Advertisement
ಚುನಾವಣೆಗೆ ಸ್ಪರ್ಧಿಸಲು ಸುಪ್ರೀಂ ಗ್ರೀನ್ ಸಿಗ್ನಲ್ ಕೊಟ್ಟ ಬೆನ್ನಲ್ಲೇ ಕೇಸರಿ ಪಾಳಯಕ್ಕೆ ಜಾರಿದ ಕೆ.ಸಿ.ನಾರಾಯಣಗೌಡರು ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆಯಾದರು. ನಂತರದಲ್ಲಿ ದೇವೇಗೌಡರ ಮಾನಸಪುತ್ರರೆಂದೇ ಗುರುತಿಸಲ್ಪಟ್ಟಿರುವ ಜಿಪಂ ಸದಸ್ಯ ಬಿ.ಎಲ್.ದೇವರಾಜು ಅವರನ್ನು ಜೆಡಿಎಸ್ ತನ್ನ ಅಭ್ಯರ್ಥಿಯಾಗಿ ಅಖಾಡಕ್ಕಿಳಿಸಿದರೆ, ಸಂಜೆಯ ವೇಳೆಗೆ ಕಾಂಗ್ರೆಸ್ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅವರಿಗೆ ಮತ್ತೆ ಟಿಕೆಟ್ ನೀಡಿ ಕಣಕ್ಕಿಳಿಸಿದೆ.
Related Articles
Advertisement
ತವರಿನ ಉಡುಗೊರೆ: ಜಿಲ್ಲೆಯಲ್ಲಿ ಕಮಲವನ್ನು ಅರಳಿಸಿ ಯಡಿಯೂರಪ್ಪಅವರಿಗೆ ತವರಿನ ಉಡುಗೊರೆ ನೀಡುವ ಜೊತೆಯಲ್ಲೇ ಕೆ.ಆರ್.ಪೇಟೆಗೆ ಮಂತ್ರಿಸ್ಥಾನ ಪಡೆದುಕೊಂಡು ಅಧಿಕಾರ ನಡೆಸುವ ಮಹತ್ವಾಕಾಂಕ್ಷೆಯನ್ನೂ ನಾರಾಯಣಗೌಡರು ಹೊಂದಿದ್ದಾರೆ. ಅದಕ್ಕಾಗಿ ಚುನಾವಣಾ ರಣತಂತ್ರ ರೂಪಿಸುವ ಸಿದ್ಧತೆಯಲ್ಲಿ ತೊಡಗಿದ್ದಾರೆ. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆ: ಒಂದೆಡೆ ಹ್ಯಾಟ್ರಿಕ್ ಸೋಲಿನಿಂದ ಹೊರಬರಲು ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಹೋರಾಟ ನಡೆಸುತ್ತಿದ್ದರೆ, ಮತ್ತೂಂದೆಡೆ ಬಿಜೆಪಿ ಅಭ್ಯರ್ಥಿಯಾಗಿ ಅಖಾಡದಲ್ಲಿರುವ ಕೆ.ಸಿ.ನಾರಾಯಣಗೌಡ ಸತತ ಮೂರನೇ ಬಾರಿಗೆ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ತಾಲೂಕಿನಲ್ಲಿ ಗೂಂಡಾಗಿರಿ ರಾಜಕಾರಣವನ್ನು ಅಂತ್ಯಗೊಳಿಸಿ ಕ್ಷೇತ್ರದಲ್ಲಿ ಶಾಂತಿ-ನೆಮ್ಮದಿ ನೆಲೆಸಲು ಮತ್ತೂಮ್ಮೆ ತಮ್ಮನ್ನು ಬೆಂಬಲಿಸುವಂತೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಒತ್ತಾಸೆಯಾಗಿ ನಿಲ್ಲುವಂತೆ ಮತದಾರ ಪ್ರಭುಗಳಲ್ಲಿ ಕೋರುತ್ತಿದ್ದಾರೆ.
ವಿಜಯೇಂದ್ರಗೆ ಸಚಿವ-ಶಾಸಕ ಸಾಥ್: ಜೆಡಿಎಸ್ ಅಭ್ಯರ್ಥಿ ಬಿ.ಎಲ್. ದೇವರಾಜು ಅವರಿಗೆ ದೇವೇಗೌಡರ ಪುತ್ರಿ ಡಾ.ಅನಸೂಯ ಮಂಜುನಾಥ್ ಪ್ರಚಾರಕ್ಕೆ ಬರುವ ಸಾಧ್ಯತೆಗಳಿವೆ. ಮುಖ್ಯಮಂತ್ರಿ ಯಡಿಯೂರಪ್ಪತಮ್ಮ ಪುತ್ರ ವಿಜಯೇಂದ್ರ ಅವರನ್ನು ಪ್ರಚಾರಕ್ಕೆ ಕಳುಹಿಸಿ ಹಾಸನ ಶಾಸಕ ಪ್ರೀತಂಗೌಡ ಮತ್ತು ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಜೊತೆಗೆ ಬಿಟ್ಟು ಶತಾಯಗತಾಯ ಕ್ಷೇತ್ರವನ್ನು ಗೆಲ್ಲಲು ಕಾರ್ಯತಂತ್ರ ರೂಪಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಸೋಲಿನಿಂದ ಹೊರಬರಲು ಅಳೆದು ಸುರಿದು ಲೆಕ್ಕಾಚಾರ ನಡೆಸಿ ಭಾರೀ ತಾಳ್ಮೆಯಿಂದಲೇ ಸಂಘಟಿತ ಹೋರಾಟಕ್ಕೆ ಇಳಿದಿದ್ದಾರೆ. ಅಸಮಾಧಾನಿತರನ್ನು ಸಮಾಧಾನಪಡಿಸಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ಸಜ್ಜಾಗುತ್ತಿದ್ದಾರೆ.
-ಮಂಡ್ಯ ಮಂಜುನಾಥ್