Advertisement

Foods: ಆಹಾರ ಸೇವಿಸುವಾಗ ಈ ಅಂಶಗಳನ್ನು ನೆನಪಿನಲ್ಲಿಡಿ

12:41 PM Feb 18, 2024 | Team Udayavani |

ಆಹಾರ ತಯಾರಿ: ಖಾದ್ಯವಸ್ತುಗಳನ್ನು ಸೇವಿಸುವವರ ವಯಸ್ಸಿಗೆ ಸರಿಯಾಗಿ ತುಂಡುಗಳನ್ನು ಮಾಡಿಕೊಡಬೇಕು. ವಿಶೇಷವಾಗಿ ಮಕ್ಕಳಿಗೆ ದುಂಡನೆಯ ತುಂಡುಗಳನ್ನು ಕೊಡಬಾರದು, ಅವು ಅವರಲ್ಲಿ ಆಲಿಕೆಯ ರೂಪದಲ್ಲಿರುವ ವಾಯುಮಾರ್ಗದಲ್ಲಿ ಸೇರಿಕೊಳ್ಳುವ ಅಪಾಯವಿದೆ.

Advertisement

ಗಮನಕೊಟ್ಟು ಆಹಾರ ಸೇವಿಸಿ: ಮಕ್ಕಳಿಗೆ ಉಣ್ಣಿಸಲು ಅಥವಾ ತಿನ್ನಿಸಲು ಮೊಬೈಲ್‌ ಯಾ ಟಿವಿ ಬೇಕೇ ಬೇಕು ಎಂದು ಹೇಳುವ ಅನೇಕ ಹೆತ್ತವರನ್ನು ಕಂಡಿದ್ದೇನೆ. ಹೆತ್ತವರು ಇಂತಹ ಅಭ್ಯಾಸಗಳನ್ನು ಪ್ರೋತ್ಸಾಹಿಸಬಾರದು. ಆಹಾರದ ಮೇಲೆ ಗಮನ ಕೇಂದ್ರೀಕರಿಸಿ, ಆಹಾರ ಜಗಿಯುವ ಸರಿಯಾದ ಪದ್ಧತಿ ರೂಢಿಸಿಕೊಳ್ಳಲು ಮಕ್ಕಳಿಗೆ ತಿಳಿಹೇಳಿ. ವಿಭಿನ್ನ ಮಾದರಿಯ ಆಹಾರಗಳನ್ನು ಜಗಿಯುವ ಉತ್ತಮ ಪದ್ಧತಿಯನ್ನು ಅಭ್ಯಾಸ ಮಾಡಿಕೊಳ್ಳಲು ಹೆತ್ತವರು ಮಾದರಿಯಾಗಬೇಕು. ಹೆಚ್ಚುವರಿ ಆಹಾರವನ್ನು ಬಾಯಿಯಿಂದ ಹೊರಹಾಕುವ ಅಭ್ಯಾಸವನ್ನು ಮೃದುವಾಗಿ ನಿರುತ್ತೇಜಿಸಿ. ನೆನಪಿಡಿ, ಮಕ್ಕಳು ನೀವು ಹೇಳುವುದಕ್ಕಿಂತ ಹೆಚ್ಚಾಗಿ ನೀವು ಮಾಡುವುದನ್ನು ನೋಡಿ ಅನುಸರಿಸುತ್ತಾರೆ.

ಭಂಗಿ: ಸುರಕ್ಷಿತ ಆಹಾರ ಸೇವನೆಗಾಗಿ ಕುಳಿತು ತಿನ್ನುವ – ಉಣ್ಣುವ ಭಂಗಿಯನ್ನು ರೂಢಿಸಿಕೊಳ್ಳಿ. ಆಹಾರ ಸೇವಿಸುವ ಸಮಯದಲ್ಲಿ ಮಕ್ಕಳು ಓಡಾಡುವುದು ಬೇಡ. ವ್ಯಕ್ತಿಯು ಹಾಸಿಗೆಯಲ್ಲಿದ್ದರೆ ಅವರು ಎದ್ದು ಕುಳಿತು ಆಹಾರ ಸೇವಿಸಲಿ. ಯಾವುದೇ ಕಾರಣಕ್ಕೂ ಮಲಗಿರುವ ಭಂಗಿಯಲ್ಲಿ ಆಹಾರ ಸೇವಿಸಬಾರದು.

ದ್ರವಾಹಾರ ಸೇವನೆ: ಬಹುತೇಕ ಮಂದಿ ಗುಟುಕರಿಸಿ ಕುಡಿಯುವುದರ ಬದಲಾಗಿ ಒಂದೇಟಿಗೆ ಗಳಗಳನೆ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಹೀಗೆ ಗಳಗಳನೆ ಕುಡಿಯುವ ಹೊತ್ತಿನಲ್ಲಿ ಹಲವು ಸೆಕೆಂಡುಗಳ ಕಾಲ ಉಸಿರಾಟ ಸ್ಥಗಿತಗೊಳ್ಳಬೇಕಾಗುತ್ತದೆ, ಇದು ಗಮನಾರ್ಹ ಉದ್ವಿಗ್ನತೆಗೆ ಕಾರಣವಾಗುತ್ತದೆಯಲ್ಲದೆ ವಿಶೇಷವಾಗಿ ಮಕ್ಕಳು ಮತ್ತು ಹಿರಿಯರಲ್ಲಿ ಸಂಕೀರ್ಣ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಆದ್ದರಿಂದ ಸುರಕ್ಷೆ ಮತ್ತು ಆಸ್ವಾದಿಸಿ ಕುಡಿಯುವುದಕ್ಕಾಗಿ ಗುಟುಕರಿಸಿ ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.

ಮಾತಾಡಬಾರದು, ನಗಬಾರದು: ಆಹಾರ ಸೇವನೆ ಮತ್ತು ನಗುವುದು ಅಥವಾ ಮಾತನಾಡುವುದು ಏಕಕಾಲದಲ್ಲಿ ನಡೆಯಲೇಬಾರದು. ಸಾಮಾಜಿಕ ಸಂದರ್ಭಗಳಲ್ಲಿ ಒಂದು ತುತ್ತು ತೆಗೆದುಕೊಳ್ಳುವುದಕ್ಕೆ ಮೊದಲು ಮಾತನಾಡಿ ಅಥವಾ ಜಗಿದು ನುಂಗಿದ ಬಳಿಕ ಮಾತನಾಡಿ. ಊಟ ಉಪಾಹಾರ ಮುಗಿದ ಬಳಿಕ ವಿಸ್ತಾರವಾಗಿ ಮಾತನಾಡುವುದು ಹಿತಕರ.

Advertisement
Advertisement

Udayavani is now on Telegram. Click here to join our channel and stay updated with the latest news.

Next