Advertisement

ವದಂತಿಗಳಿಗೆ ಕಿವಿಗೊಡದೆ ಶಾಂತಿ ಕಾಪಾಡಿ; ಕಮಿಷನರ್‌ ಡಾ|ಪಿ ಎಸ್‌. ಹರ್ಷಾ ಮನವಿ

01:03 AM Dec 20, 2019 | Sriram |

ಮಂಗಳೂರು: ಜನರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಶಾಂತಿಯನ್ನು ಕಾಪಾಡಬೇಕು. ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಕಮಿಷನರ್‌ ಡಾ| ಪಿ.ಎಸ್‌. ಹರ್ಷಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

ಮಂಗಳೂರು ಘಟನೆಗೆ ಸಂಬಂಧಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಬುಧವಾರ ರಾತ್ರಿ 9 ಗಂಟೆಯಿಂದ ಡಿ. 20ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ವಿಧಿಸಿ ನಗರದಾದ್ಯಂತ ಸಾರ್ವಜನಿಕ ಹೇಳಿಕೆ ಮೂಲಕ ಸ್ಪಷ್ಟವಾಗಿ ತಿಳಿ ಹೇಳಲಾಗಿತ್ತು. 144 ಜಾರಿಯಲ್ಲಿದ್ದು, ಗುಂಪುಗೂಡಿದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಲಾಗಿತ್ತು. ನಗರಾದ್ಯಂತ ಡಿಸ್‌ಪ್ಲೇ ಬೋರ್ಡ್‌ ಕೂಡ ಹಾಕಲಾಗಿತ್ತು. ಎಲ್ಲ ಸಮುದಾಯದ ನಾಯಕರನ್ನು ಕರೆಸಿ ನಾವು ಸ್ಪಷ್ಟವಾಗಿ ಮನವಿ ಮಾಡಿದ್ದೇವು. ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು, ನಗರದ ಹಿತಾಸಕ್ತಿಯಿಂದ ಎಲ್ಲರೂ ಪೊಲೀಸ್‌ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಕೇಳಿಕೊಂಡಿದ್ದೆವು.
ಬುಧವಾರ ರಾತ್ರಿಯಿಂದಲೇ ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್ ನಿಯೋಜಿಸಿದ್ದೆವು. ದ.ಕ. ಮುಸ್ಲಿಂ ಸೆಂಟ್ರಲ್‌ ಕಮಿಟಿ ಜತೆ ಸಂವಾದ ನಡೆಸಿದಾಗ ಸದ್ಯ ನಮ್ಮಿಂದ ಯಾವುದೇ ಪ್ರತಿಭಟನೆ ಇಲ್ಲ, ಮುಂದೆ ಮಾಡು ವುದಾದರೆ ನಿಮ್ಮ ಜತೆ ಮಾತನಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದರು.

ಆದರೂ ಗುರುವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ಏಕಾಏಕಿ ಜಿಲ್ಲಾಧಿಕಾರಿಯವರ ಕಚೇರಿ ಬಳಿ ನೆಲ್ಲಿಕಾಯಿ ರಸ್ತೆಯಿಂದ ದುಷ್ಕರ್ಮಿಗಳು ಅಕ್ರಮ ಕೂಟ ರಚಿಸಿ ಕೊಂಡು ರಸ್ತೆಯಲ್ಲಿದ್ದ ಕಲ್ಲು, ದೊಣ್ಣೆ ಮತ್ತು ಪೂರ್ವನಿಯೋಜಿತವಾಗಿ ತಂದಿದ್ದ ಹಾಕಿ ಸ್ಟಿಕ್‌ ಮತ್ತು ಇತ್ಯಾದಿ ವಸ್ತುಗಳಿಂದ ಸಾರ್ವಜನಿಕರಿಗೆ ಭೀತಿ ಹುಟ್ಟಿಸುವಂತೆ ಬೀದಿ ಕಾಳಗ ಪ್ರಾರಂಭಿಸಿದರು.

ಅನಿವಾರ್ಯವಾದ ಬಲಪ್ರಯೋಗ
ಈ ಘಟನೆಯಲ್ಲಿ ಹಲವು ಪೊಲೀಸರಿಗೆ, ಕೆಲವು ಅಮಾಯಕರಿಗೆ ಗಾಯಗಳಾಗಿವೆ. ಪರಿಸ್ಥಿತಿ ಕೈಮೀರಿ ಹೋದಾಗ ಅಶ್ರುವಾಯು ಪ್ರಯೋಗಿಸಲಾಯಿತು. ಆರ್‌.ಆರ್‌. ರಾವ್‌ ಸರ್ಕಲ್‌ನಲ್ಲಿ ಮತ್ತೆ ಹಿಂಸಾಚಾರ ಆರಂಭಿಸಿದ ಪ್ರತಿಭಟನಕಾರರು ಪೊಲೀಸರ ಮೇಲೆ ತೀವ್ರತರದ ಹಲ್ಲೆ ನಡೆಸಿದರು. ಹೆಚ್ಚಿನ ಬಲ ನಿಯೋಜಿಸಿ ಅಲ್ಲಿಂದ ಪ್ರತಿಭಟನಕಾರರನ್ನು ಚದುರಿಸಿದ ಬಳಿಕ ಸುಮಾರು ಆರು ಸಾವಿರದಷ್ಟಿದ್ದ ಈ ಉದ್ರಿಕ್ತ ಗುಂಪು ಕುದ್ರೋಳಿ ವ್ಯಾಪ್ತಿಯಲ್ಲಿ ಜಮಾವಣೆಗೊಂಡು ಮಾರಕಾಸ್ತ್ರಗಳೊಂದಿಗೆ ನಾರ್ತ್‌ ಪೋಲಿಸ್‌ ಠಾಣೆ ಮೇಲೆ ದಾಳಿ ನಡೆಸಿದರು. ಠಾಣೆಯಲ್ಲಿದ್ದ ಪೊಲೀಸ್‌ ಅಧಿಕಾರಿ, ಸಿಬಂದಿ ಮೇಲೆ ತೀವ್ರ ಹಲ್ಲೆ ನಡೆಸಿದರು. ಇದರಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ.

ಸಮುದಾಯದ ನಾಯಕರು ಮನವಿ ಮಾಡಿದರೂ ಕೇಳದೇ ಇದ್ದಾಗ ಕೊನೆಯ ಪ್ರಯತ್ನವಾಗಿ ಗಾಳಿಯಲ್ಲಿ 2 ಸುತ್ತು ಗುಂಡು ಹಾರಿಸಲಾಯಿತು. ಅದಕ್ಕೂ ಬಗ್ಗದ ಉದ್ರಿಕ್ತ ಗುಂಪು ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರಿಂದ ಅನ್ಯ ಮಾರ್ಗವಿಲ್ಲದೆ ಸ್ಥಳದಲ್ಲಿದ್ದ ಪೊಲೀಸರು ಬಲಪ್ರಯೋಗ ನಡೆಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

ದ.ಕ. ಶಾಂತ; ಕಾನೂನು ಸುವ್ಯವಸ್ಥೆ ಪಾಲನೆಗೆ ಎಸ್‌ಪಿ ಮನವಿ
ಮಂಗಳೂರು: ನಗರ ಹೊರತುಪಡಿಸಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಂತ ಪರಿಸ್ಥಿತಿ ನೆಲೆಸಿದೆ. ಮುಂಜಾಗ್ರತೆಯ ಕ್ರಮವಾಗಿ ಸೆಕ್ಷನ್‌ 144ರ ಅನ್ವಯ ಡಿಸೆಂಬರ್‌ 21ರ ಮಧ್ಯರಾತ್ರಿಯ ತನಕ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ. ಡಿ.20ರಂದು ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮದ್ಯದಂಗಡಿ ಮತ್ತು ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳನ್ನು ಮುಚ್ಚಲು ಆದೇಶ ಹೊರಡಿಸಲಾಗಿದೆ.

ಇದರ ಹೊರತಾಗಿ ಶುಕ್ರವಾರ ಡಿ.20ರಂದು ಜಿಲ್ಲೆಯಲ್ಲಿ ಸರಕು ಸಾಗಾಟ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಆದ್ದರಿಂದ ಸಾರ್ವಜನಿಕರು ವಾಹನಗಳ ಓಡಾಟವನ್ನು ಆದಷ್ಟು ಕಡಿಮೆಗೊಳಿಸಿ ಜಿಲ್ಲಾಡಳಿತದೊಂದಿಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು ಎಂದು ಜಿಲ್ಲಾ ಎಸ್‌ಪಿ ಲಕ್ಷ್ಮೀಪ್ರಸಾದ್‌ ಮನವಿ ಮಾಡಿದ್ದಾರೆ.

ನಗರ ಹೊರವಲಯದ ಉಳ್ಳಾಲದಲ್ಲಿ ಬಿಗಿ ಬಂದೋಬಸ್ತ್
ಉಳ್ಳಾಲ: ಪೌರತ್ವ ತಿದ್ದುಪಡಿ ಕಾಯಿದೆ ವಿಚಾರದಲ್ಲಿ ಜಿಲ್ಲೆಯಾದ್ಯಂತ ನಿಷೇದಾಜ್ಞೆ ಮತ್ತು ನಗರದಲ್ಲಿ ನಡೆಯುತ್ತಿರುವ ಹಿಂಸಾಚಾರ ಹಿನ್ನಲೆಯಲ್ಲಿ ಉಳ್ಳಾಲ ಮತ್ತು ಕೊಣಾಜೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ನೂರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

ಉಳ್ಳಾಲ ಮತ್ತು ಕೊಣಾಜೆ ಠಾಣಾ ವ್ಯಾಪ್ತಿಯ ಸೂಕ್ಷ್ಮ ಪ್ರದೇಶಗಳಲ್ಲಿ ಚೆಕ್‌ ಪಾಯಿಂಟ್‌ ಹಾಕಲಾಗಿದ್ದು ಪೊಲೀಸ್‌ ಭದ್ರತೆ ಮಾಡಲಾಗಿದೆ.

ಅಂಗಡಿ ಬಂದ್‌
ತೊಕ್ಕೊಟ್ಟು ಪ್ರದೇಶದಲ್ಲಿ ಕೆಲವು ಅಂಗಡಿ ಮಾಲಕರು ಸಂಜೆ ವೇಳೆಗೆ ಸ್ವಯಂ ಆಗಿ ಅಂಗಡಿಗಳನ್ನು ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು. ತೊಕ್ಕೊಟ್ಟು, ಸ್ಮಾರ್ಟ್ಸ್ ಸಿಟಿಯಲ್ಲಿ ಅಂಗಡಿಗಳನ್ನು ಮುಚ್ಚಿ ವ್ಯಾಪಾರಸ್ಥರು ಮಂಗಳೂರಿನಲ್ಲಿ ನಡೆಯುತ್ತಿರುವಘಟನೆಗೆ ಪ್ರತಿಭಟನೆ ನಡೆಸಿದರು. ಉಳಿದಂತೆ ಅಪರಾಹ್ನ ಜನಸಂಚಾರ ವಿರಳವಾಗಿತ್ತು.

ಸುರತ್ಕಲ್‌: ಬಿಗಿ ಭದ್ರತೆ
ಸುರತ್ಕಲ್‌: ಮಂಗಳೂರು ಘಟನೆಯ ಹಿನ್ನೆಲೆಯಲ್ಲಿ ಸುರತ್ಕಲ್‌, ಕಾಟಿಪಳ್ಳ ಪ್ರದೇಶದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಪೊಲೀಸರು ಸೂಕ್ಷ್ಮ ಪ್ರದೇಶದಲ್ಲಿ ಸರ್ಪಗಾವಲು ಏರ್ಪಡಿಸಿದ್ದು, ಗಾಳಿ ಸುದ್ದಿ, ಸಾಮಾಜಿಕ ಜಾಲತಾಣದ ಸುಳ್ಳು ಸುದ್ದಿಗಳಿಗೆ ಕಿವಿಗೊಡದೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.

ಕೊಡಗಿನಲ್ಲಿ ನಾಳೆಯವರೆಗೆ ನಿಷೇಧಾಜ್ಞೆ
ಮಡಿಕೇರಿ: ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಡಿ. 21ರ ಮಧ್ಯರಾತ್ರಿ 12 ಗಂಟೆಯವರೆಗೆ ಕೊಡಗು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಆದೇಶ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next