ಮೂರು ದಿನಗಳ ಕಾಲ ನಡೆದ ಕನ್ನಡ ಚಲನಚಿತ್ರ ಕಪ್‌ಗೆ (ಕೆಸಿಸಿ) ಸೋಮವಾರ ಅದ್ಧೂರಿ ತೆರೆಬಿದ್ದಿದೆ. ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಜಿ.ಪರಮೇಶ್ವರ್ ಸೇರಿದಂತೆ ಅನೇಕ ಗಣ್ಯರು ಸಮಾರೋಪ ಸಮಾರಂಭಕ್ಕೆ ಸಾಕ್ಷಿಯಾದರು. ಸದಾ ಸಿನಿಮಾ ಚಿತ್ರೀಕರಣ, ಸಿನಿಮಾ ಡಿಸ್ಕಶನ್ ಎಂದು ಬಿಝಿಯಾಗಿರುತ್ತಿದ್ದ ಸಿನಿಮಾ ತಾರೆಯರು ಮೂರು ದಿನಗಳ ಕಾಲ ಅವೆಲ್ಲವನ್ನು ಮರೆತು ಪಕ್ಕಾ ಪ್ರೊಫೆಶನಲ್ ಕ್ರಿಕೆಟರ್‌ಗಳ ತರಹ ಆಡಿದ್ದು ವಿಶೇಷವಾಗಿತ್ತು. ಬಿಸಿಲಿನ ಬೇಗೆಯ ನಡುವೆಯೂ ಪ್ರತಿಯೊಬ್ಬ ಆಟಗಾರರ ತಮ್ಮ ತಂಡವನ್ನು ಗೆಲ್ಲಿಸಲು ಪಣತೊಟ್ಟು ಆಡುವ ಮೂಲಕ ತಾವು ತೆರೆಮೇಲೆಯಷ್ಟೇ ಅಲ್ಲ, ಮೈದಾನದಲ್ಲೂ ಹೀರೋಗಳೇ ಎಂಬಂತೆ ಹಾಡಿದರು. ಕೆಸಿಸಿಗೆ ಕ್ರಿಕೆಟರ್‌ಗಳಾದ ಸುರೇಶ್ ರೈನಾ, ದಿಶ್ಯಾನ್, ರಾಬೀನ್ ಉತ್ತಪ್ಪ ಸೇರಿ ಮತ್ತಷ್ಟು ತುಂಬಿದರು
ಅಭಿಮಾನಿಗಳ ಸಂಭ್ರಮ
ಕೆಸಿಸಿಯ ಕೊನೆಯ ದಿನವಾದ ಸೋಮವಾರ ತಮ್ಮ ನೆಚ್ಚಿನ ನಟರನ್ನು ಮೈದಾನದಲ್ಲಿ ನೋಡಲು ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಜಮಾಯಿಸಿದ್ದರು. ಒಬ್ಬೊಬ್ಬ ನಟ ಬ್ಯಾಟ್ ಹಿಡಿದು ಮೈದಾನಕ್ಕೆ ಬಂದಾಗಲೂ ಕೇಕೆ, ಶಿಳ್ಳೆ ಮುಗಿಲು ಮುಟ್ಟುತ್ತಿತ್ತು. ಒಟ್ಟು ಆರು ತಂಡಗಳ ನಡುವೆ ನಡೆದ ರೋಚಕ ಪಂದ್ಯದಲ್ಲಿ ಅಂತಿಮ ಹಣಾಹಣಿಗೆ ಗಣೇಶ್ ನಾಯಕತ್ವದ ಗಂಗಾ ವಾರಿಯರ್ ಹಾಗೂ ಶಿವಣ್ಣ ನಾಯಕತ್ವದ ರಾಷ್ಟ್ರಕೂಟ ಪ್ಯಾಂಥರ್ ಬಂದುವು.
ಯಾರ ಮೇಲೆ ಯಾರ್ ಗೆದ್ರು
ಮೂರನೇ ದಿನ ಆರಂಭದಲ್ಲಿ ಗಂಗಾ ವಾರಿಯರ್ ಹಾಗೂ ಹೊಯ್ಸಳ ಈಗಲ್ಸ್ ನಡುವೆ ನಡೆದ ಪಂದ್ಯದಲ್ಲಿ ಗಂಗಾ ವಾರಿಯರ್ ಗೆಲುವಿನ ನಗೆ ಬೀರಿದರೆ, ಒಡೆಯರ್ ಚಾರ್ಜರ್ಸ್ ಹಾಗೂ ವಿಜಯ ನಗರ ಪೇಟ್ರಿಯಟ್ಸ್ ಪಂದ್ಯದಲಿ ಒಡೆಯರ್ ಚಾರ್ಜರ್ಸ್ ಗೆದ್ದು ಬೀಗಿತು. ಇನ್ನು ಕದಂಬ ಲಯನ್ಸ್ ಹಾಗೂ ರಾಷ್ಟ್ರಕೂಟ ಪ್ಯಾಂಥರ್ ನಡುವಿನ ಪಂದ್ಯಾಟಲ್ಲಿ ಶಿವಣ್ಣ ನಾಯಕತ್ವದ ರಾಷ್ಟ್ರಕೂಟ ಪ್ಯಾಂಥರ್ ಗೆದ್ದು ಫೈನಲ್ ಪ್ರವೇಶಿಸಿತು.
ಭರ್ಜರಿ ಫೈಟ್
ಅಂತಿಮ ದಿನವಾದ ಸೋಮವಾರ ಗಂಗಾ ವಾರಿಯರ್, ಹೊಯ್ಸಳ ಈಗಲ್ಸ್, ವಿಜಯ ನಗರ ಪೇಟ್ರಿಯಟ್ಸ್, ಒಡೆಯರ್ ಚಾರ್ಜರ್ಸ್, ಕದಂಬ ಲಯನ್ಸ್, ರಾಷ್ಟ್ರಕೂಟ ಪ್ಯಾಂಥರ್ ನಡುವೆ ಪಂದ್ಯಗಳು ನಡೆದವು. ಈ ಸೆಣಸಾಟದಲ್ಲಿ ಗಂಗಾ ವಾರಿಯರ್ ಹಾಗೂ ಶಿವಣ್ಣ ನಾಯಕತ್ವದ ರಾಷ್ಟ್ರಕೂಟ ಪ್ಯಾಂಥರ್ ನಡುವೆ ಅಂತಿಮ ಪಂದ್ಯ ನಡೆಯಿತು. ಕೊನೆಗೆ ಗಣೇಶ್ ನಾಯಕತ್ವದ ಗಂಗಾ ವಾರಿಯರ್ಸ್ ಗೆಲುವಿನ ನಗೆ ಬೀರಿತು
ಮನರಂಜನೆಗೂ ಮೋಸವಿಲ್ಲ
ಸಾಮಾನ್ಯವಾಗಿ ಕ್ರಿಕೆಟ್ ಮೈದಾನ ಎಂದರೆ ಅಲ್ಲಿ ಕೇಕೆ, ಶಿಳ್ಳೆಗಳೇ ಕೇಳುತ್ತವೆ. ಆದರೆ, ಕೆಸಿಸಿ ಕಪ್‌ನಲ್ಲಿ ಮಾತ್ರ ಅಭಿಮಾನಿಗಳ ಜೋಶ್ ಜೊತೆಗೆ ಮನರಂಜನೆಗೂ ಹೆಚ್ಚಿನ ಒತ್ತು ನೀಡಲಾಗಿತ್ತು. ಕೆಸಿಸಿಯ ಮೂರನೇ ದಿನದ ಪಂದ್ಯದಲ್ಲಿ ಆಲ್ ಓಕೆ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು. ನೂರಾರು ಮಕ್ಕಳು ಕರ್ನಾಟಕ ಸಂಸ್ಕೃತಿಯನ್ನು ಬಿಂಬಿಸುವ ಹಾಡಿಗೆ ಹೆಜ್ಜೆ ಹಾಕಿದರು
ಶಿವಣ್ಣ ಡ್ಯಾನ್ಸ್
ಅಭಿಮಾನಿಗಳ ಅಚ್ಚುಮೆಚ್ಚಿನ ನಾಯಕ ಶಿವರಾಜ್‌ಕುಮಾರ್ ಮೈದಾನದಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟುತ್ತಿತ್ತು. ಶಿವಣ್ಣ ಶಿವಣ್ಣ.. ಎಂಬ ಘೋಷಣೆ ಜೋರಾಗಿ ಕೇಳಿಬರುತ್ತಿತ್ತು. ಶಿವಣ್ಣ ಕೂಡಾ ತಮ್ಮ ಅಭಿಮಾನಿಗಳನ್ನು ರಂಜಿಸಲು ಮೈದಾನದಲ್ಲಿ ಒಂದೆರಡು ಸ್ಟೆಪ್ ಹಾಕಿ ಗಮನ ಸೆಳೆದರು