Advertisement

ಪಠ್ಯದಲ್ಲಿ ಕಯ್ಯಾರ ಹೆಸರು ಮರುಸೇರ್ಪಡೆಗೆ ಬಂಟರ ಯಾನೆ ನಾಡವರ ಮಾತೃಸಂಘ ಆಗ್ರಹ

02:08 AM Jun 30, 2022 | Team Udayavani |

ಮಂಗಳೂರು: ಕವಿ, ಸಾಹಿತಿ, ಗಡಿನಾಡು ಕಾಸರಗೋಡಿನ ಚಳವಳಿಗಾರ ಡಾ| ಕಯ್ಯಾರ ಕಿಞ್ಞಣ್ಣ ರೈ ಅವರ ಹೆಸರನ್ನು 7ನೇ ತರಗತಿಯ ಸಮಾಜವಿಜ್ಞಾನ ಪಠ್ಯಪುಸ್ತಕದ “ಕರ್ನಾಟಕ ಏಕೀಕರಣ ಹಾಗೂ ಗಡಿ ವಿವಾದಗಳು’ ಪಾಠದಿಂದ ಕೈಬಿಟ್ಟು ಸರಕಾರ ಅವರಿಗೆ ಅಗೌರವ ಮತ್ತು ಬಂಟ ಸಮುದಾಯಕ್ಕೆ ಅವಮಾನ ಮಾಡಿದೆ ಎಂದು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಮಾಲಾಡಿ ಅಜಿತ್‌ ಕುಮಾರ್‌ ರೈ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದು, ಹೆಸರನ್ನು ಮರು ಸೇರ್ಪಡೆ ಗೊಳಿಸಬೇಕು ಎಂದರು.

Advertisement

ಕಯ್ಯಾರರು ಬಹುಭಾಷಾ ವಿದ್ವಾಂಸರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳವಳಿಯ ಮುಂಚೂಣಿ ನಾಯಕ ರಾಗಿ, ಕಾಸರಗೋಡು ವಿಲೀನೀಕರಣ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕರಾಗಿ ದುಡಿದ್ದಾರೆ. ಕಾಸರಗೋಡು ಕರ್ನಾಟಕಕ್ಕೆ ಸೇರ ಬೇಕೆಂಬ ಮಹೋನ್ನತ ಉದ್ದೇಶದಿಂದ ಬದುಕನ್ನು ಅದಕ್ಕಾಗಿ ಮುಡಿಪಾಗಿಟ್ಟಿದ್ದರು. ಅವರ ಅನನ್ಯ ಕೊಡುಗೆಯನ್ನು ಗುರುತಿಸಿ ಕರ್ನಾಟಕ ಸರಕಾರ ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ ನೀಡಿ ಗೌರವಿಸಿತ್ತು. ಆದರೆ ಸರಕಾರ ಪಠ್ಯದಿಂದ ಅವರ ಹೆಸರನ್ನು ತೆಗೆದು ಹಾಕಿರುವುದು ವಿಪರ್ಯಾಸ. ಇದರ ವಿರುದ್ಧ ಗ್ರಾಮ ಮಟ್ಟದಿಂದ ದೇಶವ್ಯಾಪಿ ಹೋರಾಟ ನಡೆಸಲಾಗುವುದು ಎಂದರು.

ಬಂಟರ ಯಾನೆ ನಾಡವರ ಮಾತೃಸಂಘದ ಉಪಾಧ್ಯಕ್ಷ ಎ. ಹೇಮನಾಥ ಶೆಟ್ಟಿ ಕಾವು, ಕೋಶಾಧಿಕಾರಿ ಕೃಷ್ಣ ಪ್ರಸಾದ್‌ ರೈ, ನಿಕಟಪೂರ್ವ ಕಾರ್ಯದರ್ಶಿ ವಸಂತ ಶೆಟ್ಟಿ, ನಿಕಟಪೂರ್ವ ಕೋಶಾಧಿಕಾರಿ ರವೀಂದ್ರನಾಥ್‌ ಶೆಟ್ಟಿ, ಕಯ್ನಾರ ಕಿಞ್ಞಣ್ಣ ರೈ ಅವರ ಪುತ್ರ ಡಾ| ಪ್ರಸನ್ನ ರೈ, ಎ.ಬಿ. ಶೆಟ್ಟಿ ಅವರ ಕುಟುಂಬಸ್ಥರಾದ ಲಕ್ಷ್ಮೀ ಎಸ್‌. ಶೆಟ್ಟಿ, ಸಿದ್ಧಾರ್ಥ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಎ.ಬಿ. ಶೆಟ್ಟಿ ವೃತ್ತ ಪುನರ್‌ ನಿರ್ಮಿಸಿ
ಮಂಗಳೂರಿನ ಎ.ಬಿ. ಶೆಟ್ಟಿ ವೃತ್ತವನ್ನು ಕೆಡವಿ ಅವರ ವ್ಯಕ್ತಿತ್ವಕ್ಕೆ ಅಗೌರವ ತೋರಿಸಲಾಗಿದೆ. ದೂರದೃಷ್ಟಿಯ ರಾಜಕೀಯ ಮುತ್ಸದ್ಧಿಯಾಗಿದ್ದ ಅವರು ಉತ್ತಮ ವೈದ್ಯಕೀಯ ಸವಲತ್ತು ಸೇರಿದಂತೆ ಕರಾವಳಿಯ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡಿದ್ದಾರೆ. ಸ್ವಾತಂತ್ರ್ಯ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಕಾರಾಗೃಹ ಶಿಕ್ಷೆ ಅನುಭವಿಸಿದ್ದರು. ಅವರ ಸ್ಮರಣಾರ್ಥ ದಶಕಗಳ ಹಿಂದೆ ನಿರ್ಮಿಸಿದ್ದ ವೃತ್ತವನ್ನು ಇತ್ತೀಚೆಗೆ ಸ್ಮಾರ್ಟ್‌ ಸಿಟಿ ಕಾಮಗಾರಿ ನೆಪದಲ್ಲಿ ನೆಲಸಮಗೊಳಿಸಲಾಗಿದೆ. ವೃತ್ತವನ್ನು ಶೀಘ್ರ ಮರು ನಿರ್ಮಾಣ ಮಾಡಿ ನಾಮಫ‌ಲಕ ಅಳವಡಿಸಬೇಕು ಎಂದು ಅಜಿತ್‌ ಕುಮಾರ್‌ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next