೌಲ್ಯ 3.25 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಆಡಳಿತ ಮೊಕ್ತೇಸರ ಮಹಾಬಲ ಶೆಟ್ಟಿ ಅವರು ಬೈಂದೂರು ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ವೃತ್ತ ನಿರೀಕ್ಷಕ ರಾಘವ ಪಡೀಲ್, ಎಸ್.ಐ. ಸಂತೋಷ್ ಕಾಯ್ಕಿಣಿ ಆಗಮಿಸಿ ಪರಿಶೀಲನೆ ನಡೆಸಿರುತ್ತಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಆಗಮಿಸಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.