ಸುರಪುರ: ಲೋಕೋಪಯೋಗಿ ಮತ್ತು ಕೆಬಿಜೆಎನ್‌ಎಲ್ ಇಲಾಖೆ ಅಡಿ ಕೈಗೊಂಡಿರುವ ಕಾಮಗಾರಿಗಳ ಕುರಿತು ತನಿಖೆ ಆಗುವವರೆಗೆ ಗುತ್ತಿಗೆದಾರರ ಬಿಲ್ ತಡೆ ಹಿಡಯಬೇಕು ಎಂದು ಆಗ್ರಹಿಸಿ ದಲಿತ ಹಿಂದುಳಿದ ಮತ್ತು ಶೋಷಿತರ ಒಕ್ಕೂಟದ ಮುಖಂಡರು ರಾಜಾ ನಾಲ್ವಡಿ ವೆಂಕಟಪ್ಪ ನಾಯಕ ವೃತ್ತದ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು ರಸ್ತೆ ತಡೆಯಿಂದ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ದೂರದ ಪ್ರಯಾಣಿಕರು ಸಡು ಬಿಸಿಲು ಧಗೆಗೆ ತೊಂದರೆ ಅನುಭವಿಸಿದರು. ಪೊಲೀಸರ ಮಧ್ಯಸ್ಥಿಕೆಯಿಂದ ರಸ್ತೆ ತಡೆ ಕೈ ಬಿಟ್ಟು ಪ್ರತಿಭಟನೆ ಮುಂದುವರೆಸಿದರು. ಹಲಗೆ ಬಾರಿಸಿ ಬೊಬ್ಬೆ ಹಾಕಿ ಇಲಾಖೆ ಮತ್ತು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಮಾತನಾಡಿ, ಲೋಕೋಪಯೋಗಿ ಮತ್ತು ಕೆಬಿಜೆಎನ್‌ಎಲ್ ಇಲಾಖೆ ಕಾಮಗಾರಿ ಗಳಲ್ಲಿ ವ್ಯಾಪಕವಾದ ಭ್ರಷ್ಟಾಚಾರ ನಡೆಯುತ್ತಿದೆ ಅಧಿಕಾರಿಗಳು ಶಾಸಕ ಸಚಿವರ ಹೆಸರೇಳಿ ಪ್ರತಿ ಕಾಮಗಾರಿಗೆ ಕಮೀಷನ್ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಶಾಸಕರು, ಸಚಿವರು ಸೂಚಿಸುವವರಿಗೆ ಮಾತ್ರ ಕಾಮಗಾರಿ ವಹಿಸುವ ಕೆಟ್ಟ ವ್ಯವಸ್ಥೆ ಜಾರಿಯಲ್ಲಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸೇರಿ ಕಮೀಷನ್ ವಸೂಲಿ ಮಾಡುತ್ತಿದ್ದಾರೆ ಎಸ್ಸಿ-ಎಸ್ಟಿ ಜನಾಂಗಕ್ಕೆ ಮೀಸಲಾಗಿರುವ ಅನುದಾನದಲ್ಲಿ ಕಾಮಗಾರಿ ಮಾಡದೆ ಬೋಕಸ್ ಬಿಲ್ ಎತ್ತಿ ಹಾಕಲಾಗುತ್ತಿದೆ ಎಂದು ದೂರಿದರು.
ಎರಡು ಇಲಾಖೆಗಳ ಕಾಮಗಾರಿಗಳ ಕುರಿತು ತನಿಖೆ ಮಾಡಿಸಬೇಕು. ಕಮೀಷನ್ ದಂಧೆಗೆ ಕಡಿವಾಣ ಹಾಕಬೇಕು. ತಪಿತಸ್ಥರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಅಕ್ರಮ ಎಸಗಿರುವ ಗುತ್ತಿಗೆದಾರರ ಪರವಾನಗಿ ಕಪ್ಪು ಪಟ್ಟಿಗೆ ಸೇರಿಸಬೇಕು ಮತ್ತು ತನಿಖೆ ಮುಗಿಯುವವರೆಗೆ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಬಾರದು ನಿರ್ಲಕ್ಷ್ಯ ವಹಿಸಿದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಪ್ರಮುಖರಾದ ನಾಗಣ್ಣ ಕಲ್ಲದೇವನಳ್ಳಿ, ರಾಜು ದರಬಾರಿ, ಕೃಷ್ಣಾ ಕಕ್ಕೇರಾ, ಬಸು ಗುತ್ತೇದಾರ, ಬಸವರಾಜ ಬೊಮ್ಮನಳ್ಳಿ, ಶಿವಶಂಕರ ಹೊಸಮನಿ, ಕೇಶವ ನಾಯಕ, ರಾಮು ನಾಯಕ, ದೇವಪ್ಪ ರತ್ತಾಳ, ಗಣೇಶ ಇದ್ದರು.