ಸುದೀಪ್ ನೇತೃತ್ವದಲ್ಲಿ ಶುರುವಾಗಿರುವ “ಕೆಸಿಸಿ ಟಿ-10′ (ಕರ್ನಾಟಕ ಚಲನಚಿತ್ರ ಕ್ರಿಕೆಟ್ ಕಪ್) ಮೊದಲ ಸೀಸನ್ ಯಶಸ್ವಿಯಾಗಿ ನಡೆದಿರುವುದು ನಿಮಗೆ ಗೊತ್ತೇ ಇದೆ. ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಕಲಾವಿದರು ಈ ಟೂರ್ನಮೆಂಟ್‌ನಲ್ಲಿ ಭಾಗವಹಿಸುವ ಮೂಲಕ ಆಟವನ್ನು ಯಶಸ್ವಿಗೊಳಿಸಿದ್ದರು. ಈಗ ಕೆಸಿಸಿಯ ಎರಡನೇ ಸೀಸನ್‌ಗೆ ತಯಾರಿ ನಡೆಯುತ್ತಿದೆ. ಸೆಪ್ಟೆಂಬರ್ ಎರಡನೇ ವಾರದಲ್ಲಿ ಕೆಸಿಸಿ- ಸೀಸನ್ 2 ಆರಂಭವಾಗಲಿದೆ.
ಕಳೆದ ಬಾರಿ ಕೆಸಿಸಿಯಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಿದ್ದು, ಕೆಪಿಎಲ್‌ನಲ್ಲಿ ಆಡಿರುವ ಆಟಗಾರರು ಕೂಡಾ ಕೆಸಿಸಿ ತಂಡದಲ್ಲಿದ್ದರು. ಆದರೆ, ಎರಡನೇ ಕೆಸಿಸಿಯ ಎರಡನೇ ಸೀಸನ್ ಸಾಕಷ್ಟು ವಿಶೇಷತೆಗಳಿಂದ ಕೂಡಿರಲಿದೆ. ಕಳೆದ ಬಾರಿ ಕೆಸಿಸಿ ಲಾಂಚ್ ದಿನ ಸುದೀಪ್, ಮುಂದಿನ ಪಂದ್ಯವನ್ನು ಇನ್ನಷ್ಟು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುವ ಆಸೆ ಇದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ನಡೆಸುವ ಕನಸು ಕಂಡಿದ್ದೇವೆ ಎಂದು ಹೇಳಿದ್ದರು.
ಈಗ ಅವರ ಕನಸು ಈಡೇರಿದೆ. ಮೂಲಗಳ ಪ್ರಕಾರ, ಕೆಸಿಸಿಯ ಎರಡನೇ ಸೀಸನ್ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಮೂಲಕ ಕೆಸಿಸಿ ಮತ್ತಷ್ಟು ವಿಸ್ತಾರವಾಗುತ್ತಿದೆ. ಕಳೆದ ಬಾರಿ ಸಿಸಿಎಲ್ ಹಾಗೂ ಕೆಪಿಎಲ್‌ನಲ್ಲಿ ಆಡಿರುವ ಆಟಗಾರರು ಕೆಸಿಸಿಯಲ್ಲಿ ಆಡಿದ್ದರು. ಆದರೆ, ಆ ಬಾರಿ ಆರು ಮಂದಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಆಟಗಾರರು ಕೆಸಿಸಿಯಲ್ಲಿ ಆಡಲಿದ್ದಾರೆನ್ನಲಾಗಿದೆ. ಈ ಬಗ್ಗೆ ಈಗಾಗಲೇ ಮಾತುಕತೆ ಕೂಡಾ ನಡೆದಿದೆ.
ಬ್ರಿಯಾನ್ ಲಾರಾ, ಹರ್ಷೆಲ್ ಗಿಬ್ಸ್ ಸೇರಿದಂತೆ ಇನ್ನೂ ಕೆಲವು ಅಂತರಾಷ್ಟ್ರೀಯ ಆಟಗಾರರು ಕೆಸಿಸಿಯಲ್ಲಿ ಆಡಲಿದ್ದಾರೆ. ಈ ಮೂಲಕ ಕೆಸಿಸಿ ಮತ್ತಷ್ಟು ಜನಪ್ರಿಯವಾಗುತ್ತಿರುವುದರಲ್ಲಿ ಎರಡು ಮಾತಿಲ್ಲ. ಕಳೆದ ಸೀಸನ್‌ನಲ್ಲಿ ಆರು ತಂಡಗಳಿದ್ದು, ಇಂದ್ರಜಿತ್ ಲಂಕೇಶ್, ಜಾಕ್ ಮಂಜು, ನಂದಕಿಶೋರ್, ಸದಾಶಿವ ಶೆಣೈ, ಕೆ.ಪಿ. ಶ್ರೀಕಾಂತ್, ಕೃಷ್ಣ ತಂಡದ ನಾಯಕರಾಗಿದ್ದರು. ಈ ತಂಡದಲ್ಲಿ ಚಿತ್ರರಂಗದ ಎಲ್ಲಾ ವಿಭಾಗದಲ್ಲೂ ಕೆಲಸ ಮಾಡುತ್ತಿರುವ ಅದರಲ್ಲೂ ಕ್ರಿಕೆಟ್‌ನಲ್ಲಿ ಆಸಕ್ತಿ ಇರುವವರು ಆಡಿದ್ದರು.
ಈ ಆರು ತಂಡಗಳಲ್ಲಿ ಪುನೀತ್‌ರಾಜ್‌ಕುಮಾರ್, ಶಿವರಾಜಕುಮಾರ್, ಸುದೀಪ್, ರಕ್ಷಿತ್‌ಶೆಟ್ಟಿ, ಯಶ್, ದಿಗಂತ್ ಅವರುಗಳು ಸ್ಟಾರ್ ಆಟಗಾರರಾಗಿದ್ದರು. ಈ ಸ್ಟಾರ್ ನಟರನ್ನು ಲಕ್ಕಿ ಡ್ರಾ ಮೂಲಕ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್‌ಕುಂಬ್ಳೆ ಅವರು ಆಯ್ಕೆ ಮಾಡಿದ್ದರು. ಇನ್ನು ಮೊದಲ ಸೀಸನ್‌ನ ನೆಲಮಂಗಲದಲ್ಲಿ ಮೈದಾನವೊಂದರಲ್ಲಿ ನಡೆದಿದ್ದು, ಶಿವರಾಜಕುಮಾರ್ ಅವರು ಸ್ಟಾರ್ ಆಟಗಾರರಾಗಿದ್ದ ವಿಜಯನಗರ ಪೇಟ್ರಿಯಾಟ್ಸ್ ತಂಡ “ಕೆಸಿಸಿ ಟಿ 10′ ಲೀಗ್‌ನ ಮೊದಲ ಬಾರಿಗೆ ಕಪ್ ಗೆದ್ದು ಚಾಂಪಿಯನ್ಸ್ ಎನಿಸಿಕೊಂಡಿತ್ತು.