Advertisement

ಪ್ರತಿಯೊಬ್ಬರೂ ಕಾಯಕ ಪ್ರಜ್ಞೆ ಮೈಗೂಡಿಸಿಕೊಳ್ಳಿ

05:56 PM Jun 13, 2022 | Team Udayavani |

ಚಿತ್ರದುರ್ಗ: ಆಧುನಿಕ ಜಗತ್ತಿನಲ್ಲಿ ಒತ್ತಡ ಅನಿವಾರ್ಯವಾಗಿದ್ದು, ಎಲ್ಲರೂ ಪರಿಶ್ರಮದ ಮೂಲಕ ಹೆಚ್ಚು ಬೆವರು ಹರಿಸಿ ಆರೋಗ್ಯ ಹಾಗೂ ಆಯಸ್ಸನ್ನು ವೃದ್ಧಿಸಿಕೊಳ್ಳಬೇಕು ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಇಂಡಿಯಾನಾ ಎಸ್‌ಜೆಎಂ ಹಾರ್ಟ್‌ ಸೆಂಟರ್‌ ಸಹಯೋಗದಲ್ಲಿ ಆಯೋಜಿಸಿದ್ದ ಹೃದಯ ತಪಾಸಣಾ ಶಿಬಿರದ ಸಾನ್ನಿಧ್ಯ ವಹಿಸಿ ಮಾತನಾಡಿದರು.

Advertisement

ಕಾಯಕದ ಮೂಲಕ ಶರೀರಕ್ಕೆ ಬೀಳುವ ಒತ್ತಡವನ್ನು ಕಡಿಮೆ ಮಾಡಬಹುದಾಗಿದೆ. ಪತ್ರಕರ್ತರು ಹೆಚ್ಚು ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಇದರಿಂದ ಆಯಸ್ಸು ಕಡಿಮೆಯಾಗುತ್ತದೆ. ಜಪಾನೀಯರು ದಿನದಲ್ಲಿ 14ರಿಂದ 16 ಗಂಟೆ ಶ್ರಮದಾಯಕ ಕೆಲಸ ಮಾಡುವುದರಿಂದ ಅವರ ಆಯಸ್ಸು 100 ವರ್ಷ ದಾಟುತ್ತಿದೆ. ನಮ್ಮ ದೇಶದಲ್ಲಿ ಮನುಷ್ಯನ ಸರಾಸರಿ ಜೀವಿತಾವಧಿ 64 ವರ್ಷಗಳಷ್ಟಿದೆ. ಇಲ್ಲಿ ಶ್ರಮವೂ ಕಡಿಮೆಯಾಗಿದೆ ಎಂದರು.

ಕಾಯಕದಿಂದ ಮಾತ್ರ ಕೈಲಾಸ ಕಾಣಲು ಸಾಧ್ಯ. ಆದರೆ ಇಂದು ಬಹುತೇಕರು ಕಾಯಕ ಬಿಟ್ಟು ಕೈಲಾಸದ ಆಸೆಯನ್ನು ಮಾತ್ರ ಕಾಣುತ್ತಾರೆ. ಇಂದು ವೈದ್ಯಕೀಯ ತಂತ್ರಜ್ಞಾನ ಕೂಡ ಮುಂದುವರೆದಿದೆ. ಯಾವುದೇ ರೋಗಕ್ಕೂ ಚಿಕಿತ್ಸೆ, ಆಪರೇಷನ್‌ ಸಿಗುತ್ತಿದೆ. ಇದೇ ವೇಳೆ ಚಿತ್ರದುರ್ಗದಲ್ಲಿ ಬಸವೇಶ್ವರ ಆಸ್ಪತ್ರೆಯನ್ನೂ ಮೇಲ್ದರ್ಜೆಗೇರಿಸಲಾಗಿದೆ. ತುರ್ತು ಚಿಕಿತ್ಸೆಗಳು ಇಲ್ಲಿ ಲಭ್ಯವಿವೆ. ಚಿತ್ರದುರ್ಗದ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕಿದೆ.

ಇದರ ಹೊರತು ಮೆಡಿಕಲ್‌ ಕಾಲೇಜು ತೆರೆಯುವುದರಿಂದ ಭಾರೀ ಬದಲಾವಣೆಗಳೇನು ಆಗುವುದಿಲ್ಲ. ಮೆಡಿಕಲ್‌ ಕಾಲೇಜು ಬಂದರೆ 200 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಆದರೆ ಆಸ್ಪತ್ರೆ ಮೇಲ್ದರ್ಜೆಗೇರಿದರೆ ಸಾವಿರಾರು ರೋಗಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಮಾತನಾಡಿ, ಇಂದಿನ ಜೀವನ ಪದ್ಧತಿಯಲ್ಲಿ ಎಲ್ಲರೂ ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು.

ಆರೋಗ್ಯದಲ್ಲಿನ ಸಣ್ಣ ಪ್ರಮಾಣದ ನಿರ್ಲಕ್ಷ ಕೂಡ ದೊಡ್ಡ ಆಪತ್ತು ತಂದೊಡ್ಡಬಹುದು. ತಂತ್ರಜ್ಞಾನ ಮುಂದುವರೆದಿದೆ. ನಮ್ಮ ದೇಶದ ವೈದ್ಯರು ಸಾಕಷ್ಟು ಬುದ್ಧಿವಂತರಾಗಿದ್ದಾರೆ. ಈ ಹಿಂದೆ ವಿದೇಶಗಳಿಗೆ ಹೋಗಿ ಚಿಕಿತ್ಸೆ ಪಡೆಯಬೇಕಾಗಿತ್ತು. ಆದರೆ ಇಂದು ಅತ್ಯಾಧುನಿಕ ಚಿಕಿತ್ಸೆ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಲಭ್ಯವಾಗುತ್ತಿದೆ ಎಂದು ತಿಳಿಸಿದರು.

Advertisement

ಹೃದಯ ತಜ್ಞ ಡಾ| ಕಾರ್ತಿಕ್‌ ಮಾತನಾಡಿ, ಸದ್ಯದ ಪರಿಸ್ಥಿತಿಯಲ್ಲಿ ಶೇ. 40ರಿಂದ 60ರಷ್ಟು ಸಾವು ಹೃದಯಕ್ಕೆ ಸಂಬಂಧಿ ಸಿಯೇ ಇರುತ್ತದೆ. ರೋಗ ಬಂದಾಗ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬರುವುದಕ್ಕಿಂತ ಮುಂಚೆಯೇ ಚಿಕಿತ್ಸೆ ಅಥವಾ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡಿದರು.

ಪತ್ರಕರ್ತರ ಸಂಘದ ಉಪಾಧ್ಯಕ್ಷ ತಿಪ್ಪೇಸ್ವಾಮಿ ನಾಕೀಕೆರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವೇಶ್ವರ ಆಸ್ಪತ್ರೆಯ ಡೀನ್‌ ಡಾ| ಪ್ರಶಾಂತ್‌, ಇಂಡಿಯಾನ ಎಸ್‌.ಜೆ.ಎಂ ಹಾರ್ಟ್‌ ಸೆಂಟರ್‌ನ ಸಿಇಒ ರೂಪೇಶ್‌ ಶೆಟ್ಟಿ, ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್‌ ಗೌಡಗೆರೆ, ಪ್ರಧಾನ ಕಾರ್ಯದರ್ಶಿ ಎಸ್‌. ಸಿದ್ದರಾಜು, ಖಜಾಂಚಿ ಕುಮಾರಸ್ವಾಮಿ ವೇದಿಕೆಯಲ್ಲಿದ್ದರು. ಪತ್ರಕರ್ತ ರವಿ ಉಗ್ರಾಣ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ಪತ್ರಕರ್ತ ಅಂಜಿನಪ್ಪ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು.

ಸರ್ಕಾರಿ ಸೌಲಭ್ಯ ಸದ್ಬಳಕೆಯಾಗಲಿ
ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ದೇಶದ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಸರ್ಕಾರದ ಸೌಲಭ್ಯಗಳನ್ನು ಜನತೆ ಬಳಕೆ ಮಾಡಿಕೊಳ್ಳಬೇಕು. ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಖರ್ಚು ಮಾಡುತ್ತಿದೆ. ಇದರೊಟ್ಟಿಗೆ ಎಲ್ಲರಿಗೂ ಆರೋಗ್ಯ ವಿಮೆ ಮಾಡಿಸಿದರೆ ಹೆಚ್ಚು ಅನುಕೂಲವಾಗಲಿದೆ. ಚಿತ್ರದುರ್ಗದಲ್ಲಿ ಶೀಘ್ರದಲ್ಲೇ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭವಾಗಲಿದೆ. ಇದರಿಂದ ಜಿಲ್ಲೆಯ ಜನತೆಗೆ
ಅನುಕೂಲವಾಗಲಿದೆ ಎಂದು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next