ಬೆಂಗಳೂರು: ಕರ್ನಾಟಕ ರಣಜಿ ಆಟಗಾರ ಕೆ.ಸಿ ಕಾರಿಯಪ್ಪ ಅವರ ವಿರುದ್ದ ಯುವತಿಯೋರ್ವಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಕಾರಿಯಪ್ಪ ಕೂಡಾ ಪ್ರತಿ ದೂರು ದಾಖಲಿಸಿದ್ದಾರೆ.
ಕಾರಿಯಪ್ಪ ಅವರು ಬಗಲಗುಂಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರೆ, ಮಾಜಿ ಪ್ರಿಯತಮೆ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮದುವೆಯಾಗುವುದಾಗಿ ವಂಚಿಸಿದ್ದಾರೆ ಎಂದು ಕಾರಿಯಪ್ಪ ವಿರುದ್ಧ ಯುವತಿ ದೂರು ದಾಖಲಿಸಿದ್ದಾರೆ. ಒಂದೂವರೆ ವರ್ಷದ ಹಿಂದೆ ಬ್ರೇಕ್ ಅಪ್ ಮಾಡಿಕೊಂಡಿದ್ದೇನೆ ಎಂದು ಕಾರಿಯಪ್ಪ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
2018ರಲ್ಲಿ ಮದುವೆಯಾಗಿದ್ದು, 2020ರಲ್ಲಿ ಡಿವೋರ್ಸ್ ಆಗಿದೆ. ಒಂದೂವರೆ ವರ್ಷದ ಹಿಂದೆ ಕಾರಿಯಪ್ಪ ಪರಿಚಯವಾಗಿತ್ತು. ಇಬ್ಬರೂ ಪರಸ್ಪರ ಒಪ್ಪಿಕೊಂಡು ದೈಹಿಕ ಸಂಪರ್ಕ ಬೆಳಿಸಿ ನಂತರ ಗರ್ಭಪಾತವಾಯ್ತು. ಈ ಸಂಬಂಧ ದೂರು ದಾಖಲಾಗಿತ್ತು. ನಂತರ ಆರೋಪಿಯ ಮನವಿಯ ಮೇರೆಗೆ ದೂರು ಹಿಂಪಡೆಯಲಾಗಿತ್ತು. ಇದಾದ ಬಳಿಕ ಮದುವೆಯಾಗೋಣ ಎಂದು ಹೇಳಿ ಕಾರಿಯಪ್ಪ ನನ್ನ ಬಳಿ 2 ಲಕ್ಷ ರೂಪಾಯಿ ಪಡೆದುಕೊಂಡಿರುತ್ತಾರೆ. ನಂತರ ಆರೋಪಿ ಪೋಷಕರು ಮದುವೆಗೆ ವಿರೋಧಿಸುತ್ತಾರೆ. ಇದಾದ ಬಳಿಕ ಕಾರಿಯಪ್ಪ ಸಹ ಮದುವೆಯಾಗಲ್ಲ, ನಾನು ಹಣ ಪಡೆದುಕೊಂಡಿಲ್ಲ ಎಂದು ಹಲ್ಲೆಗೈದು ಅವಾಚ್ಯ ಪದಗಳಿಂದ ನಿಂದಿಸಿ ಬೆದರಿಕೆ ಹಾಕಲಾಗಿದೆ ಎಂದು ಯುವತಿ ದೂರಿನಲ್ಲಿ ಹೇಳಿದ್ದಾರೆ.
ಕಾರಿಯಪ್ಪ ಅವರು ಪ್ರತಿ ದೂರು ದಾಖಲಿಸಿದ್ದು, ನಿನ್ನ ಕ್ರಿಕೆಟ್ ವೃತ್ತಿಜೀವನವನ್ನು ಹಾಳು ಮಾಡುತ್ತೇನೆ. ನಿನ್ನ ಹೆಸರು ಬರೆದಿಟ್ಟು ಸಾಯುತ್ತೇನೆ ಮತ್ತು ನಿನ್ನ ಬಗ್ಗೆ ಕೆಟ್ಟದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಹಾಕುತ್ತೇನೆ ಎಂದು ಬೆದರಿಕೆ ಹಾಕುತ್ತಾಳೆ. ಮಾನಸಿಕ ಹಿಂಸೆ ನೀಡುತ್ತಿದ್ದು, ಒಂದಲ್ಲ ಒಂದು ರೀತಿಯಲ್ಲಿ ಕಿರುಕುಳ ನೀಡಲಾಗುತ್ತದೆ ಎಂದು ಆರೋಪಿಸಿದ್ದಾರೆ.
ಅಲ್ಲದೆ ಮನೆಯೊಳಗೆ ಅತಿಕ್ರಮ ಪ್ರವೇಶ ಮಾಡಿ ಅವಾಚ್ಯ ಪದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದಾಳೆಂದು ಕಾರಿಯಪ್ಪ ಹೇಳಿದ್ದಾರೆ.
ಕರ್ನಾಟಕ ರಣಜಿ ತಂಡದ ಆಟಗಾರರಾಗಿರುವ ಕೆಸಿ ಕಾರಿಯಪ್ಪ ಅವರು, ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಆಡಿದ್ದಾರೆ.