Advertisement

ಕಾವ್ಯಾ ಸಾವು: ಸಿಐಡಿ ತನಿಖೆಗೆ ಆಗ್ರಹಿಸಿ ಮೆರವಣಿಗೆ

11:06 AM Sep 24, 2017 | |

ಮಂಗಳೂರು: ಮೂಡಬಿದಿರೆ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾ ಸಾವು ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿ ಜಸ್ಟಿಸ್‌ ಫಾರ್‌ ಕಾವ್ಯಾ ಹೋರಾಟ ಸಮಿತಿ ವತಿಯಿಂದ ಶನಿವಾರ ನಗರದಲ್ಲಿ ಮೆರವಣಿಗೆ ಮತ್ತು ಪ್ರತಿಭಟನ ಸಭೆ ನಡೆಯಿತು.

Advertisement

ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ  ಮಾತನಾಡಿದ ಜಸ್ಟಿಸ್‌ ಫಾರ್‌ ಕಾವ್ಯಾ ಹೋರಾಟ ಸಮಿತಿಯ ಸಂಚಾಲಕ ದಿನಕರ್‌ ಶೆಟ್ಟಿ  ಅವರು, ವಿದ್ಯಾರ್ಥಿನಿ ಕಾವ್ಯಾ ಸಾವು ನಡೆದು 60 ದಿನ ಕಳೆದರೂ ತನಿಖೆಯ ವರದಿಯನ್ನು ಇನ್ನೂ ಅಧಿಕಾರಿಗಳು ಬಹಿರಂಗಪಡಿಸುತ್ತಿಲ್ಲ. ಈ ಹಿಂದೆ ಹೋರಾಟ ಸಮಿತಿ ಜಿಲ್ಲಾ ಬಂದ್‌ಗೆ ಕರೆ ನೀಡಲು ನಿರ್ಧರಿಸಿದ್ದಾಗ ಅಧಿಕಾರಿಗಳು ಶೀಘ್ರ ತನಿಖೆ ನಡೆಸಿ ವರದಿ ನೀಡುವುದಾಗಿ ಭರವಸೆ ನೀಡಿದ ಕಾರಣ ಹಿಂಪಡೆಯಲಾಗಿತ್ತು. ಆದರೆ ಈವರೆಗೆ ಹೋರಾಟಗಾರರಿಗೆ ನ್ಯಾಯ ಸಿಕ್ಕಿಲ್ಲ. ಕಾವ್ಯಾ ಪ್ರಕರಣ ಸಿಐಡಿಗೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿದರು.

ಕಾವ್ಯಾ ಸಾವಿನ ವಿಚಾರದಲ್ಲಿ ಆಡಳಿತ ನಿರ್ಲಕ್ಷ್ಯ ತೋರಿದ್ದು, ಇದು ಅಮಾನವೀಯ. ಶೈಕ್ಷಣಿಕ ವಲಯದಲ್ಲಿ ಆಘಾತಕಾರಿಯಾಗಿದೆ. ಎಲ್ಲ ವರದಿಗಳು ಬಂದರೂ ಕೂಡ ಸತ್ಯಾಂಶ ಹೊರಗೆ ಹಾಕದೆ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದ ಅವರು ಮಕ್ಕಳ ಹಕ್ಕುಗಳ ಆಯೋಗ ನೀಡಿದ ವರದಿಯನ್ನು ಕೂಡಲೇ ಜಾರಿ ಮಾಡಿ, ಕಾವ್ಯಾ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕೆಂದರು.

ಸಾಮಾಜಿಕ ಕಾರ್ಯಕರ್ತ ರಾಬರ್ಟ್‌ ರೊಜಾರಿಯೊ, ಸರ್ವಕಾಲೇಜು ವಿದ್ಯಾರ್ಥಿ ಸಂಘದ ನಾಯಕ ಶಾಶ್ವತ್‌ ಕೊಟ್ಟಾರಿ, ದಲಿತ ಸಂಘಟನೆಗಳ ಪರವಾಗಿ ನಿರ್ಮಲ್‌ ಕುಮಾರ್‌, ರಘುವೀರ್‌ ಸೂಟರ್‌ಪೇಟೆ ಮಾತನಾಡಿದರು.

ವಿವಿಧ ಸಂಘಟನೆಗಳ ನಾಯಕರಾದ ಜನಾರ್ದನ ಅರ್ಕುಳ, ಪ್ರಮೋದ್‌ ಕುಮಾರ್‌ ಅಳಪೆ, ನದೀಂ ಅಹಮದ್‌, ರೋಶನ್‌, ಜಲೀಲ್‌, ಆ್ಯಸ್ಟರ್‌ ಲೋಬೊ, ಟಿಪೇಶ್‌ ಅಮೀನ್‌ ಶೈಲೇಶ್‌, ಹರೀಶ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

ಅರೆಬೆತ್ತಲೆ ಮೆರವಣಿಗೆಗೆ
ನಿರಾಕರಣೆ, ಬಂಧನ, ಬಿಡುಗಡೆ

ಅರೆ ಬೆತ್ತಲೆ ಮೆರವಣಿಗೆ ನಡೆಸುವುದಾಗಿ ಕಾವ್ಯಾ ಹೋರಾಟ ಸಮಿತಿಯು ಈ ಹಿಂದೆ ತಿಳಿಸಿದ್ದರೂ ಅಂತಹ ಮೆರವಣಿಗೆ ನಡೆಸಲು ಪೊಲೀಸರು ಅನುಮತಿಯನ್ನು ನಿರಾಕರಿಸಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನಾ ಜಾಥಾ ಹೊರಡುವ ಹಂಪನಕಟ್ಟೆ  ಸರ್ಕಲ್‌ನಲ್ಲಿ ಹೋರಾಟಗಾರರು, ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಬಳಿಕ ಹೋರಾಟಗಾರರು ಜಿಲ್ಲಾ ಕಾರಿ ಕಚೇರಿಯತ್ತ ಹೊರಟರು. ಮೆರವಣಿಗೆ ಎ.ಬಿ. ಶೆಟ್ಟಿ ಸರ್ಕಲ್‌ ತಲುಪುತ್ತಿದ್ದಂತೆ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಅನಿಲ್‌ದಾಸ್ತ್ ಅರೆಬೆತ್ತಲೆ  ಪ್ರತಿಭಟನೆಗೆ ಯತ್ನಿಸಿದಾಗ ಪೊಲೀಸರು ವಶಕ್ಕೆ ಪಡೆದರು. ಅರೆ ಬೆತ್ತಲೆಯಾಗಲು ಯತ್ನಿಸಿದ ಅನಿಲ್‌ದಾಸ್‌, ವಿವೇಕ್‌, ಅಭಿಲಾಷ್‌, ಮಧುಸೂದನ ಗೌಡ, ಜೀವನ್‌ ನೀರುಮಾರ್ಗ, ತೇಜಸ್‌ ಅವರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಲಾಗಿದೆ. ಇವರನ್ನು ಪೊಲೀಸ್‌ ವಾಹನಕ್ಕೆ ಹತ್ತಿಸುವಾಗ ಕಾವ್ಯಾ ತಾಯಿ ಬೇಬಿ, ತಂದೆ ಲೋಕೇಶ್‌ ಗೌಡ, ಸೋದರಿ ರಮ್ಯಾ ಮತ್ತು ಶ್ರೀಲತಾ ಎಂಬವರೂ ಜತೆಗೆ ಹೋಗಿದ್ದಾರೆ. ಆದರೆ ಈ ನಾಲ್ವರನ್ನು ವಶಕ್ಕೆ ಪಡೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next